ಕೊಡಗು ಸಂಪಾಜೆ: ಪಯಸ್ವಿನಿ ಪ್ರಾ.ಕೃ.ಪ.ಸ.ಸಂಘದ ವಾರ್ಷಿಕ ಮಹಾಸಭೆ

0

239 ಕೋಟಿಗೂ ಮೀರಿ ವ್ಯವಹಾರ 32,25, 962.18 ಲಕ್ಷ ವಾರ್ಷಿಕ ಲಾಭ – ಸದಸ್ಯರಿಗೆ ಶೇ.8.5 ಡಿವಿಡೆಂಡ್ ಘೋಷಣೆ

ಕೊಡಗು ಸಂಪಾಜೆಯ ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಪದ 2022-23ನೇ ಸಾಲಿನ ವಾರ್ಷಿಕ ಮಹಾಸಭೆಯು ಸಹಕಾರಿ ಸಂಘದ ಅಧ್ಯಕ್ಷ ಅನಂತ್ ಎನ್.ಸಿ. ಅವರ ಅಧ್ಯಕ್ಷತೆಯಲ್ಲಿ ಸಂಪಾಜೆಯ ಶ್ರೀ ಪಂಚಲಿಂಗೇಶ್ವರ ಸಭಾಂಗಣದಲ್ಲಿ ಸೆ.23ರಂದು ನಡೆಯಿತು.

ಸಂಘದ ಅಧ್ಯಕ್ಷ ಎನ್.ಸಿ. ಅನಂತ ಅವರು ಪ್ರಾಸ್ತಾವಿಕವಾಗಿ ಮಾತನಾಡಿ “ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವು ಸಂಪಾಜೆ ಹಾಗೂ ಚೆಂಬು ಶಾಖೆ ಸೇರಿದಂತೆ ಪ್ರಸ್ತುತ 2641 ಜನ ಸದಸ್ಯರಿದ್ದು, ಸದಸ್ಯರಿಂದ 225.60 ಲಕ್ಷ ಪಾಲು ಬಂಡವಾಳ ಹಾಗೂ ಸಾರ್ವಜನಿಕರಿಂದ ಸಂಗ್ರಹವಾದ ಠೇವಣಿ ಮೊತ್ತ 2044.90 ಲಕ್ಷ ಹೊಂದಿದೆ” ಎಂದರು.

ಸಂಘವು “2022-23ನೇ ಸಾಲಿನಲ್ಲಿ 239 ಕೋಟಿಗೂ ಮೀರಿ ವ್ಯವಹಾರ ಮಾಡಿದ್ದು, 32, 25, 962.18 ಲಕ್ಷ ವಾರ್ಷಿಕ ಲಾಭದಲ್ಲಿದ್ದು, ಸದಸ್ಯರುಗಳಿಗೆ ಶೇ.8.5 ಡಿವಿಡೆಂಡ್ ನೀಡಲಾಗುವುದು” ಎಂದು ಹೇಳಿದರು.

ಈ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ಸಂಘದ ಸದಸ್ಯರ ಮಕ್ಕಳಿಗೆ ವಿದ್ಯಾನಿಧಿ ಯೋಜನೆಯಡಿ ಪ್ರೋತ್ಸಾಹಧನ ನೀಡಿ ಗೌರವಿಸಲಾಯಿತು. ಇದೇ ವೇಳೆ 2022-23ನೇ ಸಾಲಿನಲ್ಲಿ ಕೊಡಗು ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶ್ರೀಮತಿ ಕಾಮಾಕ್ಷಿ ಪಿ.ಎಸ್. ಅವರನ್ನು ಸಹಕಾರಿ ಸಂಘದ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು.

ಸದಸ್ಯ ಬಿ.ಕೆ.ಶಿವರಾಮ ಅವರು ಮಾತನಾಡಿ ಸಂಘವು ವಾರ್ಷಿಕ ಸಾಲಿನಲ್ಲಿ ಎರಡು ಪ್ರಶಸ್ತಿಯನ್ನು ಪಡೆದುಕೊಳ್ಳುವ ಮೂಲಕ, ಅಭಿವೃದ್ಧಿಯತ್ತ ಮುನ್ನುಗುತ್ತಿದ್ದು, ಸದಸ್ಯರ ಸಂಪೂರ್ಣ ಸಹಕಾರ ಸಂಘಕ್ಕೆ ಇದೆ ಎಂದು ಅಭಿನಂದನಾ ಮಾತುಗಳನ್ನಾಡಿದರು.

