Home Uncategorized ಬೆಲೆ ಏರಿಕೆ ಖಂಡಿಸಿ ಕೇಂದ್ರ ಸರ್ಕಾರದ ವಿರುದ್ಧ ಸುಳ್ಯ ಯುವ ಕಾಂಗ್ರೆಸ್‌ ಪ್ರತಿಭಟನೆ

ಬೆಲೆ ಏರಿಕೆ ಖಂಡಿಸಿ ಕೇಂದ್ರ ಸರ್ಕಾರದ ವಿರುದ್ಧ ಸುಳ್ಯ ಯುವ ಕಾಂಗ್ರೆಸ್‌ ಪ್ರತಿಭಟನೆ

0

ಬಿ.ಜೆ.ಪಿ.ಯವರು ಆತ್ಮವಿಮರ್ಶೆ ಮಾಡಿಕೊಳ್ಳಬೇಕೆಂದು ಕರೆ

ಅಗತ್ಯ ವಸ್ತುಗಳ ಬೆಲೆ ಏರಿಕೆ ಹಾಗೂ ಗ್ಯಾಸ್ ಸಿಲಿಂಡರ್, ಪೆಟ್ರೋಲ್ – ಡೀಸೆಲ್ ಬೆಲೆ ಏರಿಕೆಯನ್ನು ಖಂಡಿಸಿ ಸುಳ್ಯ ಯುವ ಕಾಂಗ್ರೆಸ್ ನೇತೃತ್ವದಲ್ಲಿ ಕೇಂದ್ರ ಸರಕಾರದ ವಿರುದ್ಧ ಖಾಸಗಿ ಬಸ್‌ ನಿಲ್ದಾಣದ ಬಳಿ ಎ.12 ರಂದು ಸಂಜೆ ಪ್ರತಿಭಟನೆ ನಡೆಯಿತು.

ಪ್ರತಿಭಟನೆಗೆ ಸುಳ್ಯ ಬ್ಲಾಕ್ ಕಾಂಗ್ರೆಸ್ಸಿನ ನಾಯಕರುಗಳು ಹಾಗೂ ಕಾಂಗ್ರೆಸ್ ಪಕ್ಷದ ವಿವಿಧ ಸಂಘಟನೆಗಳ ಮುಖಂಡರುಗಳು ಸಾಥ್ ನೀಡಿ, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಯನ್ನು ಕೂಗಿ ಸಾಂಕೇತಿಕವಾಗಿ ರಸ್ತೆ ತಡೆಯನ್ನು ನಡೆಸಿ ಆಕ್ರೋಶವನ್ನು ವ್ಯಕ್ತಪಡಿಸಿದರು.

ಪ್ರತಿಭಟನಾ ಸಭೆಯನ್ನು ಉದ್ಘಾಟಿಸಿ ಭಾಷಣ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ.ಎಂ.ಶಹೀದ್ ” ಕೇಂದ್ರ ಸರಕಾರ ಕಳೆದ 10 ವರ್ಷಗಳಿಂದ ದೇಶವನ್ನು ಬೆಲೆ ಏರಿಕೆ ಮತ್ತು ತಮ್ಮ ನಿಕೃಷ್ಟ ಆರ್ಥಿಕ ನೀತಿಯಿಂದ ದಿವಾಳಿ ಮಾಡುವ ಹಂತಕ್ಕೆ ತಂದಿದೆ. ನಿರಂತರ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ತೆರಿಗೆ ಯನ್ನು ಹೇರಿ ಜನತೆಯನ್ನು ಬಡವರನ್ನಾಗಿ ಮಾಡುತ್ತಿದೆ. ಕಚ್ಚಾ ತೈಲದ ಬೆಲೆ ಕಡಿಮೆ ಇದ್ದರೂ ಸಹ ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಹೆಚ್ಚಳ ಮಾಡಿರುವುದು ಖಂಡನೀಯ” ಎಂದು ಹೇಳಿದರು.

ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್ ಕಜೆಗದ್ದೆ ಯವರು ಪ್ರತಿಭಟನಾ ಸಭೆಗೆ ಬಂದವರನ್ನು ಸ್ವಾಗತಿಸಿ, ಕೇಂದ್ರ ಸರಕಾರದ ಬೆಲೆ ಏರಿಕೆ ನೀತಿಯನ್ನು ಖಂಡಿಸಿದರು.

ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಎನ್.ಜಯಪ್ರಕಾಶ್ ರೈ ಮಾತನಾಡಿ ” ಅಗತ್ಯ ವಸ್ತುಗಳ ಮತ್ತು ಪೆಟ್ರೋಲ್‌, ಡೀಸೆಲ್‌, ಚಿನ್ನ, ಗ್ಯಾಸ್ ಈ ಎಲ್ಲಾ ಬೆಲೆಗಳನ್ನು ಹೆಚ್ಚಿಸಿರುವುದು ಬಿಜೆಪಿ ಬೆಂಬಲಿತ ಆಡಳಿತದ ಕೇಂದ್ರ ಸರಕಾರ. ಈ ಬಗ್ಗೆ ಬಿಜೆಪಿಯವರು ಯಾಕೆ ಮಾತನಾಡುತ್ತಿಲ್ಲ? ಎರಡು ಅವಧಿಯಲ್ಲಿ ಭಾರೀ ಬಹುಮತ ಪಡೆದ ನರೇಂದ್ರ ಮೋದಿಯವರ ನೇತೃತ್ವದ ಬಿ.ಜೆ.ಪಿ. ಮೂರನೇ ಅವಧಿಗೆ ಬಹುಮತ ಕೂಡ ಪಡೆಯದಷ್ಟು ಅಲ್ಪಮತಕ್ಕೆ ಕುಸಿದುದು ಯಾಕೆ ಎಂದು ಬಿ.ಜೆ.ಪಿ.ಯವರು ಆತ್ಮವಿಮರ್ಶೆ ಮಾಡಿಕೊಳ್ಳಬೇಕು” ಎಂದರು.

ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ, ನಿಯೋಜಿತ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ಮಾತನಾಡಿ ” ಬಿಜೆಪಿಯವರು ಜನಾಕ್ರೋಶ ಸಭೆಗಳನ್ನು ನಡೆಸಿ ರಾಜ್ಯ ಸರಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ ಪ್ರಸ್ತುತ ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಕೇಂದ್ರ ಸರ್ಕಾರ ಮಾಡುತ್ತಿರುವ ಜನರ ಮೇಲಿನ ಬೆಲೆ ಏರಿಕೆಯ ಸಮಸ್ಯೆಗೆ ಪರಿಹಾರವಾಗಿ ರಾಜ್ಯದ ಜನತೆಗೆ ಪಂಚ ಗ್ಯಾರಂಟಿಗಳನ್ನು ನೀಡಿ ಜನರ ಕಷ್ಟಕ್ಕೆ ನೆರವಾಗುತ್ತಿದೆ. ಕರ್ನಾಟಕದ ಬಿಜೆಪಿ ನಾಯಕರುಗಳು ಪ್ರಧಾನಿ ಮೋದಿಯವರನ್ನು ಮೆಚ್ಚಿಸಲು ಕರ್ನಾಟಕದಲ್ಲಿ ಜನಾಕ್ರೋಶ ಯಾತ್ರೆಯನ್ನು ಮಾಡುವ ಮೂಲಕ ರಾಜ್ಯದ ಜನತೆಗೆ ಸುಳ್ಳುಗಳನ್ನು ಹೇಳುತ್ತಾ ಬರುತಿದ್ದಾರೆ” ಎಂದು ಹೇಳಿದರು.


