ಶಬರಿಮಲೆ ಯಾತ್ರೆ ಕೈಗೊಳ್ಳುತ್ತಿದ್ದ ಯಾತ್ರಾರ್ಥಿಗಳು ಹೊಳೆಯಲ್ಲಿ ಸ್ನಾನಕ್ಕಿಳಿದು ನೀರಿನ ಸೆಳೆತಕ್ಕೆ ಸಿಲುಕಿ ಮುಳುಗುತ್ತಿದ್ದ ವೇಳೆ ಸ್ಥಳೀಯ ಯುವಕರು ಸೇರಿ ಅವರನ್ನು ರಕ್ಷಿಸಿದ ಘಟನೆ ಜಾಲ್ಸೂರು ಸಮೀಪದ ಪಂಜಿಕಲ್ಲಿನಲ್ಲಿ ಡಿ.31ರಂದು ಅಪರಾಹ್ನ ಸಂಭವಿಸಿದೆ.
ಬೆಳಗಾವಿಯಿಂದ ಶಬರಿಮಲೆಗೆ ತೆರಳುತ್ತಿದ್ದ ಅಯ್ಯಪ್ಪ ಭಕ್ತರ ತಂಡ ಪಂಜಿಕಲ್ಲು ತೂಗುಸೇತುವೆಯ ಬಳಿ ತಮ್ಮ ವಾಹನ ನಿಲ್ಲಿಸಿ, ಹೊಳೆಯಲ್ಲಿ ಸ್ನಾನಕ್ಕೆ ಇಳಿದಿದ್ದರು.
ಈ ವೇಳೆ ಯಾತ್ರಾರ್ಥಿಗಳಲ್ಲಿ ಇಬ್ಬರು ಮಾಲಾಧಾರಿಗಳು ನದಿಯಲ್ಲಿ ಈಜಾಡುತ್ತಿದ್ದ ವೇಳೆ ನೀರಿನ ಸೆಳೆತಕ್ಕೆ ಸಿಲುಕಿದ್ದು, ದಡದಲ್ಲಿ ನಿಂತಿದ್ದ ಇತರೆ ಯಾತ್ರಾರ್ಥಿಗಳು ಬೊಬ್ಬೆ ಹೊಡೆದರೆನ್ನಲಾಗಿದೆ.
ಈ ವೇಳೆ ಅಲ್ಲೇ ರಸ್ತೆ ಬದಿ ಇದ್ದ ಸ್ಥಳೀಯ ಯುವಕರಾದ ಚೇತನ್ ಪ್ರಸಾದ್, ಮುಬಶೀರ್ ಹಾಗೂ ಜುಬೈರ್ ಅವರು ಬೊಬ್ಬೆ ಕೇಳಿ ತಕ್ಷಣ ಬಂದು ನೀರಿಗೆ ಧುಮುಕಿ ಇಬ್ಬರು ಯಾತ್ರಾರ್ಥಿಗಳನ್ನು ನೀರಿನಿಂದ ರಕ್ಷಿಸಿ, ದಡಕ್ಕೆ ತಂದು ಆರೈಕೆ ಮಾಡಿದರೆಂದು ತಿಳಿದುಬಂದಿದೆ.
ಸ್ಥಳೀಯ ಯುವಕರ ರಕ್ಷಣಾ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.