ನವೋದಯ ಸ್ವಸಹಾಯ ಸಂಘಗಳಿಗೆ ಅನುಕೂಲವಾಗುವಂತೆ ಡಿ.ಸಿ.ಸಿ‌. ಬ್ಯಾಂಕ್ ನಂತೆಯೇ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡುವಂತೆ ಸದಸ್ಯರು ವಿನಂತಿ ಮಾಡಿಕೊಂಡರು.

ನಮ್ಮ ಸಂಘವು ಶೇ.12 ಬಡ್ಡಿದರದಲ್ಲಿ ಸಾಲ ನೀಡುತ್ತಿದೆ. ಆದರೆ ಡಿ.ಸಿ.ಸಿ. ಬ್ಯಾಂಕ್ ಶಾಖೆಯು ಸಂಪಾಜೆಯಲ್ಲಿ ಶೀಘ್ರದಲ್ಲೇ ಉದ್ಘಾಟನೆಗೊಳ್ಳಲಿದ್ದು, ರೂಪೇ ಕಾರ್ಡ್ ಸಂಗ್ರಹ ಅನಿವಾರ್ಯ ಆಗುವುದಿಲ್ಲ. ಡಿ‌.ಸಿ.ಸಿ. ಬ್ಯಾಂಕ್ ಅಕೌಂಟ್ ಮೂಲಕ ನವೋದಯ ಸಂಘಕ್ಕೆ ಅನುಕೂಲವಾಗುವಂತೆ ಸಾಲ ನೀಡುತ್ತೇವೆ. ಮುಂದಿ‌ನ ದಿನಗಳಲ್ಲಿ ಸಂಘದ
ದೀರ್ಘಾವಧಿ ಸಾಲವನ್ನು ಡಿ‌.ಸಿ.ಸಿ. ಬ್ಯಾಂಕ್ ಶಾಖೆಗೆ ವರ್ಗಾಯಿಸುತ್ತೇವೆ ಎಂದು ಅಧ್ಯಕ್ಷ ಅನಂತ್ ಎನ್.ಸಿ. ಹೇಳಿದರು.

ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಕೆ.ಆರ್. ರಾಜಾರಾಮ ಕಳಗಿ, ನಿರ್ದೇಶಕರಾದ ದಯಾನಂದ ಪನೇಡ್ಕ, ಬಿ.ಎ. ಗಣಪತಿ, ಆದಂಕುಂಞಿ ಸಂಟ್ಯಾರ್, ಯಶವಂತ ದೇವರಗುಂಡ, ಶ್ರೀಮತಿ ಮನೋರಮಾ ಬೊಳ್ತಾಜೆ, ಶ್ರೀಮತಿ ವಾಣಿ, ಕೆ.ಜೆ., ರಾಮಮೂರ್ತಿ ಎಂ.ಟಿ. , ಕಿಶನ್ ಪಿ.ಪಿ., ವಸಂತ ಸಿ.ಕೆ., ಪಕ್ಕೀರ ಹೆಚ್., ದಿನೇಶ ಸಣ್ಣಮನೆ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ ಬಿ.ಕೆ. ಉಪಸ್ಥಿತರಿದ್ದರು. ಸಂಪಾಜೆ ಹಾಗೂ ಚೆಂಬು ಗ್ರಾಮದ ಸಹಕಾರಿ ಸದಸ್ಯಬಂಧುಗಳು ಸಭೆಯಲ್ಲಿ ಉಪಸ್ಥಿತರಿದ್ದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ ಬಿ.ಕೆ. ಸ್ವಾಗತಿಸಿ, ಉಪಾಧ್ಯಕ್ಷ ರಾಜಾರಾಮ ಕಳಗಿ ವಂದಿಸಿದರು. ಸಂಘದ ಸಿಬ್ಬಂದಿಗಳು ಸಹಕರಿಸಿದರು.