ದೆಹಲಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಯನ್ನು ಬೆಂಬಲಿಸಿ ಸುಳ್ಯದಲ್ಲಿ ಕಾಂಗ್ರೆಸ್, ಆಮ್ ಆದ್ಮಿ ಪಕ್ಷ, ರೈತ ಸಂಘಟನೆ ಮತ್ತು ಕಾರ್ಮಿಕ ಸಂಘಟನೆಗಳ ಸಮಾನ ಮನಸ್ಕರು ಸೇರಿ ಸುಳ್ಯ ಬಸ್ ನಿಲ್ದಾಣದಲ್ಲಿ ಇಂದು ಸಂಜೆ ಪ್ರತಿಭಟನೆ ನಡೆಸಿದರಲ್ಲದೆ ಒಂದು ನಿಮಿಷ ರಸ್ತೆ ತಡೆ ಮಾಡಿದರು.
ಪ್ರತಿಭಟನಾ ಸಭೆಯನ್ನುದ್ಧೇಶಿಸಿ ಮಾತನಾಡಿದ ಕಾಂಗ್ರೆಸ್ ಮುಖಂಡ ಹಾಗೂ ನಗರ ಪಂಚಾಯತ್ ಸದಸ್ಯ ಎಂ. ವೆಂಕಪ್ಪ ಗೌಡರು, ಪ್ರಧಾನಿ ನರೇಂದ್ರ ಮೋದಿಯವರು ರೈತರ ಆದಾಯವನ್ನು ದ್ವಿಗುಣಗೊಳಿಸುವುದಾಗಿ ಹೇಳಿದ್ದರು. ಆದರೆ ರೈತರ ಬೆಳೆಗೆ ಸರಿಯಾದ ಬೆಲೆ ಸಿಗದೆ ಕಂಗಾಲಾಗಿದ್ದೇವೆ. ರೈತರನ್ನು ತೊಂದರೆಗೆ ಸಿಲುಕಿಸುವ ಕಾನೂನು ಮಾಡಬಾರದೆಂದು ಹಾಗೂ ಕನಿಷ್ಟ ಬೆಂಬಲ ಬೆಲೆ ನಿಗದಿಪಡಿಸಬೇಕೆಂದು ಒತ್ತಾಯಿಸಿ ರೈತರು ದೆಹಲಿಯಲ್ಲಿ ಪ್ರತಿಭಟನೆ ನಡೆಸಲು ಬಂದರೆ ಅವರ ಮೇಲೆ ಅಶ್ರುವಾಯು ಪ್ರಯೋಗಿಸಿ ಹಿಮ್ಮೆಟ್ಟಿಸುವ ಕೆಲಸವನ್ನು ಮೋದಿ ಸರ್ಕಾರ ಮಾಡುತ್ತಿದೆ. ರಬ್ಬರ್‌ಗೆ ೨೦೧೩ಕ್ಕೆ ಮೊಒದಲು ಇದ್ದ ಬೆಲೆ ಎಷ್ಟು? ಈಗ ಇರುವ ಬೆಲೆ ಎಷ್ಟು ಎಂದು ತುಲನೆ ಮಾಡಿ ನೋಡೋಣ. ಅಡಿಕೆಗೆ ಕೆ.ಜಿ.ಗೆ ೪೦೦ ರೂ. ಇದ್ದದ್ದು ಈಗ ೩೪೦ ರೂ. ಆಗಿದೆ. ಹಾಗಿದ್ದರೆ ಅಚ್ಛೇ ದಿನ್ ಬಂದದ್ದು ಯಾರಿಗೆ? ಬಿಜೆಪಿಗೆ ಮತ ನೀಡುವ ರೈತರು ಇದನ್ನು ಪರಿಶೀಲಿಸಿ ಎಂದು ಹೇಳಿದರು.
ಕಾರ್ಮಿಕ ಮುಖಂಡ ಕೆ.ಪಿ.ಜಾನಿ, ರೈತ ಮುಖಂಡ ಲೋಲಜಾಕ್ಷ ಭೂತಕಲ್ಲು, ಆಮ್ ಆದ್ಮಿ ಪಾರ್ಟಿ ಮುಖಂಡ ಅಶೋಕ್ ಎಡಮಲೆ ಸಭೆಯನ್ನುದ್ಧೇಶಿಸಿ ಮಾತನಾಡಿದರು. ಬಳಿಕ ಒಂದು ನಿಮಿಷ ಮುಖ್ಯರಸ್ತೆಯಲ್ಲಿ ಕುಳಿತು ರೈತ ಪರ ಘೋಷಣೆ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಲಾಯಿತು.