ಸ್ಥಳೀಯರ ಬೇಡಿಕೆಗೆ ಸ್ಪಂದನೆ

0

ಶಾಂತಿನಗರ ಕ್ರೀಡಾಂಗಣದ ತಡೆಗೋಡೆ ಕಾಮಗಾರಿ ಆರಂಭ

ಸುಳ್ಯ ಶಾಂತಿನಗರದಲ್ಲಿ ನಿರ್ಮಾಣಗೊಳ್ಳುತ್ತಿರುವ ಕ್ರೀಡಾಂಗಣದ ಕೆಳಭಾಗದಲ್ಲಿ ಸ್ಥಳೀಯ ನಿವಾಸಿಗಳ ಬೇಡಿಕೆಯಾದ ತಡೆಗೋಡೆ ಕಾಮಗಾರಿ ಆರಂಭಗೊಂಡಿದೆ.

ಸುಳ್ಯ ಶಾಂತಿನಗರದಲ್ಲಿ ನಡೆಯುತ್ತಿರುವ ಕ್ರೀಡಾಂಗಣ ಕಾಮಗಾರಿಯಲ್ಲಿ ಕ್ರೀಡಾಂಗಣದ ಒಂದು ಭಾಗದಲ್ಲಿರುವ ಮಣ್ಣು ಕೆಳಭಾಗಕ್ಕೆ ಕುಸಿಯುತ್ತಿದ್ದ ಹಿನ್ನೆಲೆಯಲ್ಲಿ ಸ್ಥಳೀಯ ನಿವಾಸಿಗಳು ಮಣ್ಣು ಕುಸಿವ ಜಾಗದಲ್ಲಿ ಕೆಳಭಾಗದಲ್ಲಿ ತಡೆಗೋಡೆ ನಿರ್ಮಿಸಲು ಹಲವಾರು ಬಾರಿ ಸಂಬಂಧಪಟ್ಟ ಇಲಾಖೆಗೆ ಮತ್ತು ಜನಪ್ರತಿನಿಧಿಗಳಿಗೆ ತಡೆಗೋಡೆ ನಿರ್ಮಿಸಲು ಬೇಡಿಕೆಯನ್ನು ಇಡುತ್ತಿದ್ದರು.

ಈ ಬಗ್ಗೆ ಸುದ್ದಿ ಪತ್ರಿಕೆ ಮತ್ತು ಸುದ್ದಿ ಯುಟ್ಯೂಬ್ ಚಾನೆಲ್ ನಲ್ಲಿ ಹಲವಾರು ಬಾರಿ ವರದಿಗಳನ್ನು ಬಿತ್ತರಗೊಳಿಸಲಾಗಿತ್ತು.
ಇದೀಗ ಸ್ಥಳೀಯರ ಬೇಡಿಕೆಗೆ ಸ್ಪಂದಿಸಿರುವ ಇಲಾಖೆ ತಡೆಗೋಡೆ ನಿರ್ಮಿಸುವ ಕಾರ್ಯಕ್ಕೆ ಚಾಲನೆ ನೀಡಿದೆ.
ಈಗಾಗಲೇ ಈ ಭಾಗದಲ್ಲಿ ಇರುವ ಹಳೆಯ ತಡೆಗೋಡೆಯ ಸಮೀಪ ನೂತನವಾಗಿ ಮತ್ತೊಂದು ತಡೆಗೋಡೆ ನಿರ್ಮಾಣದ ಕಾಮಗಾರಿ ಆರಂಭಗೊಂಡಿದ್ದು ಸ್ಥಳೀಯರ ಬೇಡಿಕೆಗೆ ಸ್ಪಂದನೆ ಸಿಕ್ಕಿದಂತಾಗಿದೆ.

ಕ್ರೀಡಾಂಗಣದ ಒಂದು ಬದಿಯಲ್ಲಿ ಹಾಕಿದ್ದ ಬೃಹತ್ ಆಕಾರದ ಮಣ್ಣಿನ ರಾಶಿ ಮಳೆಗಾಲದಲ್ಲಿ ಕುಸಿಯುವ ಆತಂಕ ನಿರ್ಮಾಣವಾಗಿತ್ತು. ಇದನ್ನು ತಡೆಯಲು ನಿರ್ಮಿತಿ ಕೇಂದ್ರದಿಂದ ಬೇರೆ ಬೇರೆ ಪ್ರಯೋಗಗಳನ್ನು ಬಳಸಿ ಪ್ಲಾಸ್ಟಿಕ್ ಹೊದಿಕೆ ಅಳವಡಿಕೆ, ನೀರು ಹಾದು ಹೋಗಲು ದಂಬೆಗಳ ಅಳವಡಿಕೆ, ಮಣ್ಣು ಕುಸಿಯದಂತೆ ಗಿಡಗಳನ್ನು ನೆಡುವುದು ಮುಂತಾದ ಕೆಲಸ ಕಾರ್ಯಗಳು ಮಾಡಿತ್ತು.
ಆದರೆ ಇದು ಯಾವುದು ಫಲಕಾರಿ ಆಗುತ್ತಿರಲಿಲ್ಲ.ಈ ಹಿನ್ನೆಲೆಯಲ್ಲಿ ಸ್ಥಳೀಯರು ಅನೇಕ ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಮನವಿಗಳ ಮೇಲೆ ಮನವಿಗಳನ್ನು ನೀಡಿ ತಡೆಗೋಡೆ ನಿರ್ಮಿಸಲು ಬೇಡಿಕೆಯನ್ನು ಇಡುತ್ತಿದ್ದರು.
ಕಳೆದ ಕೆಲವು ತಿಂಗಳ ಹಿಂದೆ ಈ ಪ್ರದೇಶಕ್ಕೆ ಭೇಟಿ ನೀಡಿದ್ದ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಕು. ಭಾಗೀರಥಿ ಮುರುಳ್ಯ ರವರು ಈ ಭಾಗದಲ್ಲಿ ಉಂಟಾಗಿದ್ದ ಸಮಸ್ಯೆಯನ್ನು ಪರಿಶೀಲಿಸಿ ಸಂಬಂಧಪಟ್ಟ ಇಲಾಖೆಗೆ ಆದಷ್ಟು ಶೀಘ್ರದಲ್ಲಿ ತಡೆಗೋಡೆ ನಿರ್ಮಿಸಲು ಸೂಚನೆಯನ್ನು ನೀಡಿದ್ದರು.ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಯವರು ಕೂಡ ಸ್ಥಳದಲ್ಲಿದ್ದು ಶಾಸಕರ ಸೂಚನೆ ಮೇರೆಗೆ ತಡೆಗೋಡೆಯನ್ನು ನಿರ್ಮಿಸುವ ಭರವಸೆಯನ್ನು ಸ್ಥಳೀಯರಿಗೆ ನೀಡಿದ್ದರು.

ಇದೀಗ ಯುವಜನ ಕ್ರೀಡಾ ಇಲಾಖೆ ವತಿಯಿಂದ 10 ಲಕ್ಷ ರೂಪಾಯಿ ತಡೆಗೋಡೆ ನಿರ್ಮಿಸಲು ಮಂಜೂರಾಗಿದ್ದು ಇದರ ಕಾಮಗಾರಿ ಆರಂಭಗೊಂಡಿದೆ.