ಸುಳ್ಯ ಕೆಎಸ್ಆರ್ ಟಿಸಿ ಗುತ್ತಿಗೆ ಆಧಾರಿತ ಬಸ್ ಚಾಲಕರ ನಿಯೋಗದಿಂದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಭೇಟಿ

0

ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ ಶಾಸಕರು

ನಾಳೆಯಿಂದ ಚಾಲಕರು ಕರ್ತವ್ಯಕ್ಕೆ ಹಾಜರು

ಕೆ ಎಸ್ ಆರ್ ಟಿ ಸಿ ಯಲ್ಲಿ ಗುತ್ತಿಗೆ ಆಧಾರದಲ್ಲಿ ನೇಮಕಗೊಂಡ ಬಸ್ಸು ಚಾಲಕರಿಗೆ ಕೆಲಸ ನಿಲ್ಲಿಸುವಂತೆ ಅವರನ್ನು ನೇಮಕ ಮಾಡಿದ ಸಂಸ್ಥೆ ಏಕಾಏಕಿ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಬಸ್ ಚಾಲಕರು ತಮ್ಮ ಉದ್ಯೋಗ ಭದ್ರತೆಗಾಗಿ ಸ್ಪಷ್ಟ ಆದೇಶ ನೀಡಬೇಕೆಂದು ಆಗ್ರಹಿಸಿ ಇಂದು ಸುಳ್ಯ ಬಸ್ಸು ಡಿಪೋ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ್ದರು. ಅವರು ಕರ್ತವ್ಯಕ್ಕೆ ಹಾಜರಾಗದಿದ್ದುದರಿಂದ ಇಂದು ತಾಲೂಕಿನ ಬಸ್ಸು ಸಂಚಾರದಲ್ಲಿ ಅಸ್ತವ್ಯಸ್ತಗೊಂಡಿತ್ತು.

ಬಳಿಕ ಚಾಲಕರೆಲ್ಲ ಪುತ್ತೂರಿಗೆ ತೆರಳಿ ಶಾಸಕ ಅಶೋಕ್ ಕುಮಾರ್ ರೈ ಅವರನ್ನು ಭೇಟಿ ಮಾಡಿ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು.
ಇದಕ್ಕೆ ಸ್ಪಂದಿಸಿದ ಶಾಸಕರು ಎಲ್ಲಾ 35 ಮಂದಿ ಚಾಲಕರಿಗೂ ಕೂಡ ಮುಂದಿನ 11 ತಿಂಗಳು ಯಾವುದೇ ಸಮಸ್ಯೆ ಇಲ್ಲದೆ ಕರ್ತವ್ಯ ನಿರ್ವಹಿಸಲು ಅನುಮತಿ ಪಡೆದು ಕೊಡುವುದಾಗಿ ಭರವಸೆಯನ್ನು ನೀಡಿದ್ದಾರೆ ಎನ್ನಲಾಗಿದೆ. ಅಲ್ಲದೆ ಮುಂದಿನ ಅವಧಿಗೆ ಯಾವುದೇ ರೀತಿಯ ಹಣವನ್ನು ಪಾವತಿಸದೆ ಕೆಲಸ ನಿರ್ವಹಿಸುವ ವ್ಯವಸ್ಥೆಯನ್ನು ಕೂಡ ಮಾಡಿಕೊಡಲಾಗುವುದು ಎಂಬ ಭರವಸೆಯನ್ನು ಶಾಸಕರು ನೀಡಿದ್ದಾರೆ ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಪ್ರತಿಭಟನೆಗೆ ಇಳಿದಿದ್ದ ಗುತ್ತಿಗೆ ಆಧಾರಿತ ಬಸ್ಸು ಚಾಲಕರು ತಮ್ಮ ಪ್ರತಿಭಟನೆಯನ್ನು ಹಿಂಪಡೆದುಕೊಂಡು ನಾಳೆಯಿಂದ ಕರ್ತವ್ಯಕ್ಕೆ ಹಾಜರಾಗುವುದಾಗಿ ಸುದ್ದಿಗೆ ತಿಳಿಸಿರುತ್ತಾರೆ.