ಕ್ಯಾಪ್ಟನ್ ಪ್ರಾಂಜಲ್ ಬಲಿದಾನ ವ್ಯರ್ಥ ವಾಗದಿರಲಿ -ಡಾ.ಚೂಂತಾರು

0

ದೇಶದ ರಕ್ಷಣೆಗಾಗಿ ತನ್ನ ಜೀವವನ್ನೇ ಪಣಕ್ಕಿಟ್ಟು ಹೋರಾಡಿ ಹುತಾತ್ಮರಾದ ಕ್ಯಾಪ್ಟನ್ ಪ್ರಾಂಜಲ್ ಅವರು ನಮ್ಮ ಯುವ ಪೀಳಿಗೆಗೆ ಮಾದರಿ. ಅವರ ತ್ಯಾಗ ಮತ್ತು ಬಲಿದಾನ ವ್ಯರ್ಥ ವಾಗದಿರಲಿ. ಭಯೋತ್ಪಾದನೆ ಮತ್ತು ಹಿಂಸಾಚಾರವನ್ನು ಬೇರು ಸಮೇತ ಕಿತ್ತು ಹಾಕಿ ಅಗಲಿದ ಕ್ಯಾಪ್ಟನ್ ಪ್ರಾಂಜಲ್ ಅವರ ಆತ್ಮಕ್ಕೆ ಶಾಂತಿ ಸಿಗುವಂತೆ ಮಾಡುವ ಗುರುತರ ಜವಾಬ್ದಾರಿ ನಮ್ಮ ಮೇಲಿದೆ. ನಾವೆಲ್ಲಾ ನಮ್ಮ ಜಾತಿ ಮತ ಧರ್ಮ ಎಂದು ಕಚ್ಚಾಡದೆ, ದೇಶದ ಆಂತರಿಕ ಭದ್ರತೆ ಮತ್ತು ಶಾಂತಿ ಹಾಗೂ ಸುವ್ಯವಸ್ಥೆ ಕಾಪಾಡಲು ಕಟಿಬಧ್ಧರಾಗಬೇಕಾಗಿದೆ. ಅದುವೇ ನಾವು ಕ್ಯಾಪ್ಟನ್ ಪ್ರಾಂಜಲ್ ಅವರಿಗೆ ನಾವು ನೀಡುವ ಅತಿ ದೊಡ್ಡ ಗೌರವ ಮತ್ತು ಶ್ರದ್ಧಾಂಜಲಿ ಎಂದು ದ.ಕ ಜಿಲ್ಲಾ ಗ್ರಹ ರಕ್ಷಕ ದಳದ ಸಮಾದೇಷ್ಟ ಡಾ. ಮುರಲಿ ಮೋಹನ್ ಚೂಂತಾರು ಅಭಿಪ್ರಾಯ ಪಟ್ಟರು. ದ.ಕ ಜಿಲ್ಲಾ ಗ್ರಹ ರಕ್ಷಕ ದಳ ಮತ್ತು ದ.ಕ ಜಿಲ್ಲಾ ಪೌರ ರಕ್ಷಣಾ ಪಡೆ ವತಿಯಿಂದ ಇತ್ತೀಚೆಗೆ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿ ಹುತಾತ್ಮ ರಾದ ಕ್ಯಾಪ್ಟನ್ ಪ್ರಾಂಜಲ್ ಅವರಿಗೆ ಪುಷ್ಪ ನಮನ, ಶ್ರದ್ಧಾಂಜಲಿ ಸಭೆ ಸಮಾದೇಷ್ಟ ಡಾ. ಮುರಲಿ ಮೋಹನ್ ಚೂಂತಾರು ಅವರು ನೇತೃತ್ವದಲ್ಲಿ ನ.27ರಂದು ದ.ಕ ಜಿಲ್ಲಾ ಗ್ರಹ ರಕ್ಷಕ ಕಛೇರಿಯಲ್ಲಿ ನಡೆಯಿತು. ಮೊಂಬತ್ತಿ ಹಚ್ಚಿ ಒಂದು ನಿಮಿಷ ಮೌನ ಪ್ರಾರ್ಥನೆ ಮಾಡಿ ಅವರ ಆತ್ಮಕ್ಕೆ ಶಾಂತಿ ಕೋರಲಾಯಿತು. ಈ ಸಂದರ್ಭದಲ್ಲಿ ಮಂಗಳೂರು ಘಟಕದ ಘಟಕಾಧಿಕಾರಿ ಮಾರ್ಕ ಶೆರಾ, ಪೌರ ರಕ್ಷಣಾ ಪಡೆಯ ಸಂತೋಷ್ ಪೀಟರ್, ನಿತಿನ್, ಹಿರಿಯ ಗ್ರಹ ರಕ್ಷಕ ರಾದ ಸುನಿಲ್, ಕನಕಪ್ಪ, ದಿವಾಕರ್, ಹೊನ್ನಪ್ಪ, ಪ್ರಶಾಂತ್, ಜ್ಞಾನೇಶ್ ಹಾಗೂ ಇತರರು ಉಪಸ್ಥಿತರಿದ್ದರು.