ಇಂದು ಕರಾವಳಿ ಕೊಂಕಣಿ ಕ್ರೈಸ್ತರ ಮೊಂತಿ ಫೆಸ್ತ್ – ತೆನೆ ಹಬ್ಬ

0

✍️ ರೇಶ್ಮಾ ಕ್ರಾಸ್ತಾ

ಸಂಪ್ರದಾಯ ಯಾವುದಾದರೇನು, ಜಾತಿ ಯಾವುದಾದರೇನು, ಪದ್ಧತಿಗಳು ಯಾವುದಾದರೇನು, ಧರ್ಮ ಯಾವುದಾದರೇನು, ಪ್ರಕೃತಿ ಧರ್ಮ ಎಲ್ಲರಿಗೂ ಒಂದೇ, ನಿಸರ್ಗ ಧರ್ಮ ಎಂಬುದು ಜಾತಿ,ಸಂಪ್ರದಾಯ,ಧರ್ಮ ಪದ್ಧತಿಗಳಿಗೆ ಭೇದಭಾವ ಮಾಡುವುದಿಲ್ಲ ಎಲ್ಲರನ್ನು ಸಮಾನವಾಗಿ ಪರಿಗಣಿಸುತ್ತದೆ. ಭೂಮಿಯನ್ನು ತಾಯಿ, ಮಾತೆಂದು ಪೂಜಿಸುವ ನಾಡು ನಮ್ಮದು.ಭರತ ಭೂಮಿ ಪ್ರಕೃತಿಯನ್ನು ಪೂಜಿಸುತ್ತದೆ ಗೌರವಿಸುತ್ತದೆ.ಭರತ ಭೂಮಿ ಪುಣ್ಯ ಭೂಮಿ ನೆಲ,ಜಲವನ್ನು ಮಾತೆಗೆ ಹೋಲಿಸುವ ದೇಶ ನಮ್ಮದು.

ಕರಾವಳಿಯ ಕೊಂಕಣಿ ಕ್ರೈಸ್ತ ಬಾಂಧವರು ಮಾತ್ರ ಆಚರಿಸುವ ಹಬ್ಬಗಳಲ್ಲಿ ತೆನೆ ಹಬ್ಬ ಅಥವಾ ಮೊಂತಿ ಫೆಸ್ತ್ ಎಂದು ಕೊಂಕಣಿ ಭಾಷೆಯಲ್ಲಿ ಕರೆಯುತ್ತಾರೆ ಪ್ರಕೃತಿಯನ್ನು ಪೂಜಿಸುವ ಗೌರವಿಸುವ ಹಬ್ಬಗಳಲ್ಲಿ ಇದು ಒಂದಾಗಿದೆ ಮೊಂತಿ ಫೆಸ್ತ್ ಎಂಬುದು ಒಂಬತ್ತು ದಿನಗಳ ನೋವೇನ ಮೂಲಕ ಆರಂಭವಾಗುವ ಹಬ್ಬ ನೋವೇನಾ ಎಂದರೆ 9 ದಿನ ವೃತವನ್ನು ಆಚರಿಸುವುದು. ಈ ವೃತ್ತದಲ್ಲಿ ಸಸ್ಯಹಾರವನ್ನು ಮಾತ್ರ ಸೇವಿಸುವ ವಾಡಿಕೆ ಇದೆ ಮಾತೆ ಮರಿಯಳ ಜನ್ಮದಿನವನ್ನು ಸೆಪ್ಟೆಂಬರ್ 8ರಂದು ಆಚರಿಸುತ್ತಾರೆ ಅದರ ಮುನ್ನಾ ದಿನಗಳಲ್ಲಿ ಒಂಬತ್ತು ದಿನ ನೋವೇನಾ ಪೂಜಾ, ಪ್ರಾರ್ಥನಾ ವಿಧಿಗಳು ನಡೆಯುತ್ತದೆ.
ಒಂಬತ್ತು ದಿನಗಳಲ್ಲಿ ಬುಟ್ಟಿ ಅಥವಾ ಬಟ್ಟಲು ತುಂಬಾ ಹೂಗಳನ್ನು ಮಾತೆ ಮರಿಯಳಿಗೆ ಅರ್ಪಿಸುತ್ತಾರೆ ಮಕ್ಕಳು, ಹಿರಿಯರು, ಯುವಕರು ಎಲ್ಲರೂ ಹೂವುಗಳನ್ನು ಅರ್ಪಿಸುವುದು ವಾಡಿಕೆಯಾಗಿ ಬಂದಿದೆ.ಸುಮಾರು ನೂರು ವರ್ಷಗಳ ಹಿಂದೆ ಇದು ಚಾಲ್ತಿಯಲ್ಲಿದೆ ಇಂದಿಗೂ ಆಚರಿಸಿಕೊಂಡು ಬರಲಾಗುತ್ತಿದೆ. 9 ದಿನಗಳು ವಿಶೇಷವಾದ ಪ್ರಾರ್ಥನೆಯನ್ನು ಮಾಡಲಾಗುತ್ತದೆ.ತಂದೆ ತಾಯಿಗಳಿಗಾಗಿ, ಮದುವೆಯ ಜೋಡಿಗಳಿಗಾಗಿ,ಮಕ್ಕಳಿಗಾಗಿ, ಹೊರದೇಶದಲ್ಲಿ ಕೆಲಸ ನಿರ್ವಹಿಸುವವರಿಗಾಗಿ, ಹೀಗೆ ವಿವಿಧ ಬೇಡಿಕೆಗಳಿಗಾಗಿ ಪ್ರಾರ್ಥಿಸಲಾಗುತ್ತದೆ.
ಮಾತೆ ಮೇರಿ ತಾಯಿಯಾಗಿ ನಮ್ಮ ಕುಟುಂಬವನ್ನು ರಕ್ಷಿಸಿ ಪೋಷಿಸುತ್ತಾರೆ ಹಾಗಾಗಿ ಕುಟುಂಬದಲ್ಲಿ ತಾಯಿಯ ಸ್ಥಾನ ಮಾನ ನೀಡಲಾಗುತಿದೆ ಹಬ್ಬದ ದಿನ ಸೆಪ್ಟೆಂಬರ್ ಎಂಟರಂದು ಸಂಭ್ರಮದ ಪೂಜಾ ವಿಧಿ ವಿಧಾನಗಳನ್ನು ಮಾಡಲಾಗುತ್ತದೆ. ಮೇರಿಮಾತೆಯನ್ನ ಪಲ್ಲಕ್ಕಿಯಲ್ಲಿ ಮೆರವಣಿಗೆ ಮೂಲಕ ಚರ್ಚ್ ಒಳಗೆ ಸಾಗಿ ವಿಶೇಷ ಪೂಜಾ ವಿಧಿ ವಿಧಾನವನ್ನು ನೆರವೇರಿಸಲಾಗುತ್ತದೆ. ಈ ಹಬ್ಬದ ದಿನ ಹೊಸ ಅಕ್ಕಿ ಊಟವನ್ನು ಮಾಡಲಾಗುತ್ತದೆ ಹೊಸ ಭತ್ತದ ತೆನೆಯನ್ನು ಚರ್ಚುಗಳಲ್ಲಿ ತಂದು ಆಶೀರ್ವದಿಸಿ ಒಂದು ಮನೆಗೆ ಒಂದರಂತೆ ಹಂಚಲಾಗುತ್ತದೆ. ಈ ಹಬ್ಬದ ದಿನ ಚರ್ಚ್ ಗಳಲ್ಲಿ ಕಬ್ಬುಗಳನ್ನು ಹಂಚುವುದು ವಾಡಿಕೆಯಾಗಿದೆ.