ಸುಳ್ಯದ ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಎಫ್ಒಜಿಎಸ್ಐ–ಜೆಒಜಿಐ–ಪಿಐಸಿಎಸ್ಇಪಿ (FOGSI–JOGI–PICSEP 2026) ರಾಷ್ಟ್ರೀಯ ಮಟ್ಟದ ಕಾರ್ಯಗಾರವನ್ನು ಮಂಗಳೂರು ಒಬಿಜಿ ಸೊಸೈಟಿಯ ಆಶ್ರಯದಲ್ಲಿ ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಒ.ಬಿ.ಜಿ ವಿಭಾಗದ ವತಿಯಿಂದ ಅ.16ರಂದು ಡಾ.ಕೆವಿಸಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಯಿತು.















ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಒಎಲ್ಇ ಅಧ್ಯಕ್ಷ ಹಾಗೂ ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಅಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ.ಕೆ.ವಿ ಚಿದಾನಂದ ವಹಿಸಿ ಮಾತನಾಡಿ “ವೈದ್ಯಕೀಯ ಕ್ಷೇತ್ರದಲ್ಲಿ ಸಂಶೋಧನೆಗೆ ಮಹತ್ವದ ಸ್ಥಾನವಿದೆ. ಇಂತಹ ವಿಶೇಷ ಕಾರ್ಯಗಾರ್ಗಳು ವೈದ್ಯಕೀಯ ವಿದ್ಯಾರ್ಥಿಗಳಿಗೆ ಪಠ್ಯಜ್ಞಾನದ ಜೊತೆಗೆ ಸಂಶೋಧನಾ ಕೌಶಲ್ಯವನ್ನೂ ಬೆಳೆಸಿಕೊಳ್ಳಲುಅತ್ಯಂತ ಸಹಕಾರಿಯಾಗಲಿದೆ ಎಂದರು.
ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಡೀನ್ ಡಾ ನೀಲಾಂಬಿಕೈ ನಟರಾಜನ್ ಶುಭ ಹಾರೈಸಿದರು. ಸುಜಾತಾ ದಾಲ್ವಿ ಅವರು ಆನ್ಲೈನ್ ಮೂಲಕ ಸಂದೇಶ ನೀಡಿದರು. ಕಾರ್ಯಕ್ರಮದಲ್ಲಿ ಮುಂಬೈನ ಸಿಯಾನ್ನಲ್ಲಿರುವ ಲೋಕಮಾನ್ಯ ತಿಲಕ್ ಆಸ್ಪತ್ರೆಯ ಡಾ. ಪ್ರಜ್ಞಾ ಚಾಂಗೆಡೆ ಫೆಡರೇಶನ್ ಆಫ್ ಆಬ್ಸ್ಟೆಟ್ರಿಕ್ ಅಂಡ್ ಗೈನಕಾಲಾಜಿಕಲ್ ಸೊಸೈಟೀಸ್ ಆಫ್ ಇಂಡಿಯಾ (FOGSI)ಯ ರಾಷ್ಟ್ರೀಯ ಅಧ್ಯಾಪಕಿಯಾಗಿ ಭಾಗವಹಿಸಿದ್ದರು.

ಮಂಗಳೂರಿನ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರ ಸಂಘದ ಅಧ್ಯಕ್ಷರು ಹಾಗೂ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ಪ್ರೊಫೆಸರ್ ಡಾ. ರವಿಕಾಂತ್ ಜಿ. ಒ, ಸಂಘದ ಕಾರ್ಯದರ್ಶಿ ಡಾ. ರಮ್ಯಾ, ಕೆವಿಜಿ ವೈದ್ಯಕೀಯ ಮಹಾವಿದ್ಯಾಲಯದ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ಪ್ರೊಫೆಸರ್ ಹಾಗೂ ಮುಖ್ಯಸ್ಥರಾದ ಡಾ. ಗೀತಾ ದೊಪ್ಪ ಉಪಸ್ಥಿತರಿದ್ದರು.
ಕೆವಿಜಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ರಿಜಿಸ್ಟ್ರಾರ್ ಡಾ. ಸಂದೇಶ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಾಗಾರದಲ್ಲಿ ಸಂಶೋಧನಾ ವಿಧಾನಗಳು, ವೈದ್ಯಕೀಯ ಅಂಕಿಅಂಶಗಳ ಮೂಲಭೂತ ಅಂಶಗಳು, ಜರ್ನಲ್ ಲೇಖನಗಳ ವಿಮರ್ಶಾತ್ಮಕ ಮೌಲ್ಯಮಾಪನ, ಸಾಕ್ಷ್ಯಾಧಾರಿತ ವೈದ್ಯಕೀಯ ಪದ್ಧತಿ, ಸಂಶೋಧನಾ ಲೇಖನಗಳ ಸಂಪಾದನೆ ಮತ್ತು ಪೀರ್ ರಿವ್ಯೂ ಪ್ರಕ್ರಿಯೆ ಕುರಿತು ತಜ್ಞರು ಉಪನ್ಯಾಸ ನೀಡಿದರು.
ಕಾರ್ಯಕ್ರಮದ ಅಂಗವಾಗಿ ಪ್ರತಿನಿಧಿಗಳಿಗಾಗಿ ರಸಪ್ರಶ್ನೆ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಡಾ. ಉಮಾಶಂಕರ್ ಬೋರ್ಕರ್ ಮತ್ತು ಡಾ. ಅನಿಲ್ ಬೈಪಡಿತ್ತಾಯ ಅವರು ಬಹುಮಾನ ವಿತರಿಸಿದರು.

ಕಾರ್ಯಕ್ರಮದಲ್ಲಿ ಸುಳ್ಯ, ಮಂಗಳೂರು ಮತ್ತು ಕೊಡಗು ಜಿಲ್ಲೆಗಳಿಂದ ಒಟ್ಟು 132 ಪ್ರತಿನಿಧಿಗಳು ನೋಂದಣಿ ಮಾಡಿಕೊಂಡಿದ್ದರು.
ಕಾರ್ಯಕ್ರಮದಲ್ಲಿ ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ಪ್ರತಿನಿಧಿಗಳು, ವಿದ್ಯಾರ್ಥಿ ವಿದ್ಯಾರ್ಥಿನಿಯರು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.







