ಸೂಪರ್ ಫುಡ್ ಸಿರಿ ಧಾನ್ಯ

0

ಆರೋಗ್ಯದ ಸಿರಿಯಾಗಿರುವ ಸಿರಿಧಾನ್ಯಗಳನ್ನು ಭಾರತೀಯ ಸೂಪರ್ ಫುಡ್ ಎಂದೂ ಕರೆಯುತ್ತಾರೆ. ಇತ್ತೀಚಿನ ದಿನಗಳಲ್ಲಿ ಜಾಗತಿಕವಾಗಿ ಉತ್ತಮ ದೈಹಿಕ ಸಧೃಡತೆ, ಉತ್ತಮ ಆರೋಗ್ಯ ಮತ್ತು ಪೌಷ್ಟಿಕಾಂಶಗಳ ಬಗ್ಗೆ ಜಾಗೃತಿ ದಿನೇ ದಿನೇ ಹೆಚ್ಚುತ್ತಿರುವುದರಿಂದ, ಕಡಿಮೆ ಗ್ಲೈಸೆಮಿಕ್ ಇಂಡಿಕ್ಸ್ (ಗ್ಲೂಕೋಸ್ ಅನುಪಾತ) ಮತ್ತು ಹೆಚ್ಚಿನ ನಾರಿನಂಶ ಹೊಂದಿರುವ ಸಿರಿಧಾನ್ಯಗಳಿಗೆ ಬೇಡಿಕೆ ಹೆಚ್ಚುತ್ತಲೇ ಇದೆ.

ಸಿರಿಧಾನ್ಯಗಳ ಬಳಕೆ ಇಂದು ನಿನ್ನೆಯದಲ್ಲ. ಸಾವಿರಾರು ವರ್ಷಗಳಿಂದಲೂ ಇದು ವಿಶ್ವದೆಲ್ಲೆಡೆ ಉಪಯೋಗಿಸಲ್ಪಡುತ್ತಿದೆ. ಪ್ರಾಚೀನ ಭಾರತೀಯ ವೈದ್ಯಪದ್ಧತಿಯಾದ ಆಯುರ್ವೇದದಲ್ಲೂ ಸಿರಿಧಾನ್ಯಗಳ ಬಗ್ಗೆ ಉಲ್ಲೇಖಗಳಿವೆ. ಸಿರಿಧಾನ್ಯಗಳನ್ನು ವಿಶ್ವದ 131 ದೇಶಗಳಲ್ಲಿ ಬೆಳೆಯಲಾಗುತ್ತಿದ್ದು, ಏಷ್ಯಾ ಮತ್ತು ಆಫ್ರಿಕಾ ಖಂಡಗಳಲ್ಲಿ ಸುಮಾರು 60 ಕೋಟಿ ಜನರ ಸಾಂಪ್ರದಾಯಕ ಆಹಾರ ಸಿರಿಧಾನ್ಯವಾಗಿದೆ. ಸಿರಿ ಧಾನ್ಯಗಳ ಉತ್ಪಾದನೆಯಲ್ಲಿ ನಮ್ಮ ಭಾರತದ ಪಾಲು ವಿಶ್ವದ ಶೇಕಡಾ 20 ರಷ್ಟು ಮತ್ತು ಏಪ್ಯಾ ಖಂಡದ ಸುಮಾರು 80 ಶೇಕಡಾದಷ್ಟು ಆಗಿರುತ್ತದೆ. ನಮ್ಮ ಕರ್ನಾಟಕವನ್ನು ಭಾರತದ ಸಿರಿಧಾನ್ಯಗಳ ರಾಜಧಾನಿ ಎಂದೂ ಕರೆಯುತ್ತಾರೆ. ಎರಡನೇ ಸ್ಥಾನದಲ್ಲಿ ರಾಜಸ್ಥಾನವಿದೆ.