ಹೀಗೆ 9 ದಿನ ಅಂದರೆ ನೋವೇನಾ ದಿನಗಳಲ್ಲಿ ಕೂಡ ಸಿಹಿ ತಿಂಡಿಗಳನ್ನು ವಿತರಿಸುತ್ತಾರೆ ಮತ್ತು ಹಬ್ಬದ ದಿನ ವಿಶೇಷವಾದಂತಹ ಸಿಹಿ ತಿಂಡಿಯನ್ನು ಹಂಚಲಾಗುತ್ತದೆ. ರೈತರಿಗಾಗಿ ಹಾಗೂ ಪ್ರಕೃತಿಗಾಗಿ ವಿಶೇಷವಾದ ಪ್ರಾರ್ಥನೆಯನ್ನು ಸಲ್ಲಿಸಲಾಗುತ್ತದೆ ಉತ್ತಮ ಮಳೆ,ಬೆಳೆಗಾಗಿ ಪ್ರಾರ್ಥಿಸಲಾಗುತ್ತದೆ. ರೈತರಿಗೆ ವಿಶೇಷವಾದ ಗೌರವವನ್ನು ಸಲ್ಲಿಸಲಾಗುತ್ತದೆ ವಿಶೇಷವಾಗಿ ಹೆಣ್ಣು ಮಕ್ಕಳಿಗಾಗಿ ಕೂಡ ಪ್ರಾರ್ಥಿಸಲಾಗುತ್ತದೆ ಇವೆಲ್ಲ ಈ ಹಬ್ಬದ ವಿಶೇಷತೆಗಳಾಗಿವೆ.
ಚರ್ಚುಗಳಲ್ಲಿ ಆಶೀರ್ವದಿಸಿ ತಂದ ಭತ್ತದ ತೆನೆಯನ್ನು ಮನೆಗೆ ತಂದು ಕ್ಯಾಂಡಲ್ ಗಳನ್ನು ಉರಿಸಿ ಪ್ರಾರ್ಥಿಸಿ ಕುಟುಂಬದಲ್ಲಿ ಇರುವ ಎಲ್ಲಾ ಸದಸ್ಯರಿಗೆ ಒಂದೊಂದು ಭತ್ತದ ಕಾಲನ್ನು ಹುಡಿ ಮಾಡಿ ಪಾಯಸ ಅಥವಾ ಹಾಲಿಗೆ ಸೇರಿಸಿ ಹೊಸತು ಊಟವನ್ನು ಮಾಡಲಾಗುತ್ತದೆ. ಈ ದಿನ ಸಸ್ಯಹಾರವನ್ನು ಮಾತ್ರ ಸೇವಿಸುತ್ತಾರೆ ಅಡುಗೆಗಳು ಬೆಸ ಸಂಖ್ಯೆಯ ಆಧಾರದಲ್ಲಿರುತ್ತದೆ ಹೀಗೆ ಹೊಸ ಅಕ್ಕಿ ಊಟವನ್ನು ಈ ಹಬ್ಬದ ದಿನ ಮಾಡುತ್ತಾರೆ ಹೊರದೇಶದಲ್ಲಿ ಇರುವವರಿಗೆ ಕೆಲವು ಮಾಧ್ಯಮದ ಮೂಲಕ ಭತ್ತದ ತೆನೆಯನ್ನು ಕಳಿಸಿಕೊಡಲಾಗುತ್ತದೆ ಇದು ಕುಟುಂಬದ ಸದಸ್ಯರೆಲ್ಲರೂ ಒಂದು ಸೇರುವ ಹಬ್ಬ ಒಟ್ಟಿಗೆ ಸೇರಿ ಹೊಸ ಅಕ್ಕಿ ಊಟವನ್ನು ಮಾಡುವ ಹಬ್ಬ ಅದರಲ್ಲೂ ಒಂದು ವರುಷ ತುಂಬಿರುವ ಮಕ್ಕಳಿಗೆ ಮತ್ತು
ಮದುವೆಯಾದ ಹೊಸ ಜೋಡಿಗಳಿಗೆ ತುಂಬಾ ವಿಶೇಷವಾದ ಹಬ್ಬ ಇವರಿಗೆ ಹೊಸ ಅಕ್ಕಿ ಊಟ ತುಂಬಾ ವಿಶೇಷವಾದದ್ದು.
ಹೀಗೆ ಮೊಂತಿ ಫೆಸ್ತ್,ಮಾತೆ ಮರೆಯಳ ಹುಟ್ಟುಹಬ್ಬವನ್ನು ಈ ಮೂಲಕ ಹೊಸ ಅಕ್ಕಿ ಊಟ ಮಾಡುವುದರ ಮೂಲಕ ಆಚರಿಸಿ ಕುಟುಂಬದ ಸ್ಥಾನಮಾನ ಅದರ ಮೌಲ್ಯವನ್ನು ಸಾರಲಾಗುತ್ತಿದೆ.

ರೇಶ್ಮ ಕ್ರಾಸ್ತಾ
ಉಪನ್ಯಾಸಕಿ, ತಡಗಜೆ ಬೆಳ್ಳಾರೆ.