ಕೊ.ಸಂಪಾಜೆ: ಮೂರು ಬಾರಿ ಗ್ರಾ.ಪಂ. ಸದಸ್ಯನಾಗಿದ್ದು, ಮೀಸಲಾತಿಯಲ್ಲಿ ಸಾಮಾನ್ಯ ಸ್ಥಾನ ಬಂದರೂ ದೊರೆಯದ ಗ್ರಾ.ಪಂ. ಅಧ್ಯಕ್ಷ ಸ್ಥಾನ

0

ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಗ್ರಾ.ಪಂ. ಹಿರಿಯ ಸದಸ್ಯ ಕುಮಾರ ಚಿದ್ಕಾರ್ – ಪಕ್ಷದ ಕಾರ್ಯಚಟುವಟಿಕೆಗಳಿಂದ ದೂರವಿರಲು ನಿರ್ಧಾರ

ಕೊಡಗು ಸಂಪಾಜೆ ಗ್ರಾಮ ಪಂಚಾಯತಿಯ ನೂತನ ಅಧ್ಯಕ್ಷ – ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯು ಆ. 10ರಂದು ನಡೆದಿದ್ದು, ಈ ಬಾರಿ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದರೂ, ಸಾಮಾನ್ಯ ಮಹಿಳಾ ಸ್ಥಾನದಿಂದ ಆಯ್ಕೆಯಾದ ಶ್ರೀಮತಿ ರಮಾದೇವಿ ಕಳಗಿ ಅವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.


ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಇದ್ದರೂ, ಕಳೆದ ಮೂರು ಅವಧಿಗೆ ಸಾಮಾನ್ಯ ಸ್ಥಾನದಿಂದ ಗ್ರಾಮ ಪಂಚಾಯತಿ ಸದಸ್ಯನಾಗಿ ಆಯ್ಕೆಯಾದ ಹಿರಿಯ ಸದಸ್ಯ ಕುಮಾರ ಚಿದ್ಕಾರ್ ಅವರಿಗೆ ಅಧ್ಯಕ್ಷ ಸ್ಥಾನ ದೊರೆಯದೇ ಇದ್ದುದರಿಂದ ಅವರು ತಮ್ಮ ಅಸಮಾಧಾನ ವ್ಯಕ್ತಪಡಿಸಿ, ಪಕ್ಷದ ಕಾರ್ಯಚಟುವಟಿಕೆಗಳಿಂದ ದೂರ ಇರಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.