ಸಿರಿಧಾನ್ಯಗಳನ್ನು ಜಗತ್ತಿನ ಮೊಟ್ಟ ಮೊದಲು ಬೆಳೆಯುತ್ತಿದ್ದ ರಾಷ್ಟ್ರಗಳೆಂದರೆ ಚೀನಾ, ಕೊರಿಯಾ, ಜಪಾನ್, ಭಾರತ ಹಾಗೂ ಏಷ್ಯಾ ಖಂಡದ ದೇಶಗಳು. 10 ಸಾವಿರ ವರ್ಷಗಳ ಇತಿಹಾಸ ಇರುವ ಸಿರಿ ಧಾನ್ಯಗಳನ್ನು ಅಕ್ಕಿ ಮತ್ತು ಗೋಧಿಯನ್ನು ಬೆಳೆಯುವ ಮೊದಲೇ ಮನುಷ್ಯ ಬೆಳೆಯುತ್ತಿದ್ದ ಮತ್ತು ಸೇವಿಸುತ್ತಿದ್ದ ಎಂದು ಇತಿಹಾಸದಿಂದ ತಿಳಿದುಬಂದಿದೆ.

ಸಿರಿಧಾನ್ಯಗಳು ಶರ್ಕರಪಿಷ್ಟ, ಪ್ರೊಟೀನ್, ವಿಟಮಿನ್ ಮತ್ತು ಅಮೀನೋ ಆಮ್ಲಗಳ ಉತ್ತಮ ಮೂಲವಾಗಿದ್ದು ದೇಶದ ರೋಗ ನಿರೋಧಕ ಶಕ್ತಿ ಹೆಚ್ಚಿಸುವುದಲ್ಲದೇ, ಮಧುಮೇಹ, ಹೃದಯದ ಖಾಯಿಲೆ ಮತ್ತು ಕ್ಯಾನ್ಸರ್‍ನಂತಹ ಖಾಯಿಲೆಗಳಿಂದ ರಕ್ಷಣೆ ನೀಡುತ್ತಿರುವುದು ಅಧ್ಯಯನಗಳಿಂದ ಸಾಬೀತಾಗಿದೆ. ಈ ಎಲ್ಲಾ ಹಿನ್ನಲೆಯಲ್ಲಿ ಸಿರಿಧಾನ್ಯಗಳ ಬಳಕೆ ಹೆಚ್ಚಿಸುವ ಉದ್ದೇಶದಿಂದ ಭಾರತದ ಒತ್ತಾಸೆಯ ಮೇರೆಗೆ 2023ನ್ನು ಅಂತರಾಷ್ಟ್ರೀಯ ಸಿರಿಧಾನ್ಯಗಳ ವರ್ಷ ಎಂದು ವಿಶ್ವ ಸಂಸ್ಥೆ ಘೋಷಿಸಿದೆ.

ಸಿರಿಧಾನ್ಯಗಳಲ್ಲಿರುವ ಕಬ್ಬಿಣ, ನಾರು, ಪಿಷ್ಟ, ಸುಣ್ಣ, ರಂಜಕ, ಖನಿಜಾಂಶ, ನಿಯಾಸಿನ್ ರೈಬೋಪ್ಲಾವಿನ್, ಥಯವಿನ್, ಕ್ಯಾರೋಟಿನ್ ಪ್ರಮಾಣ ಮತ್ತು ಅವುಗಳ ಆರೋಗ್ಯದ ಉಪಯುಕ್ತತೆಯನ್ನು ಗಮನದಲ್ಲಿಟ್ಟುಕೊಂಡು 3 ರೀತಿಯಲ್ಲಿ ವಿಂಗಡಿಸಲಾಗಿದೆ

1) ಸಕಾರಾತ್ಮಕ ಸಿರಿಧಾನ್ಯಗಳು
2) ನಕಾರಾತ್ಮಕ ಸಿರಿಧಾನ್ಯಗಳು
3) ತಟಸ್ಥ ಸಿರಿಧಾನ್ಯಗಳು

1) ಸಕಾರಾತ್ಮಕ ಸಿರಿಧಾನ್ಯಗಳು: ಈ ಸಿರಿಧಾನ್ಯಗಳಲ್ಲಿ ನಾರಿನಂಶ ಹೆಚ್ಚಿದ್ದು, ಗ್ಲೂಕೋಸನ್ನು ಸಮತೋಲಿತವಾಗಿ, ನಿಧಾನವಾಗಿ ರಕ್ತಕ್ಕೆ ಸೇರಿಸುತ್ತದೆ. ಉದಲು, ನವಣೆ, ಅರ್ಕ, ಕೊರಲೆ, ಸಾಮೆ ಈ ಐದು ಸಿರಿಧಾನ್ಯಗಳನ್ನು ಸಕಾರಾತ್ಮಕ ಸಿರಿಧಾನ್ಯ ಎನ್ನಲಾಗುತ್ತದೆ. ಈ ಐದು ಸಿರಿಧಾನ್ಯಗಳನ್ನು ಒಟ್ಟಾಗಿ ಪಂಚರತ್ನ ಸಿರಿಧಾನ್ಯ ಎಂದೂ ಕರೆಯಲಾಗುತ್ತದೆ. 100ಗ್ರಾಂ ತೂಕದ ಈ ಪಂಚ ಸಿರಿಧಾನ್ಯಗಳಲ್ಲಿ ನಾರಿನ ಪ್ರಮಾಣ 8ಗ್ರಾಂ ನಿಂದ 12.5 ಗ್ರಾಂ ವರೆಗೆ ಇರುತ್ತದೆ.

