ಇಂದು ಪತ್ರಿಕಾ ದಿನಾಚರಣೆ

0

ನಿಸ್ವಾರ್ಥ ಸೇವೆಯನ್ನು ಮಾಡುತ್ತಿರುವ ಪತ್ರಿಕೆಗಳಿಗೊಂದು ಸಲಾಂ

ಕನ್ನಡ ಪತ್ರಿಕೆಗಳು ಸ್ವಾತಂತ್ರ್ಯಪೂರ್ವದಲ್ಲಿ, ಸ್ವಾತಂತ್ರ್ಯ ಸಂಗ್ರಾಮದ ಅವಧಿಯಲ್ಲಿ ಹಾಗೂ ಸ್ವಾತಂತ್ರ್ಯಾ ನಂತರ ಕರ್ನಾಟಕ ಏಕೀಕರಣದ ಹೋರಾಟದಲ್ಲೂ, ನಾಗರಿಕತೆಯ ಬೆಳವಣಿಗೆಯಲ್ಲೂ ಪ್ರಮುಖ ಪಾತ್ರವನ್ನು ವಹಿಸಿದೆ. ಜನರ ಧ್ವನಿಯಾಗಿ, ಸಮಾಜದ ಕೈಗನ್ನಡಿಯಾಗಿ ಕನ್ನಡ ಪತ್ರಿಕೆಗಳು ಇಂದಿನ ಸ್ಪರ್ಧಾತ್ಮಕ ಯುಗದಲ್ಲೂ ತನ್ನದೇ ಆದ ವಿಶಿಷ್ಟ ಛಾಪನ್ನು ಮೂಡಿಸಿ ನಾಗರಿಕ ಬದುಕಿನಲ್ಲಿ ವಿಶಿಷ್ಟ ಸ್ಥಾನಮಾನವನ್ನು ತನ್ನದಾಗಿಸಿಕೊಂಡಿದೆ. ನಾಗರಿಕ ಪ್ರಪಂಚದಲ್ಲಿ ವೃತ್ತ ಪತ್ರಿಕೆಗಳಿಗೆ ವಿಶೇಷ ಸ್ಥಾನವಿದೆ. ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಗಂತೂ ಪತ್ರಕರ್ತರ ಸಹಾಯ ಸಾಮಾನ್ಯವಾದದ್ದೇನಲ್ಲ. ಕನ್ನಡದಲ್ಲಿ ಪತ್ರಿಕೋದ್ಯಮ ಪ್ರಾರಂಭವಾದುದು ಕಳೆದ ಶತಮಾನದ ಉತ್ತರಾರ್ಧದಲ್ಲಿ. ಪಾಶ್ಚಾತ್ಯರ ಸಂಪರ್ಕವಾದ ಮೇಲೆ ಅವರು ಮುದ್ರಣಯಂತ್ರಗಳನ್ನು ಕರ್ನಾಟಕದಲ್ಲೂ ಬಳಕೆಗೆ ತಂದರು ನಂತರ ಅವರಿಂದಲ್ಲೇ ಆದಿಯ ಪತ್ರಿಕೆಗಳು ಪ್ರಾರಂಭವಾದವು. ಪಾದ್ರಿಗಳ ಪ್ರಯತ್ನದಿಂದ ಅವರು ಆ ಕೆಲಸವನ್ನು ತಮ್ಮ ಮತ ಪ್ರಚಾರಕಾರ್ಯಕ್ಕಾಗಿ ಪ್ರಾರಂಭಮಾಡಿದರು. ಆದರೂ ಪತ್ರಿಕೆಗಳು ಕನ್ನಡ ಜನ ಜೀವನದ ಪ್ರತಿಬಿಂಬವಾಗಿದೆ. ಕನ್ನಡ ಪತ್ರಿಕೋದ್ಯಮದ ಪಿತಾಮಹರೆಂಬ ಖ್ಯಾತಿಯೂ ಕ್ರೈಸ್ತ ಮಿಶನರಿಗಳಿಗೇ ಸಲ್ಲುತ್ತದೆ. ಧರ್ಮ ಪ್ರಚಾರದ ಜೊತೆಗೆ ಒಂದು ಪತ್ರಿಕೆಯನ್ನು ಪ್ರಸರಣ ರೂಪಕ್ಕೆ ತಂದು ಆ ಮೂಲಕ ಜನರಿಗೆ ಸುದ್ದಿ ಹಾಗೂ ಮಾಹಿತಿ ನೀಡಬೇಕೆಂಬ ಬಾಶೆಲ್ ಮಿಷನ್ ಚಿಂತಿಸಿದ ಫಲವಾಗಿ ಕನ್ನಡದ ಮೊತ್ತ ಮೊದಲ ಪತ್ರಿಕೆ ‘ಮಂಗಳೂರ ಸಮಾಚಾರ’ ಎಂಬ ಪಾಕ್ಷಿಕ 1843 ರಲ್ಲಿ ಸಾಕಾರ ರೂಪ ಪಡೆದು ನಾಗರಿಕ ಸಮಾಜಕ್ಕೆ ಅರ್ಪಣೆಗೊಂಡಿತು. ಬಾಶಲ್ ಮಿಷನ್‍ನ ‘ರೆವರೆಂಡ್ ಹರ್ಮನ್ ಮೊಗ್ಲಿಂಗ್’ ಈ ಪತ್ರಿಕೆಯ ಸಂಪಾದಕರಾಗಿದ್ದರು. ಇದರಿಂದಾಗಿ ಇವರನ್ನು ‘ಕರ್ನಾಟಕ ಪತ್ರಿಕಾ ರಂಗದ ಪಿತಾಮಹ’ ಎಂದು ಇಂದಿಗೂ ಸ್ಮರಿಸಿಕೊಳ್ಳಲಾಗುತ್ತಿದೆ.

