ಗೃಹ ಲಕ್ಷ್ಮಿ ಗ್ಯಾರಂಟಿ ಜಾರಿ ಮುಂದೂಡಿಕೆ

0

ನಾಳೆಯಿಂದ ಆರಂಭಗೊಳ್ಳಲ್ಲ ಅರ್ಜಿ ಸಲ್ಲಿಕೆ

ನಾಳೆಯಿಂದ ಗೃಹಲಕ್ಷ್ಮೀಯೋಜನೆ ಜಾರಿಯಾಗಲಿದ್ದು, ಅರ್ಜಿ ಸಲ್ಲಿಕೆ ಆರಂಭ ಮಾಡಬಹುದು ಎಂದಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌, ಕ್ಯಾಬಿನೆಟ್‌ ಸಭೆಯ ಬಳಿಕ ತಮ್ಮ ನಿರ್ಧಾರವನ್ನು ಬದಲಿದ್ದು ಈ ಯೋಜನೆ ಜಾರಿ ಮುಂದೂಡಿಕೆಯಾಗಿದೆ ಎಂದಿದ್ದಾರೆ.

ಕಾಂಗ್ರೆಸ್‌ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಪ್ರಮುಖ ಯೋಜನೆಯಾಗಿದ್ದ ಗೃಹಲಕ್ಷ್ಮೀ ಯೋಜನೆಗೆ ನಾಳೆಯಿಂದ ಚಾಲನೆ ಸಿಗಬೇಕಿತ್ತು. ಕಳೆದ ಕ್ಯಾಬಿನೆಟ್‌ ಸಭೆಯ ಬಳಿಕ ಮುಖ್ಯಮಂತ್ರಿ ಸಿದ್ಧರಾಮಯ್ಯ ಇದನ್ನು ಘೋಷಣೆ ಮಾಡಿದ್ದು ಮಾತ್ರವಲ್ಲದೆ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಕೂಡ ಗುರುವಾರ ಇದರ ಮಾಹಿತಿ ನೀಡಿದ್ದರು. ಯಾವ ರೀತಿಯಲ್ಲಿ ಅರ್ಜಿ ಸಲ್ಲಿಕೆ ಮಾಡಬೇಕು ಯಾರೆಲ್ಲಾ ಸಲ್ಲಿಕೆ ಮಾಡಬೇಕು ಎನ್ನುವುದರ ಬಗ್ಗೆ ಪತ್ರಿಕಾ ಪ್ರಕಟಣೆ ಕೂಡ ನೀಡಲಾಗಿತ್ತು. ಆದರೆ, ಇಂದು ಸರ್ಕಾರದ ಕ್ಯಾಬಿನೆಟ್‌ ಸಭೆಯ ಬಳಿಕ ಈ ಗ್ಯಾರಂಟಿ ಜಾರಿ ಮುಂದೂಡಿಕೆಯಾಗಿದ್ದಾಗಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕನಿಷ್ಠ ನಾಲ್ಕೈದು ದಿನಗಳ ಕಾಲ ಗೃಹ ಲಕ್ಷ್ಮೀ ಯೋಜನೆ ಮುಂದೂಡಿಕೆಯಾಗಿದ್ದಾಗಿ ತಿಳಿಸಿದ್ದಾರೆ. ಶುಕ್ರವಾರ ಯೋಜನೆ ಲಾಂಚ್‌ ಆಗೋದಿಲ್ಲ ಎಂದು ತಿಳಿಸಿದ್ದಾರೆ. ಯೋಜನೆ ಅರ್ಜಿ ಭರ್ತಿ ಮಾಡಲು ಬೇರೆ ಬೇರೆ ಅವಕಾಶ ಕೊಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ಇದಕ್ಕೂ ಮುನ್ನ ನೀಡಿದ್ದ ಪತ್ರಿಕಾ ಪ್ರಕಟಣೆಯಲ್ಲಿ ಗೃಹಲಕ್ಷ್ಮೀ ಯೋಜನೆಯ ನೋಂದಣಿ ಶುಕ್ರವಾರದಿಂದ ಆರಂಭವಾಗಲಿದೆ ಎಂದು ತಿಳಿಸಲಾಗಿತ್ತು. ಬೆಂಗಳೂರು ಒನ್‌, ಗ್ರಾಮ್‌ ಒನ್‌ನಲ್ಲಿ ನೋಂದಣಿಗೆ ಅವಕಾಶ ಇರಲಿದೆ. ಸೇವಾಸಿಂಧು ಪೋರ್ಟಲ್‌ನಲ್ಲಿಯೂ ನೋಂದಣಿಗೆ ಅವಕಾಶವಿದೆ. ಇದಕ್ಕೆ ಬ್ಯಾಂಕ್‌, ಆಧಾರ್‌,ಪತಿ ಅಥವಾ ಮಗ ತೆರಿಗೆದಾರರು ಅಲ್ಲ ಎಂದು ತೋರಿಸುವ ಒಂದು ಪ್ರತಿಯನ್ನು ಲಗತ್ತಿಸಬೇಕಾಗಿದೆ. ಗೃಹಲಕ್ಷ್ಮಿ ಯೋಜನೆಯ ಮೂಲಕ ಮುಂದಿನ ಐದು ವರ್ಷಗಳ ಕಾಲ ಮನೆ ಒಡತಿಯ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು 2,000 ರೂ. ಜಮೆ ಮಾಡಲಾಗುತ್ತದೆ. ಮುಂದಿನ ಆಗಸ್ಟ್​ 15ರಿಂದ ಪ್ರತಿ ತಿಂಗಳು ರಾಜ್ಯದಲ್ಲಿರುವ ಬಿಪಿಎಲ್ ಹಾಗೂ ಎಪಿಎಲ್ ಕುಟುಂಬಗಳ ಮನೆ ಒಡತಿಯ ಖಾತೆಗೆ 2000 ರೂಪಾಯಿ ಹಣ ವರ್ಗಾವಣೆಯಾಗಲಿದೆ.