ಓಟರ್ ಐ.ಡಿ.ಯಲ್ಲಿ ಎರಡು ವಿಳಾಸಕ್ಕೆ ಒಬ್ಬರದ್ದೇ ಫೋಟೊ : ಮತದಾರರದಲ್ಲಿ ಆತಂಕ

0

ಮತದಾರರ ಚೀಟಿಯಲ್ಲಿ ಎರಡು ವಿಳಾಸಕ್ಕೆ ಒಬ್ಬರದ್ದೇ ಫೋಟೋ ಇರುವ ನೋಟೀಸು ತಾಲೂಕಿನಲ್ಲಿ ಹಲವು ಮಂದಿಗೆ ಬರತೊಡಗಿದೆ. ಇದರಿಂದ ನೋಟೀಸ್ ಬಂದಿರುವ ಮತದಾರರು ಆತಂಕಗೊಂಡಿದ್ದಾರೆ. ತಾಲೂಕಿಗೆ ಮಾತ್ರವಲ್ಲದೇ ಸುಳ್ಯದ ಯುವಕನೊಬ್ಬನ ಫೋಟೋ ಇರುವ ಓಟರ್ ಐ.ಡಿ. ಜಮ್ಮುಕಾಶ್ಮೀರದ ವಿಳಾಸದಲ್ಲಿ ಇರುವುದಾಗಿ ಗೊತ್ತಾಗಿದೆ.
ಲೋಕಸಭೆ, ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಚುನಾವಣೆಗಳು ಹತ್ತಿರ ಬರುತಿದ್ದಂತೆ ಸುಳ್ಯ ಸೇರಿದಂತೆ ಎಲ್ಲ ಕಡೆಯಲ್ಲಿಯೂ ಮತದಾರರ ಪಟ್ಟಿ ಪರಿಷ್ಕರಣೆ ಆಗುತ್ತಿದೆ. ಮತದಾರರ ಪಟ್ಟಿಗೆ ಹೆಸರು ಸೇರಿಸುವ ಹಾಗೂ ಹೆಸರು ತೆಗೆದು ಹಾಕುವ ಪ್ರಕ್ರಿಯೆಯೂ ಒಳಗೊಂಡಂತೆ, ಒಂದೇ ವ್ಯಕ್ತಿಯಂತೆ ಎರಡೆರಡು ವ್ಯಕ್ತಿಗಳ ಭಾವಚಿತ್ರಗಳು ಇರುವುದು ಚುನಾವಣಾ ಆಯೋಗದ ವೆಬ್‌ಸೈಟ್‌ಗಳಲ್ಲಿ ಪತ್ತೆಯಾಗಿರುವುದರಿಂದ ಅದನ್ನು ಮತದಾರರಲ್ಲೇ ಧೃಢಪಡಿಸುವ ಉದ್ದೇಶದಿಂದ ಚುನಾವಣಾ ಆಯೋಗವೂ ಒಂದೇ ರೀತಿ ಫೋಟೋ ಇರುವ ವ್ಯಕ್ತಿಗಳಿಗೆ ನೋಟೀಸ್ ಜಾರಿಗೊಳಿಸಿ, ಈ ಎರಡು ವಿಳಾಸದಲ್ಲಿ ತಾವು ಯಾವ ವಿಳಾಸದಲ್ಲಿದ್ದೀರಾ ಎಂದು ಧೃಢ ಪಡಿಸುವಂತೆ ಸೂಚನೆ ನೀಡಿದೆಯಲ್ಲದೇ, ಅದನ್ನು ಸರಿ ಪಡಿಸುವ ಕ್ರಮವನ್ನು ತಿಳಿಸಿದೆ. ಈ ನೋಟೀಸು ಮತದಾರರ ಕೈ ಸೇರುತಿದ್ದಂತೆ ಕೆಲವರು ತಾಲೂಕು ಕಚೇರಿಗೆ ಬಂದು ಸರಿಪಡಿಸಿಕೊಂಡರೆ, ಇನ್ನೂ ಕೆಲವರು ಆತಂಕಗೊಂಡಿದ್ದಾರೆ.
ಸುಳ್ಯ ಭಸ್ಮಡ್ಕದ ಸಂತೋಷ್ ನಾಯರ್ ಎಂಬವರ ಫೋಟೋ ಇರುವ ಓಟರ್ ಐಡಿಯಲ್ಲಿ ಒಂದರಲ್ಲಿ ಸಂತೋಷರ ಭಸ್ಮಡ್ಕದ ವಿಳಾಸ ವಿದ್ದರೆ, ಇನ್ನೊಂದು ಫೋಟೋದ ಮೇಲೆ ಜಮ್ಮು ಕಾಶ್ಮೀರದ ಬೊನಾಪುರ ಕುದ್ವಾನಿ ವಿಳಾಸ ನಮೂದಾಗಿದೆ. ಇದರಿಂದ ಸಂತೋಷ್ ಸಹಜವಾಗಿಯೇ ಆತಂಕಗೊಂಡಿದ್ದಾರೆ. ಈ ಕುರಿತು ಸುದ್ದಿಯೊಂದಿಗೆ ಮಾತನಾಡಿದ ಸಂತೋಷ್ ನಾಯರ್ “ಇದರಿಂದ ನನಗೆ ಆತಂಕವಾಗಿದೆ. ನನ್ನದೇ ಫೋಟೋ ಬಳಸಿ ಹೀಗೆ ಆದುದು ಹೇಗೆ? ಈ ಕುರಿತು ಸರಕಾರ ತನಿಖೆ ನಡೆಸಬೇಕು” ಎಂದು ಹೇಳಿದ್ದಾರೆ.
ನೆಲ್ಲೂರು ಕೆಮ್ರಾಜೆಯ ಕಮಲಾಕ್ಷಿ ಎಂಬವರಿಗೂ ಇದೇ ರೀತಿಯ ನೋಟೀಸ್ ಬಂದಿದ್ದು, ಇನ್ನೊಂದು ಫೋಟೋದ ಕೆಳಗೆ ಮರ್ಕಂಜದ ವಿಳಾಸ ನಮೂದಾಗಿದೆ. ತೊಡಿಕಾನ ವ್ಯಕ್ತಿಯೊಬ್ಬರಿಗೂ ಇದೇ ರೀತಿ ನೋಟೀಸು ಜಾರಿಯಾಗಿದೆ.