ಪ್ರಮುಖ ಸುದ್ದಿಗಳು ಹಾಗೂ ಸ್ಥಳೀಯ ಆಸಕ್ತಿದಾಯಕ ವಿಚಾರಗಳನ್ನು ಹೊತ್ತುಕೊಂಡು ‘ಮಂಗಳೂರ ಸಮಾಚಾರ’ದ ಮೊದಲ ಸಂಚಿಕೆ 1843ರ ಜುಲೈ 1 ರಂದು ಮಂಗಳೂರಿನಿಂದ ಪ್ರಕಟವಾಯಿತು. ಕನ್ನಡ ಪತ್ರಿಕಾ ರಂಗದ ಮೊದಲ ಆವೃತ್ತಿ ಹೊರಬಂದ ದಿನವನ್ನು ಸ್ಮರಿಸುವುದಕ್ಕಾಗಿ ಕರ್ನಾಟಕದಲ್ಲಿ ಇಂದಿಗೂ ಜುಲೈ 1 ರಂದು ‘ಪತ್ರಿಕಾ ದಿನ’ವಾಗಿ ಆಚರಿಸಲ್ಪಡುತ್ತಿದೆ.

ಕನ್ನಡದ ಚೊಚ್ಚಲ ಪತ್ರಿಕೆಯಾಗಿ ಹೊರಬಂದ ‘ಮಂಗಳೂರ ಸಮಾಚಾರ’ ಪ್ರಜ್ಞಾಪೂರ್ವಕ ಮಾಹಿತಿ, ಶಿಕ್ಷಣ ಮತ್ತು ಮನೋರಂಜನೆಯನ್ನು ಅಂದಿನ ಜನತೆಗೆ ಒದಗಿಸಿಕೊಡುವಲ್ಲಿ ಯಶಸ್ವಿಯಾಗಿತ್ತು. ಆಧುನಿಕ ಪತ್ರಿಕೋದ್ಯಮದ ಎಲ್ಲ ಲಕ್ಷಣಗಳನ್ನು ಮೈಗೂಡಿಸಿಕೊಂಡು ಮಂಗಳೂರು ಸಮಾಚಾರ ಹೊರಬರುವ ಮೂಲಕ ಜನರ ಜ್ಞಾನ ದಾಹಕ್ಕೆ ಸೂಕ್ತ ಸಿಂಚನವನ್ನು ನೀಡುತ್ತಿತ್ತು. ಇವೆಲ್ಲದರೊಟ್ಟಿಗೆ ಪತ್ರಿಕೆ ದೇಶಪ್ರೇಮಕ್ಕೆ, ದೇಶಭಕ್ತಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿತ್ತು. ವಿದೇಶಿ ಆಕ್ರಮಣಕಾರರ ವಿರುದ್ದ ಜನ ಸಂಘಟಿತರಾಗಿ ಎದ್ದುನಿಲ್ಲುವಂತೆ ಪತ್ರಿಕೆ ಪ್ರೇರಣೆ ನೀಡಿತು. ಸ್ಥಳೀಯ, ಪ್ರಾದೇಶಿಕ ಹಾಗೂ ರಾಷ್ಟ್ರೀಯ ವಿಷಯಗಳ ಮಾಹಿತಿಯ ಜೊತೆಗೆ ಅಂತರಾಷ್ಟ್ರೀಯ ಆಗುಹೋಗುಗಳ ಬಗ್ಗೆ ಓದುಗರಿಗೆ ಸರಳ ಭಾಷೆಯಲ್ಲಿ ಮನದಟ್ಟು ಮಾಡಿದ ಪತ್ರಿಕೆ ಸ್ವಾತಂತ್ರ್ಯ, ಸಮಾನತೆ ಹಾಗೂ ನ್ಯಾಯ ಮೊದಲಾದ ಮೌಲ್ಯಗಳ ಬಗ್ಗೆ ಜನಜಾಗೃತಿ ಮೂಡಿಸುವಲ್ಲಿಯೂ ಯಶ ಕಂಡಿತು.

