ಸುಬ್ರಹ್ಮಣ್ಯ: ಮಳೆ ಹಿನ್ನೆಲೆ ನೂಚಿಲದ 8 ಕುಟುಂಬಗಳು ಕಾಳಜಿ ಕೇಂದ್ರಕ್ಕೆ ಸ್ಥಳಾಂತರ

0

ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಿಂದ ಅನತಿ ದೂರದಲ್ಲಿರುವ ನೂಚಿಲ ಎಂಬಲ್ಲಿರುವ ಪರ್ವತ ತಪ್ಪಲಿನ 8 ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ತಾಲ್ಲೂಕು ಆಡಳಿತ ಸೂಚಿಸಿದ್ದು ಅದರಂತೆ ಅವರುಗಳನ್ನು ಜು.8 ರಂದು ಸ್ಥಳಾಂತರಿಸಲಾಗಿದೆ ಎಂದು ಬಂದಿದೆ.

ಆದಿ ಸುಬ್ರಹ್ಮಣ್ಯ ದೇವಸ್ಥಾನ ಬಳಿಯಲ್ಲಿರುವ ನೂಚಿಲ ಗುಡ್ಡದ ಬುಡದಲ್ಲಿ 8 ಕುಟುಂಬಗಳು ಮನೆ ಕಟ್ಟಿಕೊಂಡು ವಾಸವಾಗಿದ್ದು, ಧಾರಾಕಾರ ಮಳೆಯ ನಡುವೆ ಗುಡ್ಡ, ಕುಸಿದು ಬೀಳುವ ಅಪಾಯ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಕುಟುಂಬಗಳನ್ನು ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಅಭಯ ಪ್ರವಾಸಿ ಮಂದಿರದಲ್ಲಿ ತೆರೆಯಲಾದ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ನೂಚಿಲದ ಗೀತಾ ಸತೀಶ್ ನೂಚಿಲ, ಪದ್ಮಯ್ಯ ನೂಚಿಲ, ದುಗ್ಗಣ್ಣ ನೂಚಿಲ, ದಿನೇಶ್ ನೂಚಿಲ, ಶೋಭಾ ಭಾಸ್ಕರ ನೂಚಿಲ, ದೇವಕಿ ಬಾಲಕೃಷ್ಣ, ಶೋಭಾ ಪ್ರಮೋದ್ ಕುಮಾರ್‌ ಮತ್ತು ಬಿ.ಎನ್‌. ರಾಧಾಕೃಷ್ಣ ಎಂಬವರ ಮನೆಗಳು ಸ್ಥಳಾಂತರವಾದ ಮನೆಗಳು. ಕಡಬ ತಹಸೀಲ್ದಾರ್ ಈ ಕುಟುಂಬಗಳಿಗೆ ಜು.7 ನೋಟಿಸ್ ಜಾರಿ ಮಾಡಿದ್ದು ತಕ್ಷಣ ಮನೆಗಳಿಂದ ತೆರವಾಗಿ ಬೇರೆ ಕಡೆ ವಾಸ್ತವ್ಯ ಹೂಡಬೇಕು ಅಥವಾ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಗೊಳ್ಳಬೇಕು. ತಪ್ಪಿದಲ್ಲಿ ವಿಪತ್ತು ನಿರ್ವಹಣಾ ಕಾಯಿದೆಯಡಿ ಮನೆ ಖಾಲಿ ಮಾಡಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದರು.


ಮಳೆಗಾಲ ಮುಗಿಯುವವರೆಗೆ ಈ ಮನೆಗಳನ್ನು ಬಳಸದಂತೆಯೂ ಸೂಚನೆ ನೀಡಿದ್ದರು.

ನೂಚಿಲ ಗುಡ್ಡ ಗಗನಚುಂಬಿ ಬೆಟ್ಟ ಇದಾಗಿದ್ದು, ಇದರ ಬುಡದಲ್ಲೇ ಮನೆಗಳಿವೆ. ಧಾರಾಕಾರ ಮಳೆ ಯಾಗುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಕಳೆದ ಮಳೆಗಾಲದಲ್ಲಿ ಸುಬ್ರಹ್ಮಣ್ಯದ ಕುಮಾರಧಾರ ಸ್ನಾನಘಟ್ಟ ಸಮೀಪದ ಪರ್ವತಮುಖಿ, ನೂಚಿಲ ಮತ್ತಿತರರ ಕಡೆ ಗುಡ್ಡಕುಸಿದ ಘಟನೆ ವರದಿಯಾಗಿತ್ತು.