ಸ್ನೇಹದಲ್ಲಿ ಕೆ.ವಿ.ಜಿ ಸಾಧನೆ – ಸಂಸ್ಮರಣೆ ಕಾರ್ಯಕ್ರಮ

0

ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ಕೆ.ವಿ.ಜಿ ಸಾಧನೆ ಮತ್ತು ಕಾರ್ಯಕ್ರಮ ಡಿ.16ರಂದು ಜರಗಿತು. ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸಿ, ಕೆ.ವಿ.ಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಉದ್ಘಾಟಿಸಲಾಯಿತು. ಕೆವಿಜಿಯವರ ಸಾಧನೆಗಳು ವಿಷಯದಲ್ಲಿ ಪ್ರೌಢಶಾಲಾ ವಿಭಾಗದಲ್ಲಿ ಪ್ರಥಮ ಬಹುಮಾನ ಪಡೆದ ವಿದ್ಯಾರ್ಥಿ ಗಗನ್ ಎ. ವಿ ಮತ್ತು ಪ್ರಾಥಮಿಕ ವಿಭಾಗದಲ್ಲಿ ಪ್ರಥಮ ಬಹುಮಾನ ಪಡೆದ ಅಪ್ರಮೇಯ ಆರ್ ಯು ಭಾಷಣದ ಮೂಲಕ ಕುರುಂಜಿಯವರ ಕೊಡುಗೆಗಳನ್ನು ಮತ್ತೊಮ್ಮೆ ಸ್ಮರಿಸಿದರು.


ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿದ್ದ ಶ್ರೀ ಶಾರದಾ ಮಹಿಳಾ ಪದವಿ ಪೂರ್ವ ಕಾಲೇಜು ಇಲ್ಲಿನ ಉಪನ್ಯಾಸಕ ಪ್ರಸನ್ನ ನಿಡ್ಯಮಲೆ ಇವರು ಮಾತನಾಡಿ “ಸಮಾಜದಲ್ಲಿ ಬದುಕಲು ಇತಿಹಾಸ ತಿಳಿಯಬೇಕು. ಕುರುಂಜಿಯವರು ಆದರ್ಶ ಪುರುಷರು. ಅವರ ಸ್ಮರಣೆ ಮಾಡಬೇಕು. ಅವರ ಸಂಸ್ಕಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅವರ ದುಡಿಮೆಯ ಕ್ರಮವನ್ನು ಆದರ್ಶವಾಗಿಸಿಕೊಂಡು ದೇಶದ ಅಭಿವೃದ್ಧಿಗಾಗಿ ಪ್ರತಿಯೊಬ್ಬನು ಸಮಯವನ್ನು ಮೀಸಲಿಡಬೇಕು. ಸೋಮಾರಿತನ ದೇಶಕ್ಕೆ ಮಾರಕ. ಕೃಷಿಕರಾಗಿದ್ದ ಕೆವಿಜಿಯವರು ಸುಳ್ಯವನ್ನು ಶಿಕ್ಷಣ ಕಾಶಿಯನ್ನಾಗಿಸಿದರು. ಕುಟುಂಬದಲ್ಲಿ ಹೊಂದಾಣಿಕೆ ಇದ್ದು, ದುಶ್ಚಟಗಳಿಂದ ದೂರವಿದ್ದಾಗ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಸಾಧ್ಯ. ಸರಳ ಜೀವನವನ್ನು ನಡೆಸುತ್ತಾ ಎಲ್ಲರನ್ನೂ ಗೌರವಿಸುವ ಗುಣ ನಮ್ಮಲ್ಲಿ ಅಳವಡಿಸಿಕೊಳ್ಳಬೇಕು. ಅಂತಹ ವ್ಯಕ್ತಿತ್ವವನ್ನು ನಾವು ಕೆ. ವಿ.ಜಿಯವರಿಂದ ಆದರ್ಶವಾಗಿ ಪಡೆಯಬೇಕು” ಎಂದು ಹೇಳಿದರು. ಈ ಸಂದರ್ಭದಲ್ಲಿ ಬಹುಮಾನ ವಿತರಣೆ ಕಾರ್ಯಕ್ರಮ ಜರಗಿತು. ಕೆವಿಜಿ ಅವರ ಸ್ಮರಣಾರ್ಥ ಶಾಲೆಗೆ ಈ ಸಂದರ್ಭದಲ್ಲಿ ಪುಸ್ತಕವನ್ನ ಕೊಡಲಾಯಿತು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿರುವ ಡಾ. ಚಂದ್ರಶೇಖರ ದಾಮ್ಲೆಯವರು ಮಾತನಾಡಿ ” ಕೆ.ವಿ.ಜಿ ಸಾಧನೆ ಮತ್ತು ಸಂಸ್ಮರಣೆ ಕಾರ್ಯಕ್ರಮ ಸ್ಥಳೀಯವಾಗಿ ಮಹತ್ವಪೂರ್ಣದ್ದು. ಕುಗ್ರಾಮವಾಗಿದ್ದ ಸುಳ್ಯದ ಚಿತ್ರಣವನ್ನೇ ಬದಲಾಯಿಸಿದವರು ಕುರುಂಜಿಯವರು. ಇವರು ಸುಳ್ಯದ ಶಿಲ್ಪಿ. ಎಲ್ಲಾ ಉದ್ಯಮಗಳಿಗೆ ಪ್ರೇರಣೆಯಾದವರು. ಇವರಿಂದ ಉಳಿತಾಯದ ಮೌಲ್ಯವನ್ನು ಅರಿತುಕೊಳ್ಳಬೇಕು. ಕುರುಂಜಿಯವರನ್ನು ಅನುಸರಿಸಿದರೆ ಸಮಯ, ಹಣ ಮತ್ತು ವಸ್ತುಗಳ ಉಳಿತಾಯವಾಗುತ್ತದೆ. ಗುರಿ ಇಟ್ಟುಕೊಂಡು ಯಾವುದೇ ಕೆಲಸವನ್ನು ಹಠ ಹಿಡಿದು ಸಾಧಿಸಿದವರು ಕುರುಂಂಜಿಯವರು. ಅವರ ಒಡನಾಟ ಬಹಳ ಹೆಮ್ಮೆಯ ಸಂಗತಿ. ಎಲ್ಲ ತರದ ಜನರ ಜೊತೆ ಬೆರೆಯುವ ಗುಣ ಕುರುಂಜಿಯವರಲ್ಲಿತ್ತು.” ಎಂದು ಹೇಳಿದರು
.

ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಕೆ.ವಿ.ಜಿ ಸುಳ್ಯ ಹಬ್ಬ ಆಚರಣೆ ಸಮಿತಿಯ ಪದಾಧಿಕಾರಿಗಳು ಮತ್ತು ಕೆವಿಜಿ ಸಂಸ್ಮರಣೆ ಕಾರ್ಯಕ್ರಮದ ನಿರ್ದೇಶಕರಾಗಿರುವ ರೋಟೇರಿಯನ್ ಪ್ರಭಾಕರನ್ ನಾಯರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. 10ನೇ ತರಗತಿ ವಿದ್ಯಾರ್ಥಿನಿಗಳಾಗಿರುವ ಶ್ರೀಶ ಮತ್ತು ಅಶ್ವತಿ ಹಾಗೂ 9ನೇ ತರಗತಿ ವಿದ್ಯಾರ್ಥಿನಿ ಚಾರಿತ್ರ್ಯ ಇವರು ಪ್ರಾರ್ಥಿಸಿದ ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಯಲಕ್ಷ್ಮಿ ದಾಮ್ಲೆ ಪ್ರಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು. ಶಾಲಾ ಶಿಕ್ಷಕಿ ಶ್ರೀಮತಿ ಸವಿತಾ ಎಂ ಇವರು ವಂದಿಸಿದರು. ಶಿಕ್ಷಕ ದೇವಿಪ್ರಸಾದ ಜಿ. ಸಿ ಕಾಯರ್ತೋಡಿ ಇವರು ನಿರೂಪಿಸಿದರು.