ಇಂದು ಪತ್ರಿಕೋದ್ಯಮವೆಂಬುದು ಕಾಲದ ಸ್ಥಿತ್ಯಂತರದಲ್ಲಿ ಹಲವು ಬದಲಾವಣೆಗಳನ್ನು ಕಂಡಿದೆ. ಪತ್ರಿಕೋದ್ಯಮದ ರೀತಿ, ಸ್ವರೂಪ ಬದಲಾಗಿದೆ. ಮುದ್ರಣ ಮಾಧ್ಯಮದ ಜಾಗವನ್ನು ಬಹುಪಾಲು ಆನ್ ಲೈನ್ ಪತ್ರಿಕೆಗಳು ಆಕ್ರಮಿಸಿಕೊಳ್ಳುತ್ತಿವೆ. ಸಾಮಾಜಿಕ ತಾಣಗಳು ಕೂಡ ಸುದ್ದಿಗಳನ್ನು ಸೆಕೆಂಡು, ಸೆಕೆಂಡಿಗೂ ಹೊತ್ತು ತರುತ್ತವೆ. ಎಲೆಕ್ಟ್ರಾನಿಕ್ ಮಾಧ್ಯಮಗಳು ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿಕೊಂಡು ತಾಂತ್ರಿಕವಾಗಿ ಹೆಚ್ಚು ಸಮೃದ್ಧವಾಗುತ್ತಿವೆ. ಇಂದು ಸುದ್ದಿ ತಿಳಿಯಬೇಕೆಂದರೆ ಬಹುಪಾಲು ಮಂದಿ ಪತ್ರಿಕೆಯನ್ನು ಹಿಡಿದುಕೊಂಡು ಕೂರುವುದಿಲ್ಲ. ಕೈಯಲ್ಲಿ ಸ್ಮಾರ್ಟ್ ಫೋನ್, ಟ್ಯಾಬ್ ಇದ್ದರೆ ಸಾಕು, ಇಂಟರ್ನೆಟ್ ಸಂಪರ್ಕವಿದ್ದರೆ ಜಗತ್ತಿನ ಯಾವ ಭಾಗದ ವಿಷಯವನ್ನು ಕೂಡ ಅಂಗೈಯಲ್ಲಿ ಹಿಡಿದುಕೊಂಡು ನೋಡಬಹುದು ಎಂಬಂತಾಗಿದೆ. ತಂತ್ರಜ್ಞಾನದ ಬೆಳವಣಿಗೆ ಸುದ್ದಿ ಮಾಧ್ಯಮದ ಮೇಲೆ ಕೂಡ ಇಷ್ಟರ ಮಟ್ಟಿನ ಪರಿಣಾಮ ಬೀರಿದೆ.

ಆದರೂ ಕೂಡ ಪತ್ರಿಕೆಗಳನ್ನು ಹಿಡಿದುಕೊಂಡು ಅಕ್ಷರಗಳನ್ನು ಓದುವುದೆಂದರೆ ಅದರ ಮಜಾನೇ ಬೇರೆ, ಕಾಗದದ ಸ್ಪರ್ಶ ಹಿತಾನುಭವ ನೀಡುತ್ತದೆ, ಅದು ಆನ್ ಲೈನ್ ಮಾಧ್ಯಮದಲ್ಲಿ ಸಿಗಲಾರದು ಎಂದು ಹೇಳುವವರು ಈಗಲೂ ಇದ್ದಾರೆ.
ಪತ್ರಿಕೋದ್ಯಮ, ಪತ್ರಿಕಾ ಸಾಹಿತ್ಯಕ್ಕೆ ಭದ್ರ ತಳಪಾಯ ಪತ್ರಿಕೆಗಳು ಎಂದರೆ ಅತಿಶಯೋಕ್ತಿಯೆನಿಸಲಾರದು.