ಗ್ಯಾರಂಟಿ ಅನುಷ್ಠಾನ ಸಮಿತಿಯ ಸುಳ್ಯ ತಾಲೂಕು ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ ಮಾತನಾಡಿ ” ಬೆಲೆ ಏರಿಸುತ್ತಿರುವ ಕೇಂದ್ರ ಸರಕಾರದ ವಿರುದ್ಧ ಪ್ರತಿಭಟನೆ ಮಾಡಬೇಕಾದ ರಾಜ್ಯ ಬಿಜೆ.ಪಿ.ಯವರು ಮೋದಿಯವರನ್ನು ಮೆಚ್ಚಿಸುವುದಕ್ಕಾಗಿ ರಾಜ್ಯ ಸರಕಾರದ ವಿರುದ್ಧ ಜನಾಕ್ರೋಶ ಯಾತ್ರೆ ಮಾಡುತ್ತಿದ್ದಾರೆ. ಯುವಕರು ಉದ್ಯೋಗ ಬೇಕೆಂದು ಕೇಳುವಾಗ ಮೋದಿಯವರು ಪಕೋಡ ಮಾರಿ ಅನ್ನುತ್ತಿದ್ದರೆ, ನಮ್ಮ ಕಾಂಗ್ರೆಸ್ ಸರಕಾರ
ಪದವೀಧರ ನಿರುದ್ಯೋಗಿಗಳಿಗೆ ತಿಂಗಳಿಗೆ 3 ಸಾವಿರ ರೂ.ಗಳಂತೆ
ಯುವನಿಧಿ ಯೋಜನೆಯಲ್ಲಿ 51 ಲಕ್ಷ ರೂ.ಗಳನ್ನು ಸುಳ್ಯ ತಾಲೂಕಿನ 350 ಫಲಾನುಭವಿಗಳಿಗೆ ಇದುವರೆಗೆ ನೀಡಿದೆ” ಎಂದರು.
ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ್ ಮಾತನಾಡಿ ” ಬಿ.ಜೆ.ಪಿ.ಯವರು ನಿಜವಾಗಿ ಪ್ರತಿಭಟನೆ ಮಾಡಬೇಕಾದುದು ಕೇಂದ್ರ ಸರಕಾರದ ವಿರುದ್ಧ. ಯಾಕೆಂದರೆ ಕೇಂದ್ರ ಸರಕಾರ ಬೆಲೆ ಏರಿಕೆ ಮಾಡುತ್ತಿರುವುದರಿಂದ ಜನಸಾಮಾನ್ಯರು ಯಾತನೆ ಅನುಭವಿಸುತ್ತಿದ್ದಾರೆ” ಎಂದರು.

ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಿ.ಎಸ್‌.ಗಂಗಾಧ‌ರ್ ಮಾತನಾಡಿ “. ” ಎಂದರು.
ಸಾಮಾಜಿಕ ಹೋರಾಟಗಾರ ಆಮ್ ಆದ್ಮಿ ಪಕ್ಷದ ಮುಂದಾಳು ಅಶೋಕ್ ಎಡಮಲೆ ಮಾತನಾಡಿ ” ಬೆಲೆ ಏರಿಕೆಯ ಪರಿಣಾಮಗಳನ್ನು ಎದುರಿಸಲು ರಾಜ್ಯ ಸರಕಾರ ಪಂಚಗ್ಯಾರಂಟಿಗಳನ್ನು ನೀಡುತ್ತಿದೆ. ನಾನು ಕೂಡ ಅದರ ಫಲಾನುಭವಿಯಾಗಿದ್ದೇನೆ. ಆದರೆ ಕೇಂದ್ರದ ಬಿ.ಜೆ.ಪಿ. ಸರಕಾರ ಕಚ್ಛಾ ತೈಲದ ಬೆಲೆ ಕಡಿಮೆಯಾಗಿದ್ದರೂ ಪೆಟ್ರೋಲ್ ಡೀಸೆಲ್ ದರ ಏರಿಸುತ್ತಲೇ ಇದ್ದು ಜನಸಾಮಾನ್ಯರ ಜೀವನವನ್ನು ದುಸ್ತರಗೊಳಿಸುತ್ತಿದೆ” ಎಂದರು.

ಸುಳ್ಯ ನಗರ ಪ್ರಾಧಿಕಾರದ ಅಧ್ಯಕ್ಷ ಕೆ.ಎಂ.ಮುಸ್ತಫಾ ಮಾತನಾಡಿ ” 2014 ರಲ್ಲಿ ಬಿ.ಜೆ.ಪಿ. ಸರಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಶೇಕಡಾ 200 ರಷ್ಟು ಬೆಲೆ ಏರಿಕೆಯಾಗಿದೆ. ರಾಜ್ಯ ಸರಕಾರ ಪಂಚಗ್ಯಾರಂಟಿಗಳನ್ನು ಕೊಟ್ಟು ಜನರಿಗೆ ನೆರವಾಗುತ್ತಿದೆ” ಎಂದರು.
ಸುಳ್ಯ ವಿಧಾನಸಭಾ ಕ್ಷೇತ್ರ ಯೂತ್ ಕಾಂಗ್ರೆಸ್ ಅಧ್ಯಕ್ಷ ಫೈಝಲ್ ಕಡಬ ಮೊದಲಾದವರು ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ನಂತರ ಸಾಂಕೇತಿಕವಾಗಿ ಮಾಣಿ ಮೈಸೂರು ಹೆದ್ದಾರಿಯಲ್ಲಿ ಗ್ಯಾಸ್ ಸಿಲಿಂಡರ್ ಇಟ್ಟು ರಸ್ತೆ ತಡೆ ಮಾಡಿ, ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗಲಾಯಿತು.

