ಪಾಲೆಪ್ಪಾಡಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಸಂಪೂರ್ಣ ಭಗವದ್ಗೀತಾ ಪಾರಾಯಣ

0

ಗೀತಾ ಜ್ಞಾನ ಯಜ್ಞ ತಂಡ ಬಾಳಿಲ ಇವರಿಂದ ಐವರ್ನಾಡು ಗ್ರಾಮದ ಪಾಲೆಪ್ಪಾಡಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಶ್ರೀಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ ಸಂಪೂರ್ಣ ಭಗವದ್ಗೀತಾ ಪಾರಾಯಣ ಸೆ. 6ರಂದು ನಡೆಯಿತು. ಸುಮಾರು ಮೂರುವರೆ ಗಂಟೆಗಳ ಕಾಲ ನಿರಂತರ ಭಗವದ್ಗೀತೆಯ 18 ಅಧ್ಯಾಯಗಳ 700 ಶ್ಲೋಕಗಳ ಪಾರಾಯಣ ನಡೆಸಿದರು. ದೇವಳದ ಮುಖ್ಯಸ್ಥರಾದ ಡಾ. ಬಾಲಸುಬ್ರಹ್ಮಣ್ಯ ಪಾಲೆಪ್ಪಾಡಿ ಭಗವದ್ಗೀತೆಯನ್ನು ಓದಿ ತಿಳಿದು ನಮ್ಮ ಜೀವನದಲ್ಲಿ ಯಾವ ರೀತಿ ಅಳವಡಿಸಬೇಕೆಂದು ತಿಳಿಸಿ ದೇವಳದ ಪ್ರಸಾದ ನೀಡಿ ಗೌರವಿಸಿದರು. ಭಗವದ್ಗೀತೆಯ ತಮ್ಮ ಉಸಿರಾಗಿ ಒಂದಷ್ಟು ಕಾರ್ಯಕ್ರಮಗಳನ್ನು ನಿಯೋಸಿರುವ ಈ ತಂಡ ಮನೆ ಮನೆ ಭಗವದ್ಗೀತಾ ಪಾರಾಯಣ, ಶ್ರದ್ಧಾ ಕೇಂದ್ರಗಳಲ್ಲಿ ಹಾಗೂ ಸನಾತನ ಸಂಸ್ಕೃತಿಯ ಷೋಡಶ ಸಂಸ್ಕಾರಗಳಲ್ಲಿಯೂ ಪಾರಾಯಣ ಮಾಡುತ್ತಿದ್ದಾರೆ.


ಪೆರುವಾಜೆ ಬ್ರಹ್ಮ ರಥ ಸಮರ್ಪಣಾ ಯಜ್ಞದಲ್ಲಿ ಈ ತಂಡ ಪ್ರತಿ ಶುಕ್ರವಾರ ಪಾರಾಯಣ ನಡೆಸುತ್ತಾ ಬಂದಿದ್ದು, ಬ್ರಹ್ಮ ರಥ ಸಮರ್ಪಣೆಯ ದಿನದ ವರೆಗೆ ಗೀತಾ ಯಜ್ಞ ನಡೆಸಲಿದ್ದಾರೆ. ಸನಾತನ ಸಂಸ್ಕ್ರತಿಯ ಜಾಗೃತಿ ಮೂಡಿಸುವಲ್ಲಿ ಪ್ರತಿಯೊಂದು ಮನೆಯಲ್ಲಿಯೂ ಭಗವದ್ಗೀತೆ ಗ್ರಂಥವು ಪೂಜಿಸಲ್ಪಡಬೇಕು. ಪ್ರತಿ ಮನೆಯ ಪ್ರತಿ ಮಗುವೂ ಭಗವದ್ಗೀತೆಯನ್ನು ಕಲಿತು ಸನಾತನ ಧರ್ಮದ ಉಳಿವಿಗಾಗಿ ಭಗವದ್ಗೀತೆ ಪುಸ್ತಕಗಳನ್ನು ನೀಡುತ್ತಾ ಬಂದಿದ್ದಾರೆ. ಈ ತಂಡದ ನೇತ್ರತ್ವವನ್ನು ತ್ರಿವೇಣಿ ವಿಶ್ವೇಶ್ವರ ಬಾಳಿಲ ವಹಿಸಿ ಮುನ್ನಡೆಸುತ್ತಿದ್ದಾರೆ. ತಂಡದಲ್ಲಿ ಜಾಹ್ನವಿ ಕಾಂಚೋಡು, ಹರಿಣಾಕ್ಷಿ ಬರೆಮೇಲು, ವೀಣಾ ಕಾಂಚೋಡು, ಸೌಮ್ಯ ಕಾಂಚೋಡು, ಚೈತಾಲಿ ಕಾಂಚೋಡು, ದೀಕ್ಷಿತ್ ಬರೆಮೇಲು, ರೂಪಾ ಸಾಯಿನಾರಾಯಣ, ಶರ್ಮಿಳಾ ಲಿಂಗಪ್ಪ, ಕಮಲಾ ಸೇಸಪ್ಪ ಹಾಗು ಇತರ ಊರ ಪರವೂರಿನ ಗೀತಾಭ್ಯಾಸಿಗಳು ಈ ತಂಡದ ಜೊತೆಗೂಡಿ ಅಲ್ಲಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.


ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಹಿರಿಯರಾದ ಸುಬ್ರಾಯ ನಂದೋಡಿ ಹಾಗೂ ಅವರ ಬಳಗದವರ ಭಗವದ್ಗೀತಾ ಅಧ್ಯಯನ, ಸಂದೇಶ ಹಾಗು ಆನ್ಲೈನ್ ತರಗತಿಗಳ ಮೂಲಕ ಈ ತಂಡ ಕಲಿತು ಮುನ್ನಡೆಯುತ್ತಿದೆ.