ತಾಲೂಕಿನಲ್ಲಿ 8೦೦ ಮಂದಿಗೆ ನೋಟೀಸ್ : ಚುನಾವಣಾ ಶಾಖೆ ಮಾಹಿತಿ

ಈ ಕುರಿತು ಸುಳ್ಯ ಚುನಾವಣಾ ಶಾಖೆಯ ಉಪತಹಶೀಲ್ದಾರ್ ಚಂದ್ರಕಾಂತ್ ಎಂ. ಆರ್.ರನ್ನು ಸಂಪರ್ಕಿಸಿ ವಿಚಾರಿಸಿದಾಗ, “ನಮ್ಮಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಆಗುತ್ತಿದೆ. ಒಬ್ಬರ ತರನೇ ಇರುವ ವ್ಯಕ್ತಿಗಳು ಬೇರೆ ಬೇರೆ ಕಡೆಯಲ್ಲಿ ಇರುತ್ತಾರೆ. ಅದೇ ರೀತಿ ಚುನಾವಣಾ ಆಯೋಗದ ವೆಬ್ ಸೈಟ್‌ನಲ್ಲಿ ಈ ರೀತಿ ಕಂಡು ಬಂದಾಗ ಅದನ್ನು ಪರಿಷ್ಕರಣೆಗಾಗಿ ಅಲ್ಲಿರುವ ಎರಡೂ ವಿಳಾಸಕ್ಕೂ ನೋಟೀಸ್ ಕಳುಹಿಸಲಾಗುತ್ತದೆ. ಮತ್ತು ಅದನ್ನು ಸರಿ ಪಡಿಸುವ ಕುರಿತು ಅದರಲ್ಲೇ ಉಲ್ಲೇಖ ಮಾಡಲಾಗಿದೆ. ಈ ರೀತಿಯ ನೋಟೀಸು ಬಂದವರು ಸ್ಥಳೀಯ ಬಿಎಲ್‌ಒ, ಗ್ರಾಮ ಆಡಳಿತಾಧಿಕಾರಿಗಳನ್ನು ಸಂಪರ್ಕಿಸಿ ಸರಿಪಡಿಸಬಹುದಾಗಿದೆ. ಸುಳ್ಯ ತಾಲೂಕು ಕಚೇರಿಯ ಚುನಾವಣಾ ಶಾಖೆಗೂ ಭೇಟಿ ನೀಡಿ ಮಾಹಿತಿ ಪಡೆಯಬಹುದು” ಎಂದು ಅವರು ಮಾಹಿತಿ ನೀಡಿದ್ದಾರೆ.