ಗಾಂಧಿನಗರ: ಕೆಎಂಜೆ ವತಿಯಿಂದ ಪ್ರಜಾ ಭಾರತ ಸೌಹಾರ್ದ ಕಾರ್ಯಕ್ರಮ

0

ದೇಶದ ಅಭಿವೃದ್ಧಿಗೆ ಶಾಂತಿ ಮತ್ತು ಸೌಹಾರ್ದತೆಯ ಬದುಕು ಅತಿ ಅವಶ್ಯಕವಾಗಿದೆ : ಸರ್ವಧರ್ಮಿಯ ಮುಖಂಡರಿಂದ ಸಂದೇಶ ಭಾಷಣ

ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಸಮಿತಿಯ ನಿರ್ದೇಶನದ ಮೇರೆಗೆ ಆಯೋಜಿಸಲಾಗಿರುವ ‘ದ್ವೇಷ ಬಿಟ್ಟು ದೇಶ ಕಟ್ಟು’ ಪ್ರಜಾ ಭಾರತ ಕಾರ್ಯಕ್ರಮ ಕೆ ಎಂ ಜೆ ಸುಳ್ಯ ಸರ್ಕಲ್ ಸಮಿತಿ ವತಿಯಿಂದ ಆಗಸ್ಟ್ 29ರಂದು ಗಾಂಧಿನಗರ ಸುನ್ನಿ ಸೆಂಟರ್ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆಎಂಜೆ ಸುಳ್ಯ ಸರ್ಕಲ್ ಸಮಿತಿ ಅಧ್ಯಕ್ಷ ಹಾಜಿ ಪಿ ಎ ಉಮ್ಮರ್ ಗೂನಡ್ಕ ವಹಿಸಿದ್ದರು.
ಕೆಎಂಜೆ ದಕ್ಷಿಣ ಕನ್ನಡ ಈಸ್ಟ್ ಜಿಲ್ಲಾ ಸಮಿತಿ ಕಾರ್ಯದರ್ಶಿ ಅಬ್ದುಲ್ ಹಮೀದ್ ಸುಣ್ಣಮೂಲೆ ಪ್ರಾಸ್ತಾವಿಕ ಮಾತನಾಡಿ ಕಾರ್ಯಕ್ರಮದ ಮೂಲ ಉದ್ದೇಶವಾದ ಸಾಮರಸ್ಯ ಬದುಕಿನ ಕುರಿತು,ದೇಶದ ಸ್ವಾತಂತ್ರ್ಯ ಹೋರಾಟದ ಭಾವೈಕ್ಯತೆಯ ಘಟನೆಗಳ ಕುರಿತು ಮಾತನಾಡಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಮುಖಂಡರುಗಳಾದ ಲಯನ್ಸ್ ಎಜುಕೇಶನ್ ಅಂಡ್ ಸ್ಕೂಲ್ ಸಪೋರ್ಟ್ ಡಿಸ್ಟಿಕ್ ಕೋರ್ಡಿನೇಟರ್ ರಾಮಚಂದ್ರಗೌಡ ಪೆಲ್ತಡ್ಕ,ಹಿರಿಯ ಪತ್ರಕರ್ತ ಗಂಗಾಧರಮಟ್ಟಿ,ಮಾಜಿ ಸೈನಿಕ ಕೆ ಆರ್ ಚಂದ್ರಹಾಸ, ಸೈಂಟ್ ಬ್ರಿಜೇಡ್ಸ್ ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ನವೀನ್ ಮಚಾದೊ,ದಲಿತ ಸಮಿತಿ ಮುಖಂಡ ನಂದರಾಜ್ ಸಂಕೇಶ್, ಗಾಂಧಿನಗರ ಜುಮಾ ಮಸ್ಜಿದ್ ಆಡಳಿತ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ ಬಿ ಅಬ್ದುಲ್ ಮಜೀದ್ ರವರು ಕೆ ಎಂ ಜೆ ಹಮ್ಮಿಕೊಂಡಿರುವ ಪ್ರಜಾ ಭಾರತ ಕಾರ್ಯಕ್ರಮದ ಕುರಿತು ಮಾತನಾಡಿ ‘ದೇಶದಲ್ಲಿ ಶಾಂತಿ ಮತ್ತು ಸೌಹಾರ್ದತೆ ನೆಲೆಸಲು ಉತ್ತಮ ಶಿಕ್ಷಣ ಮತ್ತು ಜನರಲ್ಲಿ ಪರಸ್ಪರ ಸ್ನೇಹಮಯ ಜೀವನ ಅತಿ ಅವಶ್ಯಕವಾಗಿದೆ ಎಂದು ಒಕ್ಕೊರಳಿನ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯ ಅತಿಥಿಗಳು ಎಲ್ಲಾ ಧರ್ಮಗಳು ಶಾಂತಿ ಮತ್ತು ಸೌಹಾರ್ದತೆಯ ಸಂದೇಶವನ್ನು ಸಾರಿರುತ್ತದೆ. ಯಾವುದೇ ಧರ್ಮ ಅಶಾಂತಿಯ ಮಾರ್ಗವನ್ನು ಹೇಳಿಕೊಡಲಿಲ್ಲ.ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ಅಹಿಂಸಾತ್ಮಕ ಹೋರಾಟದಿಂದ ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಟ್ಟರು.
ದ್ವೇಷ,ಹಗೆ,ವಂಚನೆ ಮುಂತಾದ ದುರ್ಬುದ್ದಿಗಳು ಜನರನ್ನು ನಾಶದತ್ತ ಕೊಂಡೋಗುವುದಲ್ಲದೆ ಸಮಾಜದ ಶಾಂತಿಯನ್ನು ಕೆಡಿಸುವ ಮೂಲಕ ದೇಶದ ಅಭಿವೃದ್ಧಿಗೆ ಮಾರಕವು ಆಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ವೇದಿಕೆಯಲ್ಲಿ ಕೆಎಂಜೆ ಝೋನಲ್ ಸಮಿತಿ ಅಧ್ಯಕ್ಷ ಅಬ್ದುಲ್ ಹಮೀದ್ ಬೀಜಕೊಚ್ಚಿ,ಎಸ್ ವೈ ಎಸ್ ರಾಜ್ಯ ಸಮಿತಿ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಕಟ್ಟೆಕ್ಕಾರ್ಸ್ ಉಪಸ್ಥಿತರಿದ್ದರು.

ಪ್ರಧಾನ ಕಾರ್ಯದರ್ಶಿ ಹಸೈನಾರ್ ಜಯನಗರ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ಎಸ್ ಎಸ್ ಎಫ್ ಸಂಘಟನೆಯ ಮುಖಂಡ ಅಹಮದ್ ಕಬೀರ್ ಜಟ್ಟಿಪಳ್ಳ ವಂದಿಸಿದರು.
ಈ ಸಂದರ್ಭದಲ್ಲಿ ಸರ್ಕಲ್ ಸಮಿತಿಯ ಸದಸ್ಯರು,ಎಸ್ ಎಂ ಎ,ಎಸ್ ವೈ ಎಸ್,ಎಸ್ ಎಸ್ ಎಫ್ ಸಮಿತಿಯ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.