2) ನಕಾರಾತ್ಮಕ ಸಿರಿಧಾನ್ಯಗಳು: ಈ ಸಿರಿಧಾನ್ಯಗಳಲ್ಲಿ ನಾರಿನಂಶ ಬಹಳ ಕಡಿಮೆ ಇರುತ್ತದೆ ಮತ್ತು ದೇಹದಲ್ಲಿ ಗ್ಲೂಕೋಸನ ಅಂಶವನ್ನು ಶೀಘ್ರವಾಗಿ ಹೆಚ್ಚಿಸುತ್ತದೆ.ಈ ಕಾರಣದಿಂದ ಈ ಸಿರಿಧಾನ್ಯಗಳಿಗೆ ನಕಾರಾತ್ಮಕ ಸಿರಿಧಾನ್ಯ ಎಂಬ ಹಣೆಪಟ್ಟಿ ಬಂದಿದೆ. ಅಕ್ಕಿ ಮತ್ತು ಗೋಧಿ ಇದಕ್ಕೆ ಸೂಕ್ತವಾದ ಉದಾಹರಣೆ 100 ಗ್ರಾಂ ಅಕ್ಕಿ ಮತ್ತು ಗೋಧಿಯಲ್ಲಿ ನಾರಿನಂಶ ಕ್ರಮವಾಗಿ 0.2 ಮತ್ತು 1.2 ಗ್ರಾಂ ಇರುತ್ತದೆ. ಅಕ್ಕಿ ಮತ್ತು ಗೋಧಿಯ ಧಾನ್ಯಗಳು ಹೊಟ್ಟು ತೆಗೆದು ಪಾಲಿಷ್ ಮಾಡಿದ ಧಾನ್ಯಗಳು. ಹಾಗಾಗಿ ಅವುಗಳನ್ನು ಬಹುತೇಕ ಪೌಷ್ಟಿಕಾಂಶ ನಾಶ ವಾಗಿರುತ್ತದೆ. ಅವುಗಳು ಬಹುಬೇಗ ಕೊಬ್ಬಾಗಿ ನಮ್ಮ ದೇಹದಲ್ಲಿ ಮಾರ್ಪಾಡಾಗುತ್ತದೆ. ಅವುಗಳಲ್ಲಿ ಗ್ಲೂಕೋಸ್ ಪ್ರಮಾಣ ಕೂಡಾ ಜಾಸ್ತಿ ಇರುತ್ತದೆ. ಇದು ಮಧುಮೇಹಗಳಿಗೆ ತೊಂದರೆ ನೀಡುತ್ತದೆ. ಅಲ್ಲದೆ ರಕ್ತದಲ್ಲಿ ಕೊಬ್ಬಿನ ಅಂಶವನ್ನು ಹೆಚ್ಚಿಸಿ, ನಿಧಾನವಾಗಿ ರಕ್ತದೊತ್ತಡಕ್ಕೆ ಮುನ್ನುಡಿ ಬರೆಯುತ್ತದೆ. ಅಂತಿಮವಾಗಿ ಮೂತ್ರಪಿಂಡ ಮತ್ತು ಹೃದಯದ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಆದರೆ ಸಕಾರಾತ್ಮಕ ಸಿರಿಧಾನ್ಯಗಳಾದ ನವಣೆ, ಅರ್ಕ, ಸಾಮೆ,ಹಾರಕ ಮತ್ತು