ಮಂಗಳೂರಿನ ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್ ಅಂಡ್ ಮ್ಯಾನೇಜ್ಮೆಂಟ್ನ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ಎಂಜಿನಿಯರಿಂಗ್ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿ ಏನೆಕಲ್ಲಿನ ಮಾಣಿಬೈಲ್ ನ ಶಾಬ್ಧಿಕ್ ಎಂ. ಎಂ. ಅವರು ಜಪಾನ್ನ ಪ್ರತಿಷ್ಠಿತ ಎಂಜಿನಿಯರಿಂಗ್ ಸಂಸ್ಥೆಯಾದ ಮುರಾಟಾ ಮೆಷಿನರಿ ಲಿಮಿಟೆಡ್ನಲ್ಲಿ ಪ್ರಾಜೆಕ್ಟ್ ಎಂಜಿನಿಯರ್ ಹುದ್ದೆಗೆ ಆಯ್ಕೆಯಾಗುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ.















ಭಾರತ ಮತ್ತು ಜಪಾನ್ ನಡುವಿನ ಉದ್ಯೋಗಾವಕಾಶಗಳಿಗೆ ಸೇತುವೆಯಾಗಿ ಕಾರ್ಯನಿರ್ವಹಿಸುವ ಜೆನ್ಕೆನ್ ಇಂಡಿಯಾ (Zenken India) ಉಪಕ್ರಮದ ಮೂಲಕ ಅವರು ಈ ಅವಕಾಶವನ್ನು ಪಡೆದುಕೊಂಡಿದ್ದಾರೆ.
ಶಾಬ್ಧಿಕ್ ಅವರು ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದ ಹಳೆ ವಿದ್ಯಾರ್ಥಿ. ಪದವಿಪೂರ್ವ ಶಿಕ್ಷಣ ಪೂರೈಸಿ, ಪ್ರಸ್ತುತ ಎಂಜಿನಿಯರಿಂಗ್ನ ಏಳನೇ ಸೆಮಿಸ್ಟರ್ನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
ಎಂಜಿನಿಯರಿಂಗ್ನ ಮೊದಲ ವರ್ಷದಿಂದಲೇ ಜಪಾನಿ ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ಆಸಕ್ತಿ ಬೆಳೆಸಿಕೊಂಡ ಅವರು, ನಿರಂತರವಾಗಿ ಭಾಷೆಯನ್ನು ಕಲಿಯುತ್ತಾ ಜಪಾನ್ನಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಲು ಸಿದ್ಧತೆ ನಡೆಸಿದರು. 2026ರ ಆಗಸ್ಟ್ನಲ್ಲಿ NAT-TEST Q5 ಜಪಾನಿ ಭಾಷಾ ಪರೀಕ್ಷೆಗೂ ಹಾಜರಾಗುವ ಮೂಲಕ ತಮ್ಮ ಗುರಿಯತ್ತ ಮಹತ್ವದ ಹೆಜ್ಜೆ ಇಟ್ಟರು.
.2026ರ ಸೆಪ್ಟೆಂಬರ್ನಲ್ಲಿ ಮುರಾಟಾ ಮೆಷಿನರಿ ಲಿಮಿಟೆಡ್ನ ಆರಂಭಿಕ ಅರ್ಜಿ ಪರಿಶೀಲನೆಯಲ್ಲಿ ಆಯ್ಕೆಯಾದ ಶಾಬ್ಧಿಕ್, ನಂತರ ತಾಂತ್ರಿಕ ಪರೀಕ್ಷೆ ಮತ್ತು ಆಪ್ಟಿಟ್ಯೂಡ್ ಪರೀಕ್ಷೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರು. ದೇಶದಾದ್ಯಂತ ಅಭ್ಯರ್ಥಿಗಳಲ್ಲಿ 24 ವಿದ್ಯಾರ್ಥಿಗಳು ಮುಂದಿನ ಹಂತಕ್ಕೆ ಆಯ್ಕೆಯಾಗಿದ್ದರು.
ಅದರಲ್ಲು 11 ಮಂದಿ ಮಾತ್ರ ಎರಡನೇ ಹಂತಕ್ಕೆ ಪ್ರವೇಶಿಸಿದರು. ಮೂರನೇ ಹಂತದ ಆಯ್ಕೆ ಪ್ರಕ್ರಿಯೆಯಲ್ಲಿ ಪ್ರಾಜೆಕ್ಟ್ ಪ್ರಸ್ತುತಿ, ತಾಂತ್ರಿಕ ಸಂದರ್ಶನ ಮತ್ತು ಅಭ್ಯರ್ಥಿಗಳ ವ್ಯಕ್ತಿತ್ವ ಹಾಗೂ ವೃತ್ತಿಪರ ಸಾಮರ್ಥ್ಯವನ್ನು ಮೌಲ್ಯಮಾಪನ ಮಾಡುವ HR ಸಂದರ್ಶನ ಸೇರಿದ್ದು ಈ ಮೂರು ಹಂತಗಳನ್ನೂ ಯಶಸ್ವಿಯಾಗಿ ಪೂರ್ಣಗೊಳಿಸಿದ ಶಾಬ್ಧಿಕ್ ಅವರು ಮುರಾಟಾ ಮೆಷಿನರಿ ಲಿಮಿಟೆಡ್ನ ಪ್ರಾಜೆಕ್ಟ್ ಎಂಜಿನಿಯರ್ ಹುದ್ದೆಗೆ ಆಯ್ಕೆಯಾದರು.
ಶಾಬ್ಧಿಕ್ ಅವರಿಗೆ ಜಪಾನ್ನ ಐಚಿ ಪ್ರಿಫೆಕ್ಚರ್ನಲ್ಲಿರುವ ಇನುಯಾಮಾ ಘಟಕದಲ್ಲಿ ಕೆಲಸ ಮಾಡುವ ಅವಕಾಶ ದೊರೆಯಲಿದೆ. ಅವರ ಉದ್ಯೋಗ ಸೇರ್ಪಡೆ ಜನವರಿ 2028ರಲ್ಲಿ ನಿಗದಿಯಾಗಿದೆ. ಜಪಾನ್ನ ವೃತ್ತಿಪರ ಪರಿಸರಕ್ಕೆ ಸಿದ್ಧರಾಗಲು, ನವೆಂಬರ್ ನಿಂದ ಸುಮಾರು ಒಂದು ವರ್ಷದ ಆನ್ಲೈನ್ ಜಪಾನಿ ಭಾಷಾ ತರಬೇತಿಯನ್ನು ಪ್ರಾರಂಭಿಸಲಿದ್ದಾರೆ.
ಶಾಬ್ದಿಕ್ ಅವರು ಸುಬ್ರಹ್ಮಣ್ಯದ ನಾಗತೇಜ ವಸತಿಗೃಹದ ಮಾಲಕರಾದ ಮೋಹನ್ ಮಾಣಿಬೈಲು ಮತ್ತು ಪ್ರವೀಣ ದಂಪತಿಗಳ ಪುತ್ರ..







