













ಮಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಆಂಕಾಲಜಿ (ಎಂಐಒ) ಆಸ್ಪತ್ರೆಯಲ್ಲಿ ಅತ್ಯಂತ ವಿಶಿಷ್ಟ ಹಾಗೂ ಮಾನವೀಯ ನೆಲೆಗಟ್ಟಿನಲ್ಲಿ ಆಯುಧ ಪೂಜೆಯನ್ನು ಆಚರಿಸಲಾಗಿದೆ.

ಬಡ ರೋಗಿಗಳಿಗೂ ಗುಣ ಮಟ್ಟದ ಕ್ಯಾನ್ಸರ್ ಚಿಕಿತ್ಸೆ ದೊರೆಯಬೇಕು ಎಂಬ ಸದುದ್ದೇಶದಿಂದ, ಆಸ್ಪತ್ರೆಯ ಮಾಲೀಕರು ಅಥವಾ ವೈದ್ಯರ ಬದಲಿಗೆ ಇಬ್ಬರು ಬಿಪಿಎಲ್ (ಬಡತನ ರೇಖೆಗಿಂತ ಕೆಳಗಿರುವ) ಕುಟುಂಬಗಳ ಸದಸ್ಯರಿಂದ ನೂತನ ವೈದ್ಯ ಕೀಯ ಉಪಕರಣಗಳಿಗೆ ಪೂಜೆ ನೆರವೇರಿಸಲಾಗಿದೆ. ಆಸ್ಪತ್ರೆಯಲ್ಲಿ ಒಟ್ಟು 35 ಕೋಟಿ ರೂಪಾಯಿ ವೆಚ್ಚದ ಅತ್ಯಾಧುನಿಕ ಉಪಕರಣಗಳನ್ನು ಅಳವಡಿಸಲಾಗಿದ್ದು, ಇದರಲ್ಲಿ 25 ಕೋಟಿ ರೂಪಾಯಿ ವೆಚ್ಚದ ಟ್ರಬೀಮ್ ರೇಡಿಯೊಥೆರಪಿ ವ್ಯವಸ್ಥೆ ಹಾಗೂ 10 ಕೋಟಿ ರೂಪಾಯಿ ವೆಚ್ಚದ ಪಿಇಟಿ-ಸಿಟಿ ಸ್ಕ್ಯಾನರ್ ಸೇರಿವೆ. ಎಂಐಒನ ವೈದ್ಯಕೀಯ ಮತ್ತು ಆಡಳಿತ ವಿಭಾಗದ ನಿರ್ದೇಶಕರಾದ ಡಾ.
ಸುರೇಶ್ ರಾವ್ ಅವರ ನೇತೃತ್ವದಲ್ಲಿ ಈ ವಿಶಿಷ್ಟ ಕಾರ್ಯಕ್ರಮ ನಡೆದಿದ್ದು, ರೋಗಿಯ ಆರ್ಥಿಕ ಸ್ಥಿತಿಗತಿಗಳು ಗುಣಮಟ್ಟದ ಚಿಕಿತ್ಸೆಗೆ ಎಂದಿಗೂ ಅಡ್ಡಿಯಾಗಬಾರದು ಎಂಬ ಸಂದೇಶವನ್ನು ಇದು ಸಾರಿದೆ. ರಶ್ಮಿ-ಪ್ರದೀಪ್ ಕುಮಾರ್ ಹಾಗೂ ಸವಿತಾ-ಲಕ್ಷ್ಮಣ್ ಗೌಡ ಅವರ ಕುಟುಂಬಗಳು ಈ ಪೂಜೆಯಲ್ಲಿ ಪಾಲ್ಗೊಂಡು ಆಸ್ಪತ್ರೆಯನ್ನು ಪ್ರತಿನಿಧಿಸಿದ್ದವು. ಗ್ರಾಮೀಣ ಹಾಗೂ ನಗರ ಪ್ರದೇಶದ ಜನರಿಗೆ ಅತ್ಯಾಧುನಿಕ ಮತ್ತು ಮಾನವೀಯತೆಯಿಂದ ಕೂಡಿದ ಕ್ಯಾನ್ಸರ್ ಚಿಕಿತ್ಸೆಯನ್ನು ಒದಗಿಸುವ ತಮ್ಮ ಬದ್ಧತೆಯನ್ನು ಎಂಐಒ ಈ ಮೂಲಕ ಮತ್ತೊಮ್ಮೆ ದೃಢಪಡಿಸಿದೆ.







