ಯುವಜನ ಸಂಯುಕ್ತ ಮಂಡಳಿ ಸುಳ್ಯ ಮತ್ತು ಎನ್ನೆಂಸಿ ನೇಚರ್ ಕ್ಲಬ್ ವತಿಯಿಂದ ಪಶ್ಚಿಮ ಘಟ್ಟಗಳ ಮಹತ್ವ ಮತ್ತು ಅಗತ್ಯ ಕುರಿತು ಮಾಹಿತಿ ಹಾಗೂ ಸಂವಾದ ಕಾರ್ಯಕ್ರಮ

0


ನೆಹರೂ ಸ್ಮಾರಕ ಮಹಾವಿದ್ಯಾಲಯದಲ್ಲಿ ಯುವಜನ ಸಂಯುಕ್ತ ಮಂಡಳಿ ಸುಳ್ಯ ಹಾಗೂ ಕಾಲೇಜಿನ ನೇಚರ್ ಕ್ಲಬ್ ಘಟಕದ ವತಿಯಿಂದ ಪಶ್ಚಿಮ ಘಟ್ಟಗಳ ಮಹತ್ವ ಮತ್ತು ಅಗತ್ಯ ಕುರಿತಾದ ಮಾಹಿತಿ ಹಾಗೂ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ಜೂನ್ 28 ಬುಧವಾರದಂದು ಕಾಲೇಜಿನ ದೃಶ್ಯ ಶ್ರವಣ ಕೊಠಡಿಯಲ್ಲಿ ನಡೆಯಿತು. ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಸುಳ್ಯದ ಕಾರ್ಯದರ್ಶಿ ಹೇಮನಾಥ್ ಕುರುಂಜಿ ಗಿಡಕ್ಕೆ ನೀರೆರೆದು ಕಾರ್ಯಕ್ರಮವನ್ನು ಉದ್ಘಾಟಿಸಿ ವಿದ್ಯಾರ್ಥಿಗಳಲ್ಲಿ ಪರಿಸರ ಪ್ರೀತಿ ಜಾಗೃತಿ ಕುರಿತಾಗಿ ಮಾತನಾಡಿದರು.


ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ ಖ್ಯಾತ ಪರಿಸರವಾದಿ, ಚಿತ್ರಕಲಾವಿದ, ನಡೆದಾಡುವ ಪಶ್ಚಿಮ ಘಟ್ಟ ಎಂದೇ ಹೆಸರುವಾಸಿ ದಿನೇಶ್ ಹೊಳ್ಳ ಮಾತನಾಡಿ, ಪಶ್ಚಿಮ ಘಟ್ಟಗಳು ಮಳೆ ಬರಲು ಹಾಗೂ ಮಳೆ ನೀರ ಸಂಗ್ರಹಣೆಗೆ ಬೆಟ್ಟ ಗುಡ್ಡ ಶೋಲಾ ಅರಣ್ಯ ವ್ಯವಸ್ಥೆಯ ಮೂಲಕ ನೀಡುತ್ತಿರುವ ನೈಸರ್ಗಿಕ ಕೊಡುಗೆಗಳು, ಇಲ್ಲಿನ ಜೀವವೈವಿಧ್ಯತೆಯ ಬಗ್ಗೆ ನೈಜ್ಯ ಚಿತ್ರಪಟಗಳ ಮೂಲಕ ವಿವರಿಸಿ ಹಲವು ಅವೈಜ್ಞಾನಿಕ ಯೋಜನೆಗಳ ಮೂಲಕ ಇಲ್ಲಿ ಆಗುತ್ತಿರುವ ತೊಂದರೆಗಳು ಮುಂದಾಗುವ ಪರಿಣಾಮಗಳು, ಹಲವು ಪರಿಸರ ಸಂರಕ್ಷಣಾ ಹೋರಾಟಗಳ ಬಗ್ಗೆ ತಿಳಿಸಿ ಕೆಲವು ಸಾಮಾಜಿಕ ಹೋರಾಟಗಾರರ ಪರಿಚಯ ಮಾಡಿಕೊಟ್ಟರು. ಪಶ್ಚಿಮ ಘಟ್ಟಗಳು ನಮ್ಮೆಲ್ಲರದು, ಅವುಗಳ ಉಳಿವಿನ ಹೊಣೆ ಕೂಡ ನಮ್ಮೆಲ್ಲರದು ಎಂದು ಕರೆ ನೀಡಿದರು. ಕಾಲೇಜಿನ ಗ್ರಂಥಾಲಯಕ್ಕೆ ಕೆಲವು ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದರು.


ಪ್ರಾಂಶುಪಾಲರಾದ ರುದ್ರಕುಮಾರ್ ಎಂ ಎಂ ಸಭಾಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಯುವಜನ ಸಂಯುಕ್ತ ಮಂಡಳಿ ಗೌರವ ಅಧ್ಯಕ್ಷ ದಯಾನಂದ ಕೇರ್ಪಳ, ಕಾರ್ಯದರ್ಶಿ ಸಂಜಯ್ ನೆಟ್ಟಾರ್, ಕಾಲೇಜಿನ ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ರತ್ನಾವತಿ ಡಿ ಉಪಸ್ಥಿತರಿದ್ದರು. ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ ತೇಜಸ್ವಿ ಕಡಪಳ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿ, ನೇಚರ್ ಕ್ಲಬ್ ಸಂಯೋಜಕ ಕುಲದೀಪ್ ಪೆಲ್ತಡ್ಕ ವಂದಿಸಿದರು. ಕು. ಚಂಪಾ ಮತ್ತು ತಂಡ ಪ್ರಾರ್ಥಿಸಿ, ಕು. ಅರ್ಚನಾ ಅತಿಥಿಗಳನ್ನು ಪರಿಚಯಿಸಿದರು. ನೇಚರ್ ಕ್ಲಬ್ ಕಾರ್ಯದರ್ಶಿ ಕು. ಶ್ರೇಯಾ ಕಾರ್ಯಕ್ರಮ ನಿರೂಪಿಸಿದರು. ಯುವಜನ ಸಂಯುಕ್ತ ಮಂಡಳಿಯ ನಿರ್ದೇಶಕರುಗಳು, ಕಾಲೇಜಿನ ಉಪನ್ಯಾಸಕರು, ನೇಚರ್ ಕ್ಲಬ್ ಸದಸ್ಯರು ಮತ್ತು ಕಾಲೇಜು ಸಿಬ್ಬಂದಿ ವರ್ಗದವರು ಸಹಕರಿಸಿದರು.