ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನ ವತಿಯಿಂದ ಇಂಜಿನಿಯರ್‍ಸ್ ಡೇ ಪ್ರಯುಕ್ತ ಅಟೋಮೊಬೈಲ್ ಲ್ಯಾಬ್ ಕೊಡುಗೆ

0

ಸುಳ್ಯದ ಶಿಲ್ಪಿ ಡಾ. ಕೆ.ವಿ.ಜಿ.ಯವರು ದೇಶ ಕಂಡ ಅದ್ಭುತ ಇಂಜಿನಿಯರ್ : ಡಾ. ಉಜ್ವಲ್ ಯು.ಜೆ.

ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನ ವತಿಯಿಂದ ಇಂಜಿನಿಯರ್‍ಸ್ ಡೇ ಪ್ರಯುಕ್ತ ಸರಕಾರಿ ಜ್ಯೂನಿಯರ್ ಕಾಲೇಜು, ಸುಳ್ಯ ಇಲ್ಲಿನ ಅಟೊಮೋಬೈಲ್ ವಿದ್ಯಾರ್ಥಿಗಳಿಗೆ ಉಪಯುಕ್ತವಾಗುವಂತೆ ಕಾಲೇಜಿನಲ್ಲಿ ತಯಾರಿಸಿದ ಅಟೋಮೊಬೈಲ್‌ಗೆ ಸಂಬಂಧಿಸಿದ ತಾಂತ್ರಿಕತೆಯ ಮೋಡೆಲ್‌ಗಳನ್ನು ಕೊಡುಗೆಯಾಗಿ ನೀಡಲಾಯಿತು.

ಈ ಕಾರ್ಯಕ್ರಮವು ಸೆ. ೧೫ ರಂದು ಸುಳ್ಯದ ಸರಕಾರಿ ಜ್ಯೂನಿಯರ್ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮುಖ್ಯ ಅತಿಥಿ ನೆಲೆಯಲ್ಲಿ ಮಾತನಾಡಿದ ವಿ.ಟಿ.ಯು ಎಕ್ಸಿಕ್ಯುಟಿವ್ ಕೌನ್ಸಿಲ್ ಸದಸ್ಯರು/ ಕಾಲೇಜಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥರು ಡಾ. ಉಜ್ವಲ್ ಯು.ಜೆ.ಯವರು ಇಂದಿನ ಹೊಸ ತಂತ್ರಜ್ಞಾನದ ಜೊತೆಗೆ ಯುವ ಸಮೂಹ ಹೇಗೆ ಮುಂದುವರಿಯಬೇಕು ಹಾಗೂ ಪ್ರತಿಯೊಂದು ವಿದ್ಯಾರ್ಥಿಯ ಜೀವನದಲ್ಲಿ ತಂತ್ರಜ್ಞಾನದ ಬಳಕೆಯ ಬಗ್ಗೆ ಕುತೂಹಲದ ಜೊತೆಗೆ ಕಲಿಕೆಯೊಂದಿಗೆ ಬಳಸಿಕೊಳ್ಳುವುದು ಅತ್ಯಮೂಲ್ಯ. ಡಾ. ಕುರುಂಜಿ ವೆಂಕಟ್ರಮಣ ಗೌಡರು ಸ್ಥಾಪಿಸಿದ ಇಂಜಿನಿಯರಿಂಗ್ ವಿದ್ಯಾಸಂಸ್ಥೆ ತಂತ್ರಜ್ಞಾನದ ಬಗ್ಗೆ ಸುಳ್ಯದ ಜನರಿಗೆ ಅರಿವು ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಆದ್ದರಿಂದ ಸುಳ್ಯದ ಶಿಲ್ಪಿ ಡಾ. ಕೆ.ವಿ.ಜಿ.ಯವರು ಕೂಡಾ ಒಬ್ಬ ಇಂಜಿನಿಯರ್‌ಗಿಂತಲೂ ಮೇಲು ಎಂದು ನುಡಿದರು.

