ಅಜ್ಜಿ ಮನೆಯ ನೆನಪು ತಂದ ಮಕ್ಕಳ ಹಬ್ಬ : ಭಾಗೀರಥಿ ಮುರುಳ್ಯ
ಮೊಬೈಲ್ ಬಿಟ್ಟು ಸಹಜ ಬದುಕಿಗೆ ಮರಳಿದ ಮಕ್ಕಳು : ಎಸ್.ಆರ್. ಸತೀಶ್ಚಂದ್ರ
ಸುಳ್ಯದ ಮಕ್ಕಳ ಹಬ್ಬವು ಮಕ್ಕಳಿಗೆ ಅಜ್ಜಿ ಅನೆಯ ಅನುಭವ ನೀಡಿದೆ ಎಂದು ಶಾಸಕಿ ಭಾಗೀರಥಿ ಮುರುಳ್ಯ ಅಭಿಪ್ರಾಯ ಪಟ್ಟಿದ್ದಾರೆ.















ಆಧುನಿಕ ಕಾಲಘಟ್ಟದಲ್ಲಿ ಮಕ್ಕಳಿಗೆ ಪಠ್ಯ ಶಿಕ್ಷಣದ ಜೊತೆಗೆ ಸಂಸ್ಕಾರ, ನೈತಿಕ ಮೌಲ್ಯಗಳು ಹಾಗೂ ಜೀವನ ಕೌಶಲ್ಯ ಗಳನ್ನು ಕಲಿಸುವುದು ಅತ್ಯಗತ್ಯ. ಮಕ್ಕಳಲ್ಲಿರುವ ಸುಪ್ತ ಪ್ರತಿಭೆಗಳನ್ನು ಗುರುತಿಸಿ, ಅವುಗಳನ್ನು ಬೆಳೆಸಲು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಅರ್ಥಪೂರ್ಣ ಕಾರ್ಯಕ್ರಮ ಇದಾಗಿದೆ ಎಂದು ಅವರು ಹೇಳಿದರು.
ರಂಗ ಮಯೂರಿ ಕಲಾ ಶಾಲೆ ಸುಳ್ಯ, ಪ್ರಣವ ಸೌಹಾರ್ದ ಸಹಕಾರಿ ಸಂಘ ನಿ. ಹಾಗೂ ಸುದ್ದಿ ಸಮೂಹ ಸಂಸ್ಥೆಗಳ ಆಶ್ರಯದಲ್ಲಿ ಸುಳ್ಯದ ಅಮರ ಶ್ರೀಭಾಗ್ನ ಕುರುಂಜಿ ಜಾನಕಿ ವೆಂಕಟರಮಣ ಗೌಡ ಸಭಾಭವನದಲ್ಲಿ ಮೂರು ದಿನಗಳ ಕಾಲ ನಡೆದ ‘ಸಂಕಲ್ಪ ಮಕ್ಕಳ ಹಬ್ಬ’ದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಮುಖ್ಯ ಅತಿಥಿಗಳಾಗಿದ್ದ ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ ಮಾತನಾಡಿ, ಮೊಬೈಲ್ ಬಿಟ್ಟು ಮಕ್ಕಳ ಹಬ್ಬಕ್ಕೆ ಬಂದ ಮಕ್ಕಳು ತಮ್ಮ ಬಾಲ್ಯದ ಸಹಜ ಖುಷಿ ಅನುಭವಿಸಿದ್ದಾರೆ.
ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಪಠ್ಯಪುಸ್ತಕದ ಜ್ಞಾನವೊಂದೇ ಸಾಕಾಗುವುದಿಲ್ಲ. ಉತ್ತಮ ಸಂಸ್ಕಾರ, ನೈತಿಕ ಶಿಕ್ಷಣ, ಸಾಮಾಜಿಕ ಜವಾಬ್ದಾರಿ ಹಾಗೂ ಸೃಜನಶೀಲ ಚಟುವಟಿಕೆಗಳೂ ಅಗತ್ಯವಾಗಿವೆ. ಇಂತಹ ಕಾರ್ಯಕ್ರಮಗಳು ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುವುದರೊಂದಿಗೆ ತಮ್ಮಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸಲು ಉತ್ತಮ ವೇದಿಕೆಯಾಗುತ್ತವೆ ಎಂದರು.

ಪ್ರಣವ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಜಿ.ಆರ್. ಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ. ಯು.ಪಿ. ಶಿವಾನಂದ, ಹಿರಿಯ ಸಹಕಾರಿ
ನಿತ್ಯಾನಂದ ಮುಂಡೋಡಿ, ಉದ್ಯಮಿ ಗಣೇಶ್ ಕೋಡಿಬೈಲು, ವಿದ್ಯಾರ್ಥಿ ನಾಯಕರಾದ ಕೌಶಿಕ್ ಮತ್ತು ಮೋನಿಶ್ ಉಪಸ್ಥಿತರಿದ್ದರು.

ವಿಶೇಷ ಪ್ರತಿಭೆ ನಿಶ್ಮಿತಾ ಬಳ್ಳಡ್ಕ ಮತ್ತು ರಾಷ್ಟ್ರೀಯ ಕ್ರೀಡಾಪಟು ಬಾನವಿ ಅವರ ಪರವಾಗಿ ಅವರ ಪೋಷಕರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ದುರ್ಗಾಕುಮಾರ್ ನಾಯರ್ ಕೆರೆಯವರು ಸನ್ಮಾನಿತರ ಮಾಹಿತಿ ನೀಡಿದರು.

ಮಕ್ಕಳ ಹಬ್ಬದ ಸಂಯೋಜನೆಯಲ್ಲಿ ಮುಂಚೂಣಿಯಲ್ಲಿದ್ದ ಲೋಕೇಶ್ ಊರುಬೈಲು, ಯಶ್ವಿತ್ ಕಾಳಮ್ಮನೆ, ರಂಜಿತ್ ಅಡ್ತಲೆ ಅವರನ್ನು ಸನ್ಮಾನಿಸಲಾಯಿತು.
ಮೂರು ದಿನಗಳ ಮಕ್ಕಳ ಹಬ್ಬದ ಬಗ್ಗೆ ಲೋಕೇಶ್ ಊರುಬೈಲ್ ಅವಲೋಕನಗೈದರು. ಯಶ್ವಿತ್ ಕಾಳಮ್ಮನೆ ಸ್ವಾಗತಿಸಿದರು. ಶಿವಪ್ರಸಾದ್ ಆಲೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ರಂಜಿತ್ ಅಡ್ತಲೆ ವಂದಿಸಿದರು.







