ಡಾ.ಜ್ಯೋತಿ ಆರ್.ಪ್ರಸಾದ್ ಹೇಳಿಕೆ ಸರಿಯಲ್ಲ

0

ಪತ್ರಿಕಾಗೋಷ್ಠಿಯಲ್ಲಿ ಡಾ.ಕೆ.ವಿ.ಚಿದಾನಂದ ಸ್ಪಷ್ಟನೆ

ಡಾ. ಜ್ಯೋತಿ ಆರ್. ಪ್ರಸಾದ್‌ರವರ ಹೇಳಿಕೆ ಸರಿಯಲ್ಲ. ಇತ್ತೀಚೆಗೆ ನಡೆದ ವಿದ್ಯಮಾನಗಳ ಹಿನ್ನಲೆಯಲ್ಲಿ ಸಂಸ್ಥೆಯ ಹಿತದೃಷ್ಟಿಯನ್ನು ಕಾಪಾಡುವ ದೃಷ್ಟಿಯಿಂದ ಕೌನ್ಸಿಲ್ ಸದಸ್ಯರು ಕೆವಿಜಿ ಪಾಲಿಟೆಕ್ನಿಕ್‌ಗೆ ಭೇಟಿ ನೀಡಿದ್ದಾರೆಯೇ ಹೊರತು ಯಾವುದೇ ರೀತಿಯ ದಬ್ಬಾಳಿಕೆ ಅಥವಾ ಒತ್ತಡ ಹೇರಿಲ್ಲ ಎಂದು ಅಕಾಡೆಮಿ ಆಫ್ ಲಿಬರಲ್ ಎಜ್ಯಕೇಶನ್ ಅಧ್ಯಕ್ಷ ಡಾ.ಕೆ.ವಿ. ಚಿದಾನಂದರು ತಿಳಿಸಿದ್ದಾರೆ.


