ಕುಕ್ಕುಜಡ್ಕ: ಚೊಕ್ಕಾಡಿ ಪ್ರೌಢಶಾಲೆಯ ಸುವರ್ಣ ಮಹೋತ್ಸವದ ಪೂರ್ವ ಭಾವಿ ಸಭೆ

0

ಅಮರಮುಡ್ನೂರು ಗ್ರಾಮದ ಕುಕ್ಕುಜಡ್ಕದ ಲ್ಲಿರುವ ಚೊಕ್ಕಾಡಿ ಪ್ರೌಢಶಾಲೆ (ಅನುದಾನಿತ) ಇದರ ಸುವರ್ಣ ಮಹೋತ್ಸವದ ಪೂರ್ವ ಭಾವಿ ಸಭೆಯು ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರು, ಮಾಜಿ ಸಚಿವರಾದ ಎಸ್.ಅಂಗಾರ ರವರ ಅಧ್ಯಕ್ಷತೆಯಲ್ಲಿ ನ.17 ರಂದು ಶಾಲೆಯ ಸಭಾಭವನದಲ್ಲಿ ನಡೆಯಿತು.

1973 ರಲ್ಲಿ ಪ್ರಾರಂಭಗೊಂಡ ಶಾಲೆಗೆ 50 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಮುಂದಿನ 2024 ರ ಜನವರಿ ತಿಂಗಳಲ್ಲಿ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು. ಶಾಲೆಯ ಕಟ್ಟಡದ ಅಭಿವೃದ್ಧಿ ಕಾಮಗಾರಿ ಕೆಲಸ ನಡೆಯುತ್ತಿದ್ದು ಉತ್ಸವದ ಸಮಯದಲ್ಲಿ ವಿವಿಧ ಹೊಸ ಯೋಜನೆಗಳನ್ನು ಪೂರ್ಣಗೊಳಿಸಿ ಲೋಕಾರ್ಪಣೆ ಮಾಡಲಾಗುವುದು. ಈ ನಿಟ್ಟಿನಲ್ಲಿ ನಮ್ಮ ಊರಿನ ಶಾಲೆಯ ಉಳಿವಿಗಾಗಿ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಹಳೆ ವಿದ್ಯಾರ್ಥಿಗಳು ಸಹಕಾರ ನೀಡಿ ಕೈಜೋಡಿಸುವಂತೆ ಮಾಜಿ ಸಚಿವ ಎಸ್.ಅಂಗಾರ ರವರು ಪ್ರಸ್ತಾಪಿಸಿದರು. ಶಾಲಾ ಆಡಳಿತ ಸಮಿತಿ ಸಂಚಾಲಕ ರಾಧಾಕೃಷ್ಣ ಬೊಳ್ಳೂರು ರವರು ಮಾತನಾಡಿ ಈಗಾಗಲೇ ಶಾಲೆಯ ಹಿರಿಯ ಕಿರಿಯ ಹಳೆ ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ಸುವರ್ಣ ಮಹೋತ್ಸವ ಸಮಿತಿ ರಚಿಸಲಾಗಿದೆ. ಶಾಲೆಯ ಅಭಿವೃದ್ಧಿ ಪರ ಕಾರ್ಯಗಳಿಗೆ ಅಂದಾಜು ಸುಮಾರು 1.5 ಕೋಟಿ ವೆಚ್ಚ ತಗಲುವ ಸಾಧ್ಯತೆ ಇದ್ದು ಊರಿನ ಹಾಗೂ ಹಳೆ ವಿದ್ಯಾರ್ಥಿಗಳನ್ನು ಸಂಪರ್ಕಿಸಿ ಕೈ ಜೋಡಿಸುವ ಬಗ್ಗೆ ವಿವಿಧ ಸಮಿತಿಯ ಸಂಚಾಲಕರು ಹಾಗೂ ಸದಸ್ಯರು ಕಾಳಜಿ ವಹಿಸಿ ಕಾರ್ಯ
ಪೃವೃತ್ತರಾಗುವಂತೆ ಸೂಚಿಸಿದರು.

ಈ‌ ಸಂದರ್ಭದಲ್ಲಿ ಸಮಿತಿ ಕಾರ್ಯದರ್ಶಿ ತೇಜಸ್ವಿ ಕಡಪಳ, ಮುಖ್ಯ ಶಿಕ್ಷಕ ಸಂಕೀರ್ಣ ಚೊಕ್ಕಾಡಿ, ಹಿರಿಯರಾದ ಎಂ.ಟಿ.ಶಾಂತಿಮೂಲೆ, ಎಸ್.ಡಿ.ಎಂ.ಸಿ.ಅಧ್ಯಕ್ಷ ವಿಶ್ವನಾಥ ಮೂಕಮಲೆ, ಉಪಾಧ್ಯಕ್ಷ ಅಣ್ಣಾಜಿ ಗೌಡ ಚೊಕ್ಕಾಡಿ, ಖಜಾಂಜಿ ಹರ್ಷವರ್ಧನ ಬೊಳ್ಳೂರು, ನಿರ್ದೇಶಕರಾದ ಡಾ.ಸನತ್ ಚೊಕ್ಕಾಡಿ, ಆನಂದ ಗೌಡ, ಜನಾರ್ದನ ಆಚಾರ್ಯ ಕುಂಟಿಕಾನ, ಸತ್ಯ ಪ್ರಸಾದ್ ಪುಳಿಮಾರಡ್ಕ, ನಂದರಾಜ್ ಸಂಕೇಶ ಹಾಗೂ ಶಾಲಾ ಅದ್ಯಾಪಕ‌‌ ವೃಂದದವರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.