ಪ್ರತಿಭಟನಾ ಸಭೆಯಲ್ಲಿ ಯುವ ಕಾಂಗ್ರೆಸ್ ಸುಳ್ಯ ವಿಧಾನಸಭಾ ಉಪಾಧ್ಯಕ್ಷ ರಂಜಿತ್ ರೈ ಮೇನಾಲ, ಸುಳ್ಯ ಬ್ಲಾಕ್ ಯುವ ಕಾಂಗ್ರೆಸ್ ಉಪಾಧ್ಯಕ್ಷ ಆಶಿಕ್ ಅರಂತೋಡು, ಬ್ಲಾಕ್ ಕಾಂಗ್ರೆಸ್ ಮುಖಂಡರುಗಳಾದ ಸತ್ಯಕುಮಾ‌ರ್ ಆಡಿಂಜ, ಎಸ್.ಸಂಶುದ್ದೀನ್ ಅರಂಬೂರು, ಭವಾನಿಶಂಕರ ಕಲ್ಮಡ್ಕ, ಇಕ್ಬಾಲ್ ಎಲಿಮಲೆ, ಸಿದ್ದೀಕ್ ಕೊಕ್ಕೋ, ಡೇವಿಡ್ ಧೀರ ಕ್ರಾಸ್ತಾ, ಇಂಟೆಕ್‌ ಅಧ್ಯಕ್ಷ ಶಾಫಿ ಕುತ್ತಮೊಟ್ಟೆ, ರಾಜು ಪಂಡಿತ್, ಧರ್ಮಪಾಲ ಕೊಯಿಂಗಾಜೆ, ಜಿ.ಕೆ.ಹಮೀದ್‌, ಸುಮತಿ ಶಕ್ತಿವೇಲು, ಎಸ್.ಕೆ.ಹನೀಫ್, ದಿನಕರ ಸಣ್ಣಮನೆ, ವಿಮಲಾ ಪ್ರಸಾದ್, ಎ.ಬಿ.ಅಬ್ಬಾಸ್ ಅಡ್ಕ, ಮಂಜುನಾಥ ಮಡ್ತಿಲ, ಧನುಷ್ ಕುಕ್ಕೆಟ್ಟಿ, ಪರಮೇಶ್ವರ ಕೆಂಬಾರೆ, ಶ್ರೀಮತಿ ಪ್ರವೀಣಾ ರೈ ಮರುವಂಜ, ಜಯಪ್ರಕಾಶ್ ನೆಕ್ರೆಪ್ಪಾಡಿ, ಶ್ರೀಮತಿ ತಿರುಮಲೇಶ್ವರಿ ಅರ್ಬಡ್ಕ, ಎಂ.ಜೆ.ಶಶಿಧರ್, ಮುಜೀಬ್ ಪೈಚಾರ್, ಗಣೇಶ್ ನಾಗಪಟ್ಣ, ಹನೀಫ್ ಬೀಜಕೊಚ್ಚಿ, ನಿಸಾರ್ ಪೈಂಬೆಚ್ಚಾಲ್, ಅಣ್ಣಾದೊರೈ ಅಡ್ಯಡ್ಕ, ಬೋಜಪ್ಪ ನಾಯ್ಕ್, ರಿಯಾಜ್ ಕಟ್ಟೆಕಾರ್, ನಂದರಾಜ್ ಸಂಕೇಶ, ಸೇರಿದಂತೆ ಅನೇಕ ಮುಖಂಡರುಗಳು ಹಾಗೂ ಕಾರ್ಯಕರ್ತರುಗಳು ಭಾಗವಹಿಸಿದ್ದರು.
ಬ್ಲಾಕ್ ಕಾಂಗ್ರೆಸ್ ಮಾಜಿ ಉಪಾಧ್ಯಕ್ಷ ಕೆ.ಗೋಕುಲದಾಸ್ ಕಾರ್ಯಕ್ರಮ ನಿರೂಪಿಸಿದರು.

NO COMMENTS

error: Content is protected !!
Breaking