ಕಾರ್ಯಕ್ರಮದ ಅಧ್ಯಕ್ಷೀಯ ನೆಲೆಯಲ್ಲಿ ಮಾತನಾಡಿದ ಸರಕಾರಿ ಜ್ಯೂನಿಯರ್ ಕಾಲೇಜಿನ ಉಪಪ್ರಾಂಶುಪಾಲರಾದ ಶ್ರೀ ಪ್ರಕಾಶ್ ಮೂಡಿತ್ತಾಯ ಇವರು ಮಾತನಾಡಿ ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜು ಹಾಗೂ ಸರಕಾರಿ ಜ್ಯೂನಿಯರ್ ಕಾಲೇಜು ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆದಿರುವುದು ಬಹಳ ಸಂತೋಷ ಇದು ವಿದ್ಯಾರ್ಥಿಗಳಿಗೆ ಸೃಜನಶೀಲ ಚಿಂತನೆಗೆ ಹಾಗೂ ತಂತ್ರಜ್ಞಾನದ ಅರಿವಿಗೆ ಬಹಳ ಸಹಕಾರಿ ಎಂದು ನುಡಿದರು. ಈ ಸಂದರ್ಭದಲ್ಲಿ ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಸುರೇಶ ವಿ.ಯವರು ಮಾತನಾಡಿ ಎಲ್ಲರಿಗೂ ಇಂಜಿನಿಯರ್‍ಸ್‌ಡೇಯ ಶುಭಾಶಯಗಳನ್ನು ತಿಳಿಸುತ್ತಾ ಪ್ರತೀಯೊಬ್ಬರಲ್ಲೂ ಕೂಡಾ ಒಬ್ಬ ಇಂಜಿನಿಯರ್ ಇದ್ದಾರೆ, ನೆರೆದಿದ್ದ ವಿದ್ಯಾರ್ಥಿಗಳಿಗೆ ಕಾಲೇಜಿನ ಕಡೆಯಿಂದ ಕೊಡುಗೆಯಾಗಿ ನೀಡಿದ ಅಟೋಮೊಬೈಲ್ ಪ್ರಾಜೆಕ್ಟ್‌ಗಳನ್ನು ಉತ್ತಮವಾಗಿ ಬಳಸಿ ಪಠ್ಯೇತರ ಚಟುವಟಿಕೆಗಳ ಜೊತೆಗೆ ಪ್ರಾಯೋಗಿಕ ಜ್ಞಾನವನ್ನು ಹೆಚ್ಚಿಸಿಕೊಳ್ಳಿ ಎಂದು ನೆರೆದ ವಿದ್ಯಾರ್ಥಿಗಳಿಗೆ ಹುರಿದುಂಬಿಸಿದರು. ಡೀನ್-ಅಕಾಡೆಮಿಕ್ ಹಾಗೂ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಡಾ. ಉಮಾಶಂಕರ್ ಕೆ.ಎಸ್. ಇವರ ಮಾರ್ಗದರ್ಶನದಲ್ಲಿ ಕಾಲೇಜಿನ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳು ಅಟೋಮೊಬೈಲ್ ಮಾದರಿಗಳನ್ನು ತಯಾರಿಸಿದ್ದು, ಈ ಕಾರ್ಯಕ್ರಮವನ್ನು ಪ್ರೊ. ದಿವಾಕರ ಪೆರಾಜೆ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್ ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥ
ಡಾ. ಕುಸುಮಾಧರ ಎಸ್., ಸಿವಿಲ್ ಇಂಜಿನಿಯರಿಂಗ್ ವಿಭಾಗದ ಪ್ರೊ. ಕೃಷ್ಣರಾಜ್ ಎಂ.ವಿ, ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಪ್ರೊ. ಪ್ರಶಾಂತ್ ಕಕ್ಕಾಜೆ, ಪ್ರೊ. ಅಭಿಜ್ಞ ಬಿ.ಬಿ., ಜ್ಯೂನಿಯರ್ ಕಾಲೇಜಿನ ಎಲ್ಲಾ ಬೋಧಕ, ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.