‘ಸುದ್ದಿ’ ಅವರನ್ನು ಮಾತನಾಡಿಸಿದ ವೇಳೆ ‘ನಾನು ಕಳೆದ ಮೂರು ಅವಧಿಯಲ್ಲಿ ಕೊಡಗು ಸಂಪಾಜೆ ಗ್ರಾಮ ಪಂಚಾಯತಿ ಸದಸ್ಯನಾಗಿ ಆಯ್ಕೆಯಾಗಿದ್ದೇನೆ. ಬಾಲಚಂದ್ರ ಕಳಗಿ ಅವರು ನಿಧನ ಹೊಂದಿದಾಗ ಒಂದೂವರೆ ವರ್ಷದ ಅವಧಿಗೆ ನನಗೆ ಅಧ್ಯಕ್ಷ ಸ್ಥಾನ ದೊರೆತಿತ್ತು. ಆದರೆ ಆ ಬಳಿಕ ಅವಕಾಶ ಸಿಕ್ಕಿರಲಿಲ್ಲ. ಬೇಸರದ ಸಂಗತಿಯೆಂದರೆ ಈ ಬಾರಿ ಸಾಮಾನ್ಯ ವರ್ಗಕ್ಕೆ ಅಧ್ಯಕ್ಷ ಸ್ಥಾನ ಬಂದಾಗ ಅಲ್ಲಿ ಸಾಮಾನ್ಯ ಸ್ಥಾನದಿಂದ ಆಯ್ಕೆಯಾದ ಪುರುಷ ಸದಸ್ಯನಿಗೆ ಎಲ್ಲಾ ಕಡೆ ಅವಕಾಶ ಕೊಡುತ್ತಾರೆ. ಆದರೆ ಸಂಪಾಜೆಯಲ್ಲಿ ಬೇರೆ ಬೇರೆ ರೀತಿಯ ಲಾಭಿ ಹಾಗೂ ಜನಸಂಘಟನೆ ಮಾಡಿಕೊಂಡು ಎಲ್ಲಾ ಪಕ್ಷದವರನ್ನು ಒಟ್ಟಿಗೆ ಸೇರಿಸಿ, ರಮಾದೇವಿ ಕಳಗಿ ಅವರಿಗೆ ಅಧ್ಯಕ್ಷ ಸ್ಥಾನ ಕೊಡಲಾಗಿದೆ. ನಾನು ಸಾಮಾನ್ಯ ವರ್ಗ ಸ್ಥಾನದಿಂದ ಗೆದ್ದಿದ್ದರೂ, ಸಾಮಾನ್ಯ ಮಹಿಳಾ ಸ್ಥಾನದಿಂದ ಗೆದ್ದವರಿಗೆ ಪಕ್ಷ ಅವಕಾಶ ಕೊಟ್ಟಿರುವುದು ನನಗೆ ಬಹಳ ಬೇಸರ ತರಿಸಿದೆ.
ಕಳೆದ ಒಂದೂವರೆ ತಿಂಗಳ ಹಿಂದೆ ಸಾಮಾನ್ಯ ವರ್ಗ ಸ್ಥಾನಕ್ಕೆ ಮೀಸಲಾತಿ ಘೋಷಣೆಯಾದಾಗ ನನಗೇ ಈ ಬಾರಿ ಅಧ್ಯಕ್ಷ ಸ್ಥಾನ ಸಿಗಬಹುದೆಂಬ ನಿರೀಕ್ಷೆಯಲ್ಲಿ ನಾನಿದ್ದೆ. ಯಾಕೆಂದರೆ ಪಕ್ಷಕ್ಕಾಗಿ ನಾನು ಇಷ್ಟುವರ್ಷಗಳ ಕಾಲ ನನ್ನಿಂದ ಆಗುವಷ್ಟು ಸೇವೆ ಸಲ್ಲಿಸಿದ್ದೆ. ಗ್ರಾಮ ಪಂಚಾಯತಿ ಸದಸ್ಯನಾಗಿ ಕಳೆದ ಮೂರು ಅವಧಿಯಲ್ಲಿಯೂ ಹೆಚ್ಚಿನ ಅಭಿವೃದ್ಧಿ ಕೆಲಸ – ಕಾರ್ಯಗಳನ್ನು ಮಾಡಿದ್ದೆ. ಇವೆಲ್ಲವನ್ನೂ ಮನಗಂಡು ಪಕ್ಷದ ಹಿರಿಯರು ನನಗೆ ಈ ಬಾರಿ ಅಧ್ಯಕ್ಷ ಸ್ಥಾನ ಕೊಡುತ್ತಾರೆಂಬ ವಿಶ್ವಾಸದಲ್ಲಿದ್ದೆ. ಆದರೆ ಇವತ್ತು ಆ ವಿಶ್ವಾಸಕ್ಕೆ ಕೊರತೆಯಾಗಿದೆ. ಇದರಿಂದಾಗಿ ನನಗೂ ತುಂಬಾ ಬೇಸರವಾಗಿದೆ. ಮೂರು ಬಾರಿ ಗ್ರಾಮ ಪಂಚಾಯತಿ ಸದಸ್ಯನಾಗಿ ಆಯ್ಕೆಯಾದವನನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ. ಆದ್ದರಿಂದ ತೀವ್ರ ಅಸಮಾಧಾನಗೊಂಡಿರುವ ನಾನು ಪಕ್ಷದ ಎಲ್ಲಾ ಕಾರ್ಯಚಟುವಟಿಕೆಗಳಿಂದ ನಿಷ್ಕ್ರಿಯನಾಗಿರುತ್ತೇನೆ. ಹಾಗೂ ನನ್ನದೇ ಆದ ಕೆಲಸ – ಕಾರ್ಯಗಳನ್ನು ಮುಂದುವರೆಸುತ್ತೇನೆ ಎಂದು ತಿಳಿಸಿದ್ದಾರೆ.