ಸುಳ್ಯ ಮೆಸ್ಕಾಂ ಕಚೇರಿಯಲ್ಲಿ ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆಗೆ ಶಾಸಕರಾದ ಕು.ಭಾಗೀರಥಿ ಮುರುಳ್ಯರಿಂದ ಚಾಲನೆ

0

ಇಂದಿನಿಂದ ಮೂರು ದಿನಗಳವರೆಗೆ ನಡೆಯಲಿದೆ ಯೋಜನೆಯ ಬಗ್ಗೆ ಮಾಹಿತಿ ಅಭಿಯಾನ

ಸುಳ್ಯದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಪ್ರಧಾನ ಮಂತ್ರಿ ಸೂರ್ಯ ಘರ್ ಯೋಜನೆಗೆ ಸುಳ್ಯ ಮೆಸ್ಕಾಂ ಕಚೇರಿಯ ಆವರಣದಲ್ಲಿ ಅ 14 ರಂದು ಶಾಸಕರಾದ ಕುಮಾರಿ ಭಾಗೀರಥಿ ಮುರುಳ್ಯರವರು ದೀಪ ಬೆಳಗಿಸಿ ಚಾಲನೆಯನ್ನು ನೀಡಿದರು.

ಯೋಜನೆಯಡಿ ಗೃಹಬಳಕೆದಾರರ ಮನೆಯ ಛಾವಣಿಯಲ್ಲಿ ಸೌರಫಲಕಗಳನ್ನು ಸ್ಥಾಪಿಸುವ ಕುರಿತು ಜನರಲ್ಲಿ ಪ್ರಧಾನ ಮಂತ್ರಿ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಚಾಲನೆ‌ ನೀಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ‘ಪಿಎಂ ಸೂರ್ಯ ಘರ್ ಯೋಜನೆಯು ಆದಾಯ ಮತ್ತು ಉಳಿತಾಯದ ಮೂಲವಾಗಿದೆ. ಗ್ರಾಹಕರು ತಮ್ಮ ಮನೆಯ ಮೇಲೆ ಸೌರಘಟಕ ಸ್ಥಾಪಿಸಲು, ಪಿಎಂ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆ ಮೂಲಕ ಆಕರ್ಷಕ ಸಬ್ಸಿಡಿ ಸೌಲಭ್ಯ ಪಡೆಯಬಹುದಾಗಿದೆ. ಇದರಿಂದ ವಿದ್ಯುತ್ ಬಿಲ್ ಉಳಿತಾಯವಾಗಲಿದ್ದು, ಇದು ಪರಿಸರ ಸ್ನೇಹಿ ಯೋಜನೆಯು ಆಗಿದೆ. ಸೌರಶಕ್ತಿಯಿಂದ ಉತ್ಪಾದನೆಯಾಗುವ ಹೆಚ್ಚುವರಿ ವಿದ್ಯುತ್‌ ಅನ್ನು ಸೆಸ್ಕ್‌ ಗೆ ಮಾರಾಟ ಮಾಡುವ ಮೂಲಕ ಆದಾಯವನ್ನೂ ಪಡೆಯಲು ಸಾಧ್ಯವಾಗಲಿದೆ ಎಂದು ಯೋಜನೆಯ ಕುರಿತು ಹೇಳಿದರು.

ಈ ಸಂದರ್ಭದಲ್ಲಿ ಮೆಸ್ಕಾಂ ಇಲಾಖೆಯ ಹಿರಿಯ ಅಧಿಕಾರಿ ಹರೀಶ್ ನಾಯ್ಕ್, ಹಾಗೂ ಇತರ ಅಧಿಕಾರಿ ವೃಂದದವರು ಮತ್ತು ಸೌರಶಕ್ತಿ ಬಳಕೆಯ ಕಂಪನಿಯ ಮುಖ್ಯಸ್ಥರುಗಳು ಉಪಸ್ಥಿತರಿದ್ದರು.

ಸೂರ್ಯಘರ್ ಯೋಜನೆ ಉಪಯೋಗ:

ಪಿಎಂ ಸೂರ್ಯ ಘರ್ ಯೋಜನೆ ಮನೆಯ ವಿದ್ಯುತ್ ಅವಶ್ಯಕತೆ ಪೂರೈಸುವ ಯೋಜನೆಯಾಗಿದ್ದು, ಈ ಯೋಜನೆ ಮೂಲಕ ಸಾರ್ವಜನಿಕರು ಮನೆಗಳ ಮೇಲೆ ಸೌರಫಲಕ ಸ್ಥಾಪಿಸಿ, ಆಕರ್ಷಕ ಸಬ್ಸಿಡಿ ಪಡೆಯುವ ಮೂಲಕ ವಿದ್ಯುತ್ ಉತ್ಪಾದನೆ ಮಾಡಬಹುದಾಗಿದೆ.
1 ಕೆವಿ ಸಾಮರ್ಥ್ಯದವರೆಗಿನ ಸೌರಘಟಕ ಸ್ಥಾಪನೆಗೆ ಸಬ್ಸಿಡಿ – ₹30000
2 ಕೆವಿ ಸಾಮರ್ಥ್ಯದವರೆಗಿನ ಸೌರಘಟಕ ಸ್ಥಾಪನೆಗೆ ಸಬ್ಸಿಡಿ – ₹60000
3 ಕೆವಿ ಮತ್ತು ಅದಕ್ಕಿಂತ ಹೆಚ್ಚಿನ ಸಾಮರ್ಥ್ಯದ ಸೌರಘಟಕ ಸ್ಥಾಪನೆಗೆ ಸಬ್ಸಿಡಿ – ₹78000 ಪಡೆಯಬಹುದಾಗಿದೆ.