ಇದು ಸರಕಾರಿ ಜಾಗವಲ್ಲ. ನಮ್ಮ ಕಾನ ಬಾಣೆ ಜಾಗ. ದಾಖಲೆ ಇದೆ : ಪಾರೆ ಅಬ್ದುಲ್ಲ ಸ್ಪಷ್ಟನೆ
” ಸುಳ್ಯ ನಗರದ ಮಧ್ಯದಲ್ಲಿ ಸರಕಾರಿ ಜಾಗದಲ್ಲಿರುವ ಮರಗಳನ್ನು ಅಕ್ರಮವಾಗಿ ಕಡಿದು ಮಾರಾಟ ಮಾಡಲು ಪ್ರಯತ್ನಿಸಲಾಗುತ್ತಿದೆ ” ಎಂದು ನಗರ ಪಂಚಾಯತ್ ಸದಸ್ಯ ವಿನಯ ಕುಮಾರ್ ಕಂದಡ್ಕ ಆರೋಪಿಸಿದ್ದು, ಇಲಾಖೆ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
” ಸುಳ್ಯದ ಕೆರೆಮೂಲೆ ಭಾಗದಲ್ಲಿ ಈ ಹಿಂದೆ ಪೊಲೀಸ್ ಕ್ವಾರ್ಟರ್ಸ್ ಗೆಂದು ರಿಸರ್ವೇಶನ್ ಆಗಿದ್ದ ಸುಮಾರು ಒಂದು ಕಾಲು ಎಕರೆ ಭೂಮಿಯು ಕಾದಿರಿಸುವ ಪ್ರಕ್ರಿಯೆಯಲ್ಲಿ ಆದ ಲೋಪದಿಂದಾಗಿ ರಿಸರ್ವೇಶನ್ ರದ್ದಾಗಿದ್ದು ಅದು ಈಗಲೂ ಸರ್ಕಾರಿ ಭೂಮಿ ಆಗಿರುತ್ತದೆ. ಆದರೆ ಅಕ್ಕಪಕ್ಕದ ಕೆಲವು ವ್ಯಕ್ತಿಗಳು ಇದು ತಮ್ಮ ಕಾನ ಹಕ್ಕಿನ ಜಾಗ ಎಂದು ವಾದಿಸುತ್ತಿದ್ದು ಭೂಮಿಯ ಸಂಪೂರ್ಣ ಒಡೆತನ ತಮ್ಮದೆಂದು ಅಕ್ಕಪಕ್ಕದವರಿಗೆ ಸುಳ್ಳು ಮಾಹಿತಿ ನೀಡಿ ಇದೀಗ ಆ ಭೂಮಿಯಲ್ಲಿನ ಮ್ಯಾಂಜಿಯಂ ಹಾಗೂ ಅಕೇಶಿಯ ಮರಗಳನ್ನು ಅಕ್ರಮವಾಗಿ ಕಡಿದು ಮಾರಾಟ ಮಾಡುವ ಹುನ್ನಾರ ನಡೆಸಿರುತ್ತಾರೆ. ಈ ಕುರಿತು ಅರಣ್ಯ ಇಲಾಖೆಯಲ್ಲಿ ವಿಚಾರಿಸಿದಾಗ ಈ ಮರಗಳು ತಮ್ಮ ಪಟ್ಟಾ ಹಕ್ಕಿನ ಆರ್.ಟಿ.ಸಿ.ಯನ್ನು ನೀಡಿ ಮರ ಕಡಿಯಲು ಅರ್ಜಿ ಸಲ್ಲಿಸಿರುವುದಾಗಿ ಹೇಳಿರುತ್ತಾರೆ. ಆದರೆ ಇಲಾಖೆಯವರು ಸ್ಥಳವನ್ನು ಪರಿಶೀಲನೆ ಮಾಡದೆ ಮರ ಕಡಿಯಲು ಹೇಗೆ ಅನುಮತಿ ನೀಡಿದ್ದಾರೆ ಎನ್ನುವುದು ಯಕ್ಷಪ್ರಶ್ನೆಯಾಗಿದೆ. ಆ ಸ್ಥಳದಲ್ಲಿ ಕ್ರೇನ್ ಬಳಸಿ ಮರಗಳನ್ನು ಕಡಿಯುವ ಕೆಲಸ ಎರಡು ಮೂರು ದಿನಗಳ ಕಾಲ ನಡೆದಿದ್ದು ಆಶ್ಚರ್ಯವೆಂದರೆ ಮರ ಕಡಿದ ಸ್ಥಳದಲ್ಲಿ ಯಾವುದೇ ವಿದ್ಯುತ್ ಲೈನ್ ಗಳು ಹಾದು ಹೋಗಿರುವುದಿಲ್ಲ. ಆದರೆ ಮೆಸ್ಕಾಂ ಇಲಾಖೆಯ ಸಿಬ್ಬಂದಿಗಳು ಕೂಡ ಸ್ಥಳದಲ್ಲಿ ಹಾಜರಿದ್ದು ಈ ಅಕ್ರಮ ಮರ ಕಟಾವಿಗೆ ಸಾತ್ ನೀಡಿರುವುದು ಕಂಡುಬಂದಿರುತ್ತದೆ ” ಎಂದು ವಿನಯ ಕಂದಡ್ಕ ತಿಳಿಸಿದ್ದಾರೆ.
