ಸುಮಾರು ಎರಡು ಕಿಲೋ ಮೀಟರ್ನಷ್ಟು ದೂರ ಹೊಂಡ ಗುಂಡಿಗಳ ಪಾಡು
ಸಂಕಷ್ಟಕ್ಕೆ ಸಿಲುಕಿರುವ ದಿನನಿತ್ಯ ಸಂಚರಿಸುವ ಆಟೋ ಚಾಲಕರು
ಜಾಲ್ಸೂರಿನಿಂದ ಕಾಸರಗೋಡು ಸಂಪರ್ಕಿಸುವ ರಸ್ತೆಯಲ್ಲಿ ಜಾಲ್ಸೂರು ಗೇಟಿನಿಂದ ಆರಂಭಗೊಂಡು ಮಾಪಲಡ್ಕ ದರ್ಗಾದವರೆಗಿನ ರಸ್ತೆ ಹೊಂಡ ಗುಂಡಿಗಳಿಂದ ಆವೃತಗೊಂಡಿದೆ.














ಅಲ್ಲದೆ ರಸ್ತೆ ಬದಿಯಲ್ಲಿ ಕಾಡು ಪೊದೆಗಳು ಆವರಿಸಿಕೊಂಡು ರಸ್ತೆಯ ತಿರುವುಗಳನ್ನು ಮುಚ್ಚಿಕೊಂಡಿದ್ದು ಅನಾಹುತಕ್ಕೆ ಕಾರಣವಾಗುತ್ತಿದೆ.ದಿನನಿತ್ಯ ಹೊಟ್ಟೆಪಾಡಿಗಾಗಿ ದುಡಿಯುತ್ತಿರುವ ಆಟೋ ಚಾಲಕರುಗಳು ಈ ರಸ್ತೆಯಿಂದ ಸಂಕಷ್ಟವನ್ನು ಎದುರಿಸುತ್ತಿದ್ದಾರೆ.

ಸುದ್ದಿಯೊಂದಿಗೆ ಮಾತನಾಡಿರುವ ಆಟೋ ಚಾಲಕರುಗಳು ಈ ಭಾಗದಲ್ಲಿರುವ ರಸ್ತೆಗಳ ಹೊಂಡಗಳಿಂದಾಗಿ ತಿಂಗಳಿಗೊಮ್ಮೆ ನಮ್ಮ-ನಮ್ಮ ಆಟೋಗಳನ್ನು ಗ್ಯಾರೇಜಿನಲ್ಲಿ ಇಡುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.ಮನೆಯ ಖರ್ಚಿಗೆಂದು ದುಡಿದ ಹಣವೆಲ್ಲಾ ಆಟೋ ರಿಪೇರಿ ಮಾಡುವಲ್ಲಿ ಮುಗಿಯುತ್ತಿದ್ದು ಈ ಪರಿಸ್ಥಿತಿಯಿಂದಾಗಿ ನಾವೆಲ್ಲರೂ

ನೊಂದಿರುತ್ತೇವೆ. ಕಳೆದ 15 ದಿನಗಳ ಹಿಂದೆ ನಾವೆಲ್ಲರೂ ಸೇರಿ ತಾತ್ಕಾಲಿಕವಾಗಿ ರಸ್ತೆಯ ಗುಂಡಿಗಳಿಗೆ ಮಣ್ಣು ಹಾಕಿ ಸರಿಪಡಿಸುವ ಕೆಲಸ ಕಾರ್ಯಗಳನ್ನು ಶ್ರಮದಾನ ಮೂಲಕ ಮಾಡಿದ್ದೆವು.ಆದರೆ ಮಳೆ ಬಂದ ಕಾರಣ ಅವೆಲ್ಲವೂ ಕೊಚ್ಚಿಕೊಂಡು ಹೋಗಿದ್ದು ಮತ್ತೆ ಗುಂಡಿಗಳು ನಿರ್ಮಾಣವಾಗಿದೆ ಎಂದು ತಮ್ಮ ಹವಾಲುಗಳನ್ನು

ಹೇಳಿಕೊಂಡಿದ್ದಾರೆ. ಅಲ್ಲದೆ ರಸ್ತೆಯ ಎರಡು ಬದಿಗಳಲ್ಲಿ ಕಾಡುಪೊದೆಗಳು ತುಂಬಿದ್ದು ತಿರುವುಗಳಲ್ಲಿ ಮುಂದಿನ ವಾಹನ ಬರುವುದು ಕಾಣದೆ ಹಲವಾರು ಬಾರಿ ಅಪಾಯಗಳಿಂದ ಪಾರಾದ ಘಟನೆಗಳು ನಡೆದಿದೆ ಎಂದು ಹೇಳಿಕೊಳ್ಳುತ್ತಿದ್ದಾರೆ.
ಆದ್ದರಿಂದ ಸಂಬಂಧಪಟ್ಟವರು ಎಚ್ಚೆತ್ತು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಆಟೋ ಚಾಲಕರು ಮತ್ತು ಸ್ಥಳೀಯ ನಿವಾಸಿಗಳು ಆಗ್ರಹಿಸಿದ್ದಾರೆ.







