ಪೈಚಾರಿನಲ್ಲಿ ಹಿಟ್ ಎಂಡ್ ರನ್ – ಬೈಕ್ ಸವಾರರಿಬ್ಬರಿಗೆ ಗಂಭೀರ ಗಾಯ, ಆಸ್ಪತ್ರೆಗೆ ದಾಖಲು

0

ಪುತ್ತೂರು ಕಡೆಯಿಂದ ಸುಳ್ಯಕ್ಕೆ ಬರುತ್ತಿದ್ದ ಸ್ಪ್ಲೆಂಡರ್ ಬೈಕೊಂದಕ್ಕೆ ಮಡಿಕೇರಿ ಕಡೆಯಿಂದ ವೇಗವಾಗಿ ಬಂದ ಡ್ಯೂಕ್ ಬೈಕೊಂದು ಡಿಕ್ಕಿ ಹೊಡೆದು ಪರಾರಿಯಾದ ಘಟನೆ ಅ.25 ರಂದು ಸಂಜೆ ಪೈಚಾರಿನಲ್ಲಿ ನಡೆದಿದ್ದು ಬೈಕ್ ಸವಾರರಿಬ್ಬರ ಕಾಲಿಗೆ ಗಂಭೀರ ಗಾಯವಾದ ಘಟನೆ ವರದಿಯಾಗಿದೆ.

ಆಲೆಟ್ಟಿಯ ಬಾರ್ಪಣೆ ಕುಂಭಕೋಡು ನಿವಾಸಿಗಳಾದ ಬಾಲಕೃಷ್ಣ ನಾಯ್ಕ್ ಮತ್ತು ಕೆ.ವಿ.ಜಿ ಐ.ಟಿ.ಐ ವಿದ್ಯಾರ್ಥಿ ಅಶ್ವಿನ್ ರವರು ತಮ್ಮ ಸ್ಪ್ಲೆಂಡರ್ ಬೈಕಿನಲ್ಲಿ ವಿಟ್ಲದ ಸಂಬಂಧಿಕರ ಮನೆಗೆ ಹೋಗಿ ಹಿಂತಿರುವಾಗ ಪೈಚಾರಿನಲ್ಲಿ ರಾಜ್ಯ ಹೆದ್ದಾರಿಯಲ್ಲಿ ಮಡಿಕೇರಿ ಕಡೆಯಿಂದ ಬಂದ ಡ್ಯೂಕ್ ಬೈಕ್ ವಿರುದ್ಧ ದಿಕ್ಕಿನಿಂದ ವೇಗವಾಗಿ ಬಂದು ಡಿಕ್ಕಿ ಹೊಡೆದು ಬೈಕ್ ಸವಾರನಿಲ್ಲಿಸದೆಪರಾರಿಯಾಗಿದ್ದಾನೆ. ಡಿಕ್ಕಿ ಹೊಡೆದ ‌ರಭಸಕ್ಕೆ ಇವರಿಬ್ಬರು ರಸ್ತೆಗೆ ಬಿದ್ದಿದ್ದು ಇಬ್ಬರ ಕಾಲಿಗೆ ಗಂಭೀರ ಗಾಯವಾಗಿದೆ. ತಕ್ಷಣ ಅಲ್ಲಿ ಸೇರಿದ ಸ್ಥಳೀಯರು ಆಂಬ್ಯುಲೆನ್ಸ್‌ ತರಿಸಿ ಇಬ್ಬರನ್ನು ಸುಳ್ಯದ ಸರಕಾರಿ ಆಸ್ಪತ್ರೆಗೆ ಕರೆ ತಂದು ದಾಖಲಿಸಿದರು. ಕಾಲಿಗೆ ವಿಪರೀತ ಪ್ರಮಾಣದಲ್ಲಿ ಏಟಾಗಿದ್ದರಿಂದ ಅವರನ್ನು ವೈದ್ಯರ ಸಲಹೆ ಮೇರೆಗೆ ಮಂಗಳೂರಿನ ಆಸ್ಪತ್ರೆಗೆ ಆಂಬ್ಯುಲೆನ್ಸ್ ಮೂಲಕ ಕರೆದೊಯ್ಯಲಾಗಿದೆ. ಘಟನೆಯ ಬಗ್ಗೆ ಮಹಜರು ನಡೆಸಿದ ಸುಳ್ಯ ಪೋಲಿಸರು ಪ್ರಕರಣ ದಾಖಲಿಸಿಕೊಂಡು ಹಿಟ್ ಎಂಡ್ ರನ್ ಮಾಡಿ ಪರಾರಿಯಾದ ಬೈಕ್ ಸವಾರನ ಪತ್ತೆಗಾಗಿ ಹೆದ್ದಾರಿಯ ಸಿ.ಸಿ ಟಿವಿ ಪರಿಶೀಲಿಸುತ್ತಿದ್ದಾರೆ.‌