ರಾಗಿಯಲ್ಲಿ ನಾರಿನಂಶ ಹೆಚ್ಚಾಗಿರುವುದರಿಂದ ಸುಲಭವಾಗಿ ಜೀರ್ಣವಾಗುತ್ತದೆ. ರಕ್ತದಲ್ಲಿ ಸಕ್ಕರೆ ಅಂಶ ಏರದಂತೆ ನೋಡಿಕೊಳ್ಳಲು ರಾಗಿ ಮತ್ತು ನವಣೆ ಬಹಳ ಉತ್ತಮ

3) ತಟಸ್ಥ ಸಿರಿಧಾನ್ಯಗಳು: ಈ ತಟಸ್ಥ ಸಿರಿಧಾನ್ಯಗಳಲ್ಲಿ ನಾರಿನಂಶ ಹಿತ ಮಿತವಾದ ಪ್ರಮಾಣದಲ್ಲಿ ಇರುತ್ತದೆ. ಅದೇ ರೀತಿ ದೇಹದಲ್ಲಿ ಗ್ಲೂಕೋಸನ್ನು 3-4 ಗಂಟೆಗಳಲ್ಲಿ ಜೀರ್ಣವಾಗಿಸುತ್ತದೆ ಮತ್ತು ಸಕ್ಕರೆಯ ಪ್ರಮಾಣ ಸರಿಯಾದ ಪ್ರಮಾಣದಲ್ಲಿರುವಂತೆ ನೋಡಿಕೊಳ್ಳುತ್ತದೆ. ಸಜ್ಜೆ, ರಾಗಿ, ಬರಗು, ಬಿಳಿ ಜೋಳಗಳನ್ನು ತಟಸ್ಥ ಸಿರಿ ಧಾನ್ಯಗಳೆಂದು ಕರೆಯಲಾಗುತ್ತದೆ.

ಆಹಾರ ತಜ್ಞರ ಪ್ರಕಾರ ಸಿರಿಧಾನ್ಯಗಳಲ್ಲಿ ಅಕ್ಕಿ ಗೋಧಿಗಿಂದ 5 ಪಟ್ಟು ಹೆಚ್ಚು ಪ್ರೊಟೀನ್, ವಿಟಮಿನ್ ಮತ್ತು ಖನಿಜಾಂಶಗಳಿವೆ. ಸಾಮೆ ಮತ್ತು ನವಣೆಯಲ್ಲಿರುವಷ್ಟು ಪೋಷಕಾಂಶಗಳು ಇನ್ನಾವುದೇ ಆಹಾರ ಬೆಳೆಗಳಲ್ಲಿ ಇಲ್ಲ. ಸಿರಿಧಾನ್ಯಗಳು ಜೀರ್ಣವಾಗಲು ಹೆಚ್ಚು ಸಮಯ ಹಿಡಿದರೂ, ಬಹಳ ಸುಲಭ ಮತ್ತು ಚೆನ್ನಾಗಿ ಜೀರ್ಣವಾಗುತ್ತದೆ. ಇವುಗಳಲ್ಲಿ ಹೇರಳವಾಗಿರುವ ನಾರುಗಳೇ ಇದಕ್ಕೆ ಕಾರಣ. ಅಜೀರ್ಣ ಸಮಸ್ಯೆ, ಮಲಬದ್ಧತೆ ಮತ್ತು ಗ್ಲುಟಿನ್ ಅಲರ್ಜಿ ಇರುವವರಿಗೆ ಸಿರಿಧಾನ್ಯಗಳು ಬಹಳ ಉತ್ತಮ ಆಹಾರವಾಗಿರುತ್ತದೆ.
