ಮುರುಳ್ಯದಲ್ಲಿ ಹಿಂದೂ ಹಿತರಕ್ಷಣಾ ವೇದಿಕೆಯಿಂದ ಬೃಹತ್ ಪ್ರತಿಭಟನೆ

ರಕ್ತೇಶ್ವರಿ ಸಾನಿಧ್ಯವಿರುವ ಜಾಗವನ್ನು ಮುಸ್ಲಿಂ ದಫನಭೂಮಿಗೆ ಕಾದಿರಿಸಲಾಗಿದೆ ಎಂದು ಆರೋಪಿಸಿರುವ ಹಿಂದೂ ಹಿತರಕ್ಷಣಾ ವೇದಿಕೆಯಿಂದ ವತಿಯಿಂದ ಮುರುಳ್ಯ ಗ್ರಾಮ ಪಂಚಾಯತ್ ಬಳಿಯ ಶ್ರೀ ಕೃಷ್ಣ ಮೈದಾನದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.

ಹಿಂದೂ ಹಿತರಕ್ಷಣಾ ವೇದಿಕೆಯವರು ಹಾಗೂ ಬಿಜೆಪಿ ಮುಖಂಡರು, ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.














ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಹಿಂದೂ ಜಾಗರಣ ವೇದಿಕೆ ಮುಖಂಡ ಮೋಹನ್ ದಾಸ್ ಬಳ್ಕಾಡಿ, ಕಿಶೋರ್ ಕುಮಾರ್ ಶಿರಾಡಿ, ಸುಳ್ಯ ಬಿಜೆಪಿ ಮಂಡಲ ಸಮಿತಿ ಪ್ರಧಾನ ಕಾರ್ಯದರ್ಶಿ ವಿನಯ ಕುಮಾರ್ ಕಂದಡ್ಕ, ನವೀನ್ ನೆರಿಯ
,ಲೋಕಯ್ಯ ಪರವ ಮತ್ತಿತರರು , ” ಜಿಲ್ಲೆಯ ಉಸ್ತುವಾರಿ ಸಚಿವರಾದ ಯು.ಟಿ.ಖಾದರ್ ರಾತ್ರೋರಾತ್ರಿ ಜಿಲ್ಲಾಧಿಕಾರಿಗಳಿಗೆ ಒತ್ತಡ ಹಾಕಿ ಈ ಊರಿನ ಹಿಂದೂಗಳು ಆರಾಧಿಸುತ್ತಿರುವ ಊರಿನ ರಕ್ತೇಶ್ವರಿ ದೇವಿಯ ದೇಗುಲ ನಿರ್ಮಾಣದ ಸ್ಥಳವನ್ನು ಅಕ್ರಮವಾಗಿ ವಕ್ಫ್ ಬೋರ್ಡ್ ಗೆ ದಫನ ಭೂಮಿಯಾಗಿ ನೀಡಿದ್ದು ಕಾನೂನು ಉಲ್ಲಂಘನೆಯಾಗಿದೆ. ಈ ಬಗ್ಗೆ ಕಾನೂನು ಹೋರಾಟ ನಡೆಸಲಾಗುವುದು. ಅಧಿಕಾರಿಗಳ ಲಂಚಬಾಕತನದ ವಿರುದ್ದ ಮುಂದಿನ ದಿನದಲ್ಲಿ ದೊಡ್ಡ ಮಟ್ಟದ ಹೋರಾಟ ನಡೆಸುವುದಾಗಿ ಹೇಳಿದರು.

“ಮಾರ್ಚ್ ಅಂತ್ಯದೊಳಗೆ ಈ ಜಾಗದಲ್ಲಿ ರಕ್ತೇಶ್ವರಿ ದೇಗುಲ ನಿರ್ಮಿಸಿ ಪ್ರತಿಷ್ಟಾ ಕಲಶೋತ್ಸವ ನಡೆಸುವ ಸಂಕಲ್ಪವನ್ನು ಕೈಗೊಂಡಿದ್ದು ಹಿಂದೂ ಸಮಾಜದ ಸಹಕಾರ ಅತೀ ಅಗತ್ಯವಾಗಿದೆ . 600 ಹಿಂದುಗಳು ಹಾಗೂ 50 ಮುಸ್ಲಿಂ ಕುಟುಂಬ ಇರುವ ಈ ಗ್ರಾಮದಲ್ಲಿ ಶಾಂತಿ ಕಾಪಾಡುವುದು ಹಿಂದುಗಳ ಕೆಲಸ ಮಾತ್ರವಲ್ಲ. ಮುಸ್ಲಿಂಮರು ಸ್ವಯಂ ಆಗಿ ದೇವಿಯ ಸ್ಥಳವನ್ನು ಬೇಡ ಎಂದು ಅಧಿಕಾರಿಗಳಿಗೆ ತಿಳಿಸಿ ಶಾಂತಿಗೆ ಸಹಕರಿಸಿ ಎಂದು ಒತ್ತಾಯಿಸಿದರು.

ಪ್ರತಿಭಟನಾ ಸಭೆಗೆ ಮನವಿ ಸ್ವೀಕರಿಸಲು ತಹಶೀಲ್ದಾರ್ ಬರುವಾಗ ತಡವಾಯಿತೆಂದು ಆಕ್ರೋಶಗೊಂಡ ಪ್ರತಿಭಟನಾ ನಿರತರು ತಹಶೀಲ್ದಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾ ಸಭಾ ವೇದಿಕೆಯಲ್ಲಿ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷೆ ಸುವರ್ಣಿನಿ, ಬೆಳ್ಳಾರೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ನಮಿತಾ ರೈ , ನಿವೃತ್ತ ಯೋಧ ಗಿರಿಧರ ಗೌಡ ಕಡೀರ, ನಾರಾಯಣ ಕೋಡ್ಜೆ ಉಪಸ್ಥಿತರಿದ್ದರು.

ಪ್ರತಿಭಟನಾ ಸಭೆಯಲ್ಲಿ ದಕ್ಷಿಣ ಕನ್ನಡ ಲೋಕಸಭಾ ಸದಸ್ಯ ಕ್ಯಾ.ಬ್ರಿಜೇಶ್ ಚೌಟ, ಶಾಸಕಿ ಭಾಗೀರಥಿ ಮುರುಳ್ಯ , ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖಂಡ ನ.ಸೀತರಾಮ, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯತೀಶ್ ಆರ್ವಾರ, ಜಿಲ್ಲಾ ಉಪಾಧ್ಯಕ್ಷ ರಾಕೇಶ್ ರೈ ಕೆಡೆಂಜಿ ,ಮಂಡಲ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಮನವೊಳಿಕೆ, ಪ್ರಮುಖರಾದ ಪ್ರಸನ್ನ ಮಾರ್ತ ,ಸುಬೋದ್ ಶೆಟ್ಟಿ ಮೇನಾಲ, ದಿನೇಶ್ ಮೆದು,ಚಂದ್ರ ಕೋಲ್ಚಾರ್ , ಭಾರತಿ ಪುರುಷೋತ್ತಮ , ಪುಷ್ಪಾ ಮೇದಪ್ಪ , ಶಶಿ ಕಲಾ ನೀರ ಬಿದಿರೆ ಸೇರಿದಂತೆ ಸಾವಿರಾರು ಹಿಂದು ಕಾರ್ಯಕರ್ತರು ಮಹಿಳೆಯರು ಭಾಗವಹಿಸಿದ್ದರು.

ವಸಂತ ನಡುಬೈಲು ಸ್ವಾಗತಿಸಿದರು. ,
ಅನೂಪ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಅನೂಪ್ ಬಿಳಿಮಲೆ ವಂದಿಸಿದರು.
ಪ್ರತಿಭಟನಾ ಸಭೆಯಲ್ಲಿ ಶ್ರೀಮತಿ ಚೇತನಾ ಕಿಶನ್ ಮುರುಳ್ಯ ಅವರು ತಹಸೀಲ್ದಾರರಿಗೆ ಮನವಿಯನ್ನು ಸಲ್ಲಿಸಿದರು.