19ನೇ ಶತಮಾನದಲ್ಲಿ ಬಾಳಿ ಬದುಕಿದ ಕನ್ನಡ ಪತ್ರಿಕೋದ್ಯಮದ ಪಿತಾಮಹ ಮೊಗ್ಲಿಂಗ್ ಜರ್ಮನ್ ಮೂಲದವನಾದರೂ ಕನ್ನಡದಲ್ಲಿ ಅಪಾರ ಆಸಕ್ತಿ ಹಾಗೂ ಪ್ರೀತಿನ್ನಿಟ್ಟುಕೊಂಡು ಕನ್ನಡ ಭಾಷೆಗೆ ಸಂಬಂಧಿಸಿ ಅನೇಕ ವಿಷಯಗಳಲ್ಲಿ ಮೊದಲಿಗ ಎಂಬ ಖ್ಯಾತಿಗೂ ಪಾತ್ರರಾಗಿದ್ದಾರೆ. ನ್ನಡಕ್ಕಾಗಿ ತೋರಿದ ಪ್ರೀತಿ, ಅಭಿಮಾನ, ಆಸಕ್ತಿ ಮೊಗ್ಲಿಂಗೇತರ ಇನ್ಯಾವ ವಿದೇಶಿಯರಲ್ಲೂ ಕಂಡು ಬಂದಿಲ್ಲ ಎಂಬುದು ಕೂಡಾ ಅಷ್ಟೇ ಪ್ರಾಮುಖ್ಯವನ್ನು ಪಡೆಯುತ್ತದೆ. ಓರ್ವ ವಿದೇಶಿಗನಾಗಿ, ಅದರಲ್ಲೂ ಓರ್ವ ಧರ್ಮ ಪ್ರಚಾರಕನಾಗಿ ಭಾರತಕ್ಕೆ ಬಂದು ಕನ್ನಡಕ್ಕಾಗಿ ಇನ್ನಿಲ್ಲದ ಶ್ರಮವಹಿಸಿ ಕನ್ನಡ ಪತ್ರಿಕೋದ್ಯಮದ ಮೂಲಪುರುಷನಾಗಿ ಹಲವಾರು ಕೊಡುಗೆಗಳನ್ನು ನೀಡಿರುತ್ತಾರೆ.


‘ರೆವರೆಂಡ್ ಹರ್ಮನ್ ಫ್ರೆಡರಿಕ್ ಮೊಗ್ಲಿಂಗ್’ ಮುನ್ನುಡಿ ಬರೆದ ಕನ್ನಡ ಪತ್ರಿಕಾ ರಂಗಕ್ಕೆ ಇದೀಗ 180 ವಸಂತಗಳೇ ಸಂದಿವೆ. ತಮ್ಮ ಮೂಗಿನ ನೇರಕ್ಕೆ ಸುದ್ದಿ, ಲೇಖನಗಳು ಪ್ರಕಟವಾಗುತ್ತಿಲ್ಲ ಹಾಗೂ ಸಮಾಜದ ಏಳು-ಪೇರುಗಳು, ಆಡಳಿತ ವರ್ಗದ ವೈಫಲ್ಯಗಳು ಯಥಾವತ್ ಅನಾವರಣಗೊಳ್ಳುತ್ತಿವೆ ಎಂಬ ಒಂದೇ ಒಂದು ಕಾರಣಕ್ಕೆ ಪತ್ರಿಕೆಗಳು ಹಾಗೂ ಪತ್ರಕರ್ತರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮೊಟಕುಗೊಳಿಸುವ ಪ್ರಯತ್ನವನ್ನು ಹಿಂದಿನಿಂದಲೂ ಮಾಡಲಾಗುತ್ತಿದೆ. ಅವೆಲ್ಲವನ್ನೂ ಯಶಸ್ವಿಯಾಗಿ ಮೆಟ್ಟಿನಿಂತು ಕನ್ನಡ ಪತ್ರಿಕಾ ರಂಗ ತನ್ನ ಗಂಭೀರತೆಯನ್ನು, ಪ್ರಾಮುಖ್ಯತೆಯನ್ನು ಉಳಿಸಿಕೊಂಡು, ಬೆಳೆಸಿಕೊಂಡು ಬಂದಿದೆ. ಎಲ್ಲ ಏಳು-ಬೀಳುಗಳ ಮಧ್ಯೆ ಕನ್ನಡ ಪತ್ರಿಕಾರಂಗ ಇದೀಗ ಒಂದೂಮುಕ್ಕಾಲು ಶತಮಾನ ದಾಟಿ ಮುನ್ನಡೆಯುತ್ತಿರುವುದು ಸಾಧನೆಯೇ ಸರಿ.