ಸಿರಿ ಧಾನ್ಯಗಳನ್ನು ಬೆಳೆಯಲು ಬಹಳ ಸುಲಭ ಮತ್ತು ಬರಗಾಲ ಸ್ನೇಹಿ ಬೆಳೆಗಳು ಇದಾಗಿದೆ. ಇವುಗಳಿಗೆ ನೀರು ಅತೀ ಕಡಿಮೆ ಇದ್ದರೂ ಸಾಕಾಗುತ್ತದೆ. ಕೇವಲ ಬೀಜ ಬಿತ್ತಿದರೆ ಸಾಕು, ಇವು ಉಲುಸಾಗಿ ಬೆಳೆಯುತ್ತದೆ ಮತ್ತು ಯಾವುದೇ ಕೀಟನಾಶಕಗಳ ಸಿಂಪಡಿಕೆ ಇವುಗಳಿಗೆ ಅಗತ್ಯವಿಲ್ಲ. ಸಿರಿಧಾನ್ಯದ ಅಡುಗೆಯಲ್ಲಿ ರುಚಿ ಹೆಚ್ಚು ಮತ್ತು ಪೌಷ್ಟಿಕಾಂಶವೂ ಹೆಚ್ಚು ಇರುತ್ತದೆ. ನಾರಿನಾಂಶ ಅಂತೂ ಅತೀ ಹೆಚ್ಚು ಇರುತ್ತದೆ. ಪ್ರತಿ 100 ಗ್ರಾಂ ಗೋಧಿ ಹಾಗೂ ಅಕ್ಕಿಯಲ್ಲಿ ಕ್ರಮವಾಗಿ 1.2 ಮತ್ತು 0.2 ನಷ್ಟು ನಾರಿನಂಶ ಇದ್ದರೆ ಅದೇ 100 ಗ್ರಾಂ ಸಿರಿಧಾನ್ಯದಲ್ಲಿ 8 ರಿಂದ 12 ರಷ್ಟು ನಾರಿನಂಶ ಇರುತ್ತದೆ. ಇದು ನಮ್ಮ ಆಹಾರ ವ್ಯವಸ್ಥೆಗೆ ಮತ್ತು ಜೀರ್ಣಾಂಗ ವ್ಯೂಹಕ್ಕೆ ಸ್ನೇಹಕರವಾದ ವಾತಾವರಣ ಕಲ್ಪಿಸುತ್ತದೆ. ಜೀರ್ಣವಾಗಲು ಹೆಚ್ಚು ಸಮಯ ಹಿಡಿದರೂ, ಹೆಚ್ಚಿನ ನಾರಿನಂಶದ ಕಾರಣದಿಂದ ಬಹಳ ಹೊತ್ತಿನವರೆಗೆ ಹಸಿವಾಗುವುದಿಲ್ಲ. ಸಿರಿ ಧಾನ್ಯಗಳಿಂದ ದೈನಂದಿನ ಆಹಾರದಲ್ಲಿ ವಿವಿಧ ರೀತಿಯ ಸಿಹಿ ತಿನಿಸು, ಆಹಾರ ಪದಾರ್ಥಗಳು ಸ್ವಾದಿಷ್ಟಕರವಾಗಿ ತಯಾರಿಸಲು ಸಾಧ್ಯವಿದೆ. ಒಮ್ಮೆ ಸಿರಿಧಾನ್ಯ ತಿಂದಲ್ಲಿ 6 ರಿಂದ 8 ಗಂಟೆ ಹಸಿವಾಗುವುದೇ ಇಲ್ಲ. ಇದಲ್ಲದೆ ಸಿರಿ ಧಾನ್ಯಗಳ ಉತ್ತಮ ಆಂಟಿ ಆಕ್ಸಿಡೆಂಟ್‍ಗಳು ಇದ್ದು ಅವುಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರ ಜೊತೆಗೆ ಕಬ್ಬಿಣ, ಖನಿಜಗಳು, ಪ್ರೊಟೀನ್, ರಂಜಕ ಥಯಾಮಿನ್, ನಿಯಾಸಿನ್ ಮುಂತಾದವುಗಳು ಹೆಚ್ಚು ಹೊಂದಿರುವ ಕಾರಣದಿಂದ ಸಿರಿ ಧಾನ್ಯಗಳನ್ನು ಪೌಷ್ಟಿಕತೆಯ ಕಣಜ ಎಂದೂ ಕರೆಯುತ್ತಾರೆ. ದೈನಂದಿನವಾಗಿ ಹೆಚ್ಚು ಬಳಸುವ ಗೋಧಿ ಮತ್ತು ಅಕ್ಕಿ ಗಿಂತ ಹತ್ತು ಪಟ್ಟು ಹೆಚ್ಚು ಕ್ಯಾಲ್ಸಿಯಂ ರಾಗಿಯಲ್ಲಿ ಇರುತ್ತದೆ ಮತ್ತು ಎರಡು ಪಟ್ಟು ಹೆಚ್ಚು ಕಬ್ಬಿಣಂಶ ಹೊಂದಿರುತ್ತದೆ. ಪುಟಾಣಿ ಮಕ್ಕಳ ಬೆಳವಣಿಗೆಗೆ ಮತ್ತು ವಯಸ್ಕರ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಿರಿಧಾನ್ಯಗಳಲ್ಲಿ ಅತೀ ಹೆಚ್ಚು ಪೋಷಕಾಂಶ ಮತ್ತು ಪೌಷ್ಟಿಕಾಂಶ ಇರುವುದರಿಂದ ಹೆಚ್ಚು ಸಿರಿಧಾನ್ಯ ಬಳಸುವುದು ಸೂಕ್ತ ಎಂದು ಆಹಾರ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಆಧುನಿಕ ಜೀವನ ಶೈಲಿ, ದೈಹಿಕ ಪರಿಶ್ರಮವಿಲ್ಲದ ದೈನಂದಿನ ಚಟುವಟಿಕೆಗಳು, ಕೆಲಸದ ಒತ್ತಡ, ದೋಷಪೂರಿತ ರಾಸಾಯನಿಕ ಮಿಶ್ರಿತ ಆಹಾರಗಳ ಸೇವನೆಯಿಂದ ಮಧುಮೇಹ, ಅಧಿಕ ರಕ್ತದೊತ್ತಡ, ಹೃದ್ರೋಗ, ಅಪೌಷ್ಟಿಕತೆ, ಖಿನ್ನತೆ, ಬೊಜ್ಜು ಮುಂತಾದ ಆರೋಗ್ಯ ಸಮಸ್ಯೆಗಳು ದಿನೇ ದಿನೇ ಹೆಚ್ಚುತ್ತದೆ. ಇಳಿ ವಯಸ್ಸಿನಲ್ಲಿ ಬರಬೇಕಾದ ರೋಗಗಳು ಹದಿಹರೆಯದಲ್ಲೂ ಕಾಣಿಸಿಕೊಳ್ಳುತ್ತದೆ. ಪಿಜ್ಜಾ, ಬರ್ಗರ್, ಜಂಕ್ ಫುಡ್, ಕಾರ್ಬೋನೇಟೆಂಡ್ ರಾಸಾಯನಿಕಯುಕ್ತ ಪೇಯಗಳ ಸೇವನೆಯಿಂದ ಮಕ್ಕಳ ದೇಹಕ್ಕೆ ಹೆಚ್ಚು ಕೊಬ್ಬು, ಸಕ್ಕರೆ, ಸೋಡಿಯಂ ಮತ್ತು ಕ್ಯಾನ್ಸರ್ ಕಾರಕ ವಸ್ತುಗಳು ಸೇರಿಕೊಂಡು ದೇಹ ರೋಗಗಳ ಹಂದರ ವಾಗುತ್ತದೆ. ಇಂತಹ ಸಮಸ್ಯೆ ಇರುವ ಮಕ್ಕಳಿಗೆ ಸಿರಿಧಾನ್ಯ ಸೇವಿಸುವಂತೆ ಮಾಡಿದಲ್ಲಿ ಬೊಜ್ಜಿನ ಸಮಸ್ಯೆಗೆ ಪರಿಹಾರ ಸಿಗಲೂ ಸಾಧ್ಯವಿದೆ. ಆದರೆ ಅತಿಯಾದರೇ ಅಮೃತವೂ ವಿಷವೆಂಬ ಮಾತನ್ನು ಯಾವತ್ತೂ ನೆನಪಿನಲ್ಲಿಡಬೇಕು. ನಿರಂತರವಾಗಿ ಸಿರಿಧಾನ್ಯ ಬಳಸುವುದು ಕೂಡಾ ಒಳ್ಳೆಯದಲ್ಲ. ಹಲವು ಬಗೆಯ ಸಿರಿ ಧಾನ್ಯ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಒಂದರ ನಂತರ ಇನ್ನೊಂದು ಎಂಬಂತೆ ಎಲ್ಲ ರೀತಿಯ ಸಿರಿಧಾನ್ಯ ಬಳಸಬೇಕು. ವಿವಿಧ ರೀತಿಯ ಸಿರಿಧಾನ್ಯಗಳಿಂದ ಗಂಜಿ, ದೋಸೆ, ಇಡ್ಲಿ, ಪಾಯಸ, ಕಿಚಿಡಿ, ಉಪ್ಪಿಟ್ಟು, ಲಾಡು, ರೊಟ್ಟಿ, ಕಡುಬು ಹೀಗೆ ಹತ್ತು ಹಲವು ವೈವಿದ್ಯಮಯ ಖಾದ್ಯಗಳನ್ನು ತಯಾರಿಸಿ ಏಕತನತೆಯನ್ನು ತಡೆಯಬಹುದು ಮತ್ತು ಯಾವುದೇ ರೀತಿಯ ಸಮಸ್ಯೆ ಉಂಟಾಗದಂತೆ ಮಾಡಬಹುದಾಗಿದೆ. ಇತ್ತೀಚಿನ ದಿನಗಳಲ್ಲಿ ಸಿರಿ ಧಾನ್ಯಗಳಿಗೆ ಹೆಚ್ಚಿನ ಪ್ರಚಾರ, ಪ್ರಾಮುಖ್ಯತೆ ಎಲ್ಲೆಡೆ ದೊರೆಯುತ್ತಿದ್ದು, ಪ್ರತಿಯೊಬ್ಬರಿಗೂ ಸಿರಿ ಧಾನ್ಯಗಳ ಪ್ರಯೋಜನಗಳ ಬಗ್ಗೆ ತಿಳಿ ಹೇಳ ಬೇಕು. ಹೆಚ್ಚು ಹೆಚ್ಚು ಸಿರಿ ಧಾನ್ಯಗಳ ಬಳಕೆ ಬಗ್ಗೆ ಜಾಗೃತಿ ಮಾಡಿಸಬೇಕು. ಅಕ್ಕಿ ಗೋಧಿಗಳಿಗಿಂತಲೂ ಮೊದಲು ಹೆಚ್ಚು ಬಳಕೆಯಲ್ಲಿದ್ದ ಸಿರಿ ಧಾನ್ಯಗಳನ್ನು ನಿರ್ಲಕ್ಷಿತಪಟ್ಟು ಈಗ ಹೆಚ್ಚುತ್ತಿರುವ ದೈಹಿಕ ಸಮಸ್ಯೆಗಳಿಂದಾಗಿ ಸಿರಿಧಾನ್ಯಗಳು ತಮ್ಮ ಆರೋಗ್ಯಕರ ಗುಣಗಳಿಂದ ಮಗದೊಮ್ಮೆ ಮುನ್ನಲೆಗೆ ಬಂದಿದೆ. ಇದೇ ಟ್ರೆಂಡ್ ಮುಂದುವರಿದರೆ ಮುಂದೊಂದು ದಿನ ಅಕ್ಕಿ ಮತ್ತು ಗೋಧಿಗೆ ಪರ್ಯಾಯವಾಗಿ ಸಿರಿ ಧಾನ್ಯ ಬಳಸಲ್ಪಟ್ಟರೂ ಅಚ್ಚರಿಯೇನಲ್ಲ. ಅಂತಹಾ ದಿನಗಳು ಆದಷ್ಟು ಬೇಗ ಬರಲಿ ಎಂದು ಹಾರೈಸೋಣ.

ಡಾ|| ಮುರಲೀ ಮೋಹನ್ ಚೂಂತಾರು
ಬಾಯಿ, ಮುಖ ಮತ್ತು ದವಡೆ ಶಸ್ತ್ರ ಚಿಕಿತ್ಸಕರು
MDS,DNB,MOSRCSEd(U.K), FPFA, M.B.A
ಮೊ : 9845135787 [email protected]