ಪೆರಾಜೆ ಜ್ಯೋತಿ ಪ್ರೌಢಶಾಲಾ ಮುಖ್ಯ ಶಿಕ್ಷಕ ನರೇಂದ್ರ ಎಂ.ಆರ್. ಹಾಗೂ ಸಹ ಶಿಕ್ಷಕಿಯರಿಗೆ ಬೀಳ್ಕೊಡುಗೆ ಸಮಾರಂಭ

0

ಜ್ಯೋತಿ ವಿದ್ಯಾ ಸಂಘ, ಜ್ಯೋತಿ ಪ್ರೌಢಶಾಲೆ ಪೆರಾಜೆ, ಹಿರಿಯ ವಿದ್ಯಾರ್ಥಿ ಸಂಘ ಪೆರಾಜೆ ಇದರ ಜಂಟಿ ಆಶ್ರಯದಲ್ಲಿ ನರೇಂದ್ರ ಎಂ. ಆರ್ ನಿವೃತ್ತ ಮುಖ್ಯ ಶಿಕ್ಷಕರು ಹಾಗೂ ಸಹ ಶಿಕ್ಷಕರಿಗೆ ಬೀಳ್ಕೊಡುಗೆ ಸಮಾರಂಭ ಜೂ.೩ರಂದು ಜ್ಯೋತಿ ಪ್ರೌಢಶಾಲಾ ಸಭಾಭವನದಲ್ಲಿ ನಡೆಯಿತು.


ಜ್ಯೋತಿ ವಿದ್ಯಾ ಸಂಘದ ಅಧ್ಯಕ್ಷರಾದ ಡಾ| ಎನ್. ಎ ಜ್ಞಾನೇಶ್ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಸಂಚಾಲಕರಾದ ಹರಿಶ್ಚಂದ್ರ ಮುಡ್ಕಜೆ, ಹಿರಿಯ ನಿವೃತ್ತ ಶಿಕ್ಷಕರಾದ ದೊಡ್ಡಣ್ಣ ಬರಮೇಲು, ಕನ್ನಡ ಭಾಷಾ ನಿವೃತ್ತ ಶಿಕ್ಷಕರಾದ ವೇಣುಗೋಪಾಲ ಕೊಯಿಂಗಾಜೆ, ನಿವೃತ್ತ ವೃತ್ತಿ ಶಿಕ್ಷಕ ಸುರೇಶ್ ಹೆಗ್ಡೆ ಕೆ., ಜ್ಯೋತಿ ವಿದ್ಯಾಸಂಘದ ಉಪಾಧ್ಯಕ್ಷರು, ನಿರ್ದೇಶಕರುಗಳು, ಪೋಷಕ ಸಮಿತಿ ಅಧ್ಯಕ್ಷರು, ಹಿರಿಯ ವಿದ್ಯಾರ್ಥಿ ಸಂಘದ ಸದಸ್ಯರು, ನಿವೃತ್ತ ದ್ವಿತೀಯ ದರ್ಜೆ ಸಹಾಯಕ ನಾರಾಯಣ ಬಿ. ಎಂ, ಪ್ರೌಢಶಾಲಾ ಸ್ಥಾಪಕರು ಹಾಗೂ ನಿರ್ದೇಶಕರಾದ ಡಿ. ಪಿ ಪೂವಪ್ಪ ಪೆರಾಜೆ, ಕ್ಲಸ್ಟರಿನ ಸಿ.ಆರ್.ಪಿ ಶ್ರೀಮತಿ ರೇಖಾ ಹಾಗೂ ವಿದ್ಯಾರ್ಥಿ ಪೋಷಕರು ಉಪಸ್ಥಿತರಿದ್ದರು.

ನಿವೃತ್ತಿಯ ನಂತರ ಒಂದು ವರ್ಷಗಳ ಕಾಲ ಯಾವುದೇ ಸಂಭಾವನೆ ಪಡೆಯದೆ ಬೋಧನೆ ಮಾಡಿದ ಶಿಕ್ಷಕಿ ಶ್ರೀಮತಿ ಮೋಹನಾಂಗಿ ಎಂ.ಎಸ್., ಇಂಗ್ಲಿಷ್ ಭಾಷಾ ಶಿಕ್ಷಕಿಯಾಗಿ ಎರಡು ವರ್ಷಗಳ ಕಾಲ ಕಾರ್ಯನಿರ್ವಹಿಸಿದ ಸುಪರ್ಣ ಹೆಗ್ಡೆಯವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ನಿವೃತ್ತ ಮುಖ್ಯ ಶಿಕ್ಷಕರಾದ ನರೇಂದ್ರ ಎಂ. ಆರ್ ರವರು ೩೬ ವರ್ಷಗಳ ಅನುಭವವನ್ನು ಹಂಚಿಕೊಂಡರು ಹಾಗೂ ಪ್ರೌಢಶಾಲೆಗೆ ೧೦೦೦೦ ರೂ. ದೇಣಿಗೆ ನೀಡಿದರು. ಈ ಸಂದರ್ಭ ಹಿರಿಯ ಸ್ಥಾಪಕ ಶಿಕ್ಷಕರಾದ ಡಿ.ಪಿ. ಪೂವಪ್ಪರವರಿಗೆ ೧೦ ಸಾವಿರ ರೂ.ಗಳ ಚೆಕ್‌ನ್ನು ನೀಡಲಾಯಿತು. ಪ್ರತಿ ವರ್ಷವೂ ಎಸ್.ಎಸ್. ಎಲ್. ಸಿ ಯಲ್ಲಿ ಅತಿ ಹೆಚ್ಚು ಅಂಕ ಪಡೆದ ಮೂರು ಮಂದಿ ವಿದ್ಯಾರ್ಥಿಗಳಿಗೆ ಪ್ರತಿವರ್ಷ ಪ್ರತಿಭಾ ದಿನಾಚರಣೆಯಂದು ನಗದು ಬಹುಮಾನ ನೀಡುವುದಾಗಿ ಭರವಸೆ ನೀಡಿದರು.

ಪ್ರೌಢಶಾಲಾ ಸಂಚಾಲಕರಾದ ಹರಿಶ್ಚಂದ್ರ ಮುಡುಕಜೆ ಸ್ವಾಗತಿಸಿ, ಪ್ರೌಢಶಾಲಾ ಮುಖ್ಯ ಶಿಕ್ಷಕರಾದ ಜಿ. ಆರ್. ನಾಗರಾಜ ಸನ್ಮಾನ ಪತ್ರ ವಾಚಿಸಿ, ಪ್ರಾಸ್ತವಿಕ ನುಡಿಗಳನ್ನಾಡಿದರು. ಇಂಗ್ಲಿಷ್ ಭಾಷಾ ಶಿಕ್ಷಕಿ ಶ್ರೀಮತಿ ಸುಮನ ಕೆ. ವಂದಿಸಿದರು. ಪ್ರೌಢಶಾಲಾ ಅಧೀಕ್ಷಕರಾದ ಚಂದ್ರಮತಿ ಕೆ. ಎಂ. ಕಾರ್ಯಕ್ರಮ ನಿರೂಪಿಸಿದರು.