ಡಾ.ಜ್ಯೋತಿ ಆರ್.ಪ್ರಸಾದ್ ಅವರ ಪತ್ರಿಕಾಗೋಷ್ಠಿಯ ಬಳಿಕ ಕೆ.ವಿ.ಜಿ ಆಯುರ್ವೇದಿಕ್ ಕಾಲೇಜಿನ ತನ್ನ ಕಚೇರಿಯಲ್ಲಿ ತುರ್ತು ಪತ್ರಿಕಾಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ ಅವರು, ನಮ್ಮ ಸಂಸ್ಥೆಯ ಓರ್ವ ಸದಸ್ಯರಾದ ಡಾ. ರೇಣುಕಾ ಪ್ರಸಾದ್ ಕೆ. ವಿ. ಇವರು ನಮ್ಮ ಕೆವಿಜಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಆಡಳಿತಾಧಿಕಾರಿ ಹಾಗೂ ಕೆ.ವಿಜಿ ಪಾಲಿಟೆಕ್ನಿಕ್ ನ ಮಾಜಿ ಪ್ರಾಂಶುಪಾಲರಾಗಿದ್ದ ಪ್ರೊ. ರಾಮಕೃಷ್ಣ ಎ. ಎಸ್. ಅವರ ಕೊಲೆಕೇಸಿನಲ್ಲಿ ಉಚ್ಚನ್ಯಾಯಾಲಯದಿಂದ ಜೀವಾವಧಿ ಶಿಕ್ಷೆಗೊಳಪಟ್ಟಿದ್ದಾರೆ. ಆ ಪ್ರಕಾರ ನಮ್ಮ ಸಂಘದ ಸಭೆಯ ನಿರ್ಣಯದ ಪ್ರಕಾರ ಎಲ್ಲಾ ಸಂಸ್ಥೆಗಳು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ನ ವ್ಯಾಪ್ತಿಗೆ ಬರುವುದರಿಂದ ಈ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳು, ಉದ್ಯೋಗಿಗಳು ಹಾಗೂ ಸಂಸ್ಥೆಯ ಭವಿಷ್ಯದ ಹಿತದೃಷ್ಟಿಯಿಂದ ಯಾವುದೇ ತೊಂದರೆಗಳು ಬಾರದಂತೆ ಹಾಗೂ ಸಂಸ್ಥೆಯ ಅಭಿವೃದ್ಧಿಯ ದೃಷ್ಟಿಯಿಂದ ಕ್ರಮಗಳನ್ನು ಕೈಗೊಳ್ಳಲು ನಿರ್ಧರಿಸಲಾಗಿದೆ. ಆ ಪ್ರಯುಕ್ತ ಪ್ರಥಮ ಹಂತದಲ್ಲಿ ಕೌನ್ಸಿಲ್ ಸದಸ್ಯರು ಕೆ.ವಿ.ಜಿ. ಪಾಲಿಟೆಕ್ನಿಕ್‌ಗೆ ಇಂದು ಭೇಟಿ ನೀಡಿ ಕಾಲೇಜಿನ ಪ್ರಾಂಶುಪಾಲರ ಜೊತೆಗೆ ಸಂಸ್ಥೆಯ ಪ್ರಗತಿಯ ಬಗ್ಗೆ ಚರ್ಚಿಸಿದ್ದೇವೆ. ಹಾಗೂ ಈ ಸಂಸ್ಥೆಯ ಉದ್ಯೋಗಿಗಳು, ವಿದ್ಯಾರ್ಥಿಗಳು ಹಾಗೂ ಸಂಸ್ಥೆಯ ಹಿತದೃಷ್ಠಿಯಿಂದ ಉತ್ತಮವಾಗಿ ನಡೆಸಿಕೊಂಡು ಬರಲು ಮಾರ್ಗದರ್ಶನ ಹಾಗೂ ಸಲಹೆ ಸೂಚನೆಗಳನ್ನು ನೀಡಲಾಗಿದೆ. ಇತ್ತೀಚೆಗೆ ನಡೆದ ವಿದ್ಯಾಮಾನಗಳ ಬಗ್ಗೆ ಚರ್ಚಿಸಲಾಗಿದೆ ಎಂದು ತಿಳಿಸಿದ್ದಾರೆ. ಡಾ. ಜ್ಯೋತಿ ಆರ್. ಪ್ರಸಾದ್ ಮತ್ತು ಅಭಿಜ್ಞಾ ಅಕಾಡೆಮಿಯ ಸದಸ್ಯರುಗಳೇ ಹೊರತು ನಿರ್ದೇಶಕರಲ್ಲ. ಜೀವಾವಧಿ ಶಿಕ್ಷೆಗೊಳಪಟ್ಟಿರುವ ಹಿನ್ನಲೆಯಲ್ಲಿ ರೇಣುಕಾಪ್ರಸಾದ್ ಅವರ ಸದಸ್ಯತ್ವವೂ ತನ್ನಿಂತಾನೇ ಅನೂರ್ಜಿತಗೊಂಡಿದೆ. ಹೀಗಾಗಿ ಅವರು ಈಗ ಸದಸ್ಯರೂ ಅಲ್ಲ ಎಂದು ಹೇಳಿದ ಅವರು ಜೀವಾವಧಿ ತೀರ್ಪಿನ ಬಗ್ಗೆ ನಾನು ಯಾವುದೇ ಕಮೆಂಟ್ ಮಾಡಲು ಹೋಗುವುದಿಲ್ಲ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಅಕಾಡೆಮಿಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ಅಕ್ಷಯ್, ಉಪಾಧ್ಯಕ್ಷೆ ಶೋಭಾ ಚಿದಾನಂದ, ಕಾರ್ಯದರ್ಶಿ ಕೆ.ವಿ. ಹೇಮನಾಥ್, ಐಶ್ವರ್ಯ ಗೌತಮ್, ಧನಂಜಯ ಮದುವೆಗದ್ದೆ, ನ್ಯಾಯವಾದಿ ಕೆ.ಎಲ್.ಪ್ರದೀಪ್ ಪತ್ರಿಕಾಗೋಷ್ಠಿಯಲ್ಲಿದ್ದರು.