ದಾಖಲೆ ತರಲು ಹೇಳಿದ್ದೇವೆ : ರೇಂಜರ್
ಈ ಬಗ್ಗೆ ರೇಂಜರ್ ಮಂಜುನಾಥರನ್ನು ಸಂಪರ್ಕಿಸಿ ವಿಚಾರಿಸಿದಾಗ ” ಮರ ಕಡಿದ ಜಾಗ ಸರಕಾರಿ ಜಾಗ ಎಂದು ನಗರ ಪಂಚಾಯತ್ ಸದಸ್ಯರು ತಿಳಿಸಿದ್ದಾರೆ. ಆದರೆ ಅದು ತಮ್ಮ ಜಾಗ ಎಂದು ಮರ ಕಡಿಸಿದವರು ಹೇಳಿದ್ದಾರೆ. ಆದ್ದರಿಂದ ನಾವು ಮರ ಕಡಿಯುವುದನ್ನು ನಿಲ್ಲಿಸಿದ್ದೇವೆ. ದಾಖಲೆಗಳನ್ನು ತಂದು ಕೊಡುವಂತೆ ಅವರಿಗೆ ಹೇಳಿದ್ದೇವೆ. ದಾಖಲೆ ನೋಡಿ ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆ ” ಎಂದು ಹೇಳಿದ್ದಾರೆ.
ನಮ್ಮ ಕಾನ ಜಾಗ. ದಾಖಲೆ ಇದೆ : ಅಬ್ದುಲ್ಲ
ಮರ ಕಡಿದ ಜಾಗ ತಮ್ಮದೆಂದು ಹೇಳುವ ಕೆರೆಮೂಲೆಯ ಅಬ್ದುಲ್ಲ ಪಾರೆಯವರನ್ನು ಸಂಪರ್ಕಿಸಿ ವಿಚಾರಿಸಿದಾಗ ” ಇದು ನಮ್ಮ ಕಾನ ಬಾಣೆ ಸ್ಥಳ. ಒಂದು ಎಕ್ರೆ ಇಪ್ಪತ್ತು ಸೆಂಟ್ಸ್ ಇದೆ. ತಾಯಿಯ ಹೆಸರಲ್ಲಿ ಅದರ ದಾಖಲೆ ಇದೆ. ಈ ಜಾಗದಲ್ಲಿ 33 ಕೆ.ವಿ. ವಿದ್ಯುತ್ ಲೈನ್ ಹಾದು ಹೋಗುತ್ತಿದ್ದು, ಅದರಡಿಯಲ್ಲಿರುವ ಮರಗಳನ್ನು ಕಡಿಯಬೇಕೆಂದು ಸ್ಥಳೀಯರು ನಗರ ಪಂಚಾಯತ್ ಗೆ ಅರ್ಜಿ ಕೊಟ್ಟಿದ್ದ ಪ್ರಕಾರ ಮರ ಕಡಿಸಲು ನಗರ ಪಂಚಾಯತ್ ನಿಂದ ನನಗೆ ನೋಟೀಸು ಬಂದಿತ್ತು. ಅದರನ್ವಯ ನಾನು 25 ಅಕೇಶಿಯ ಮರಗಳನ್ನು ಕಡಿಸಿದ್ದೇನೆ. ಮರಗಳನ್ನು ಸರಕಾರಿ ಡಿಪೋಗೆ ಕೊಂಡೊಯ್ಯಲಾಗುತ್ತಿದೆ. ನಲ್ವತ್ತು ವರ್ಷಗಳ ಹಿಂದೆ ಈ ಜಾಗವನ್ನು ಪೋಲೀಸ್ ಕ್ವಾರ್ಟರ್ಸ್ ಗೆ ಮೀಸಲಿಡಲು ಪ್ರಯತ್ನಿಸಿದ್ದರು. ಆಗ ನನ್ನ ತಂದೆ ಕೋರ್ಟಿಗೆ ಹೋಗಿ ಆ ಆದೇಶವನ್ನು ರದ್ದು ಪಡಿಸಿ ನಮ್ಮ ಜಾಗವನ್ನು ನಮಗೆ ಉಳಿಸಿದ್ದಾರೆ ” ಎಂದು ಹೇಳಿದರು.