ಯಾವುದೇ ಅಭಿವೃದ್ಧಿ ಆಗದಿದ್ದರೂ ಅಂಬೇಡ್ಕರ್ ಭವನ ಮಾಡಿ ಮುಗಿಸೋಣ

0

ಮೀಸಲು‌ ಕ್ಷೇತ್ರದಲ್ಲೇ ಆಗದಿದ್ದರೆ ಇನ್ನೆಲ್ಲಿ ಮಾಡೋದು – ಎಲ್ಲಾ ಇಲಾಖೆಯವರೂ ಸಹಕಾರ‌ ನೀಡಿ : ಕೆ.ಡಿ.ಪಿ. ಸಭೆಯಲ್ಲಿ ಶಾಸಕಿ‌ ಭಾಗೀರಥಿ ಮುರುಳ್ಯ

ಸುಳ್ಯದ ಅಂಬೇಡ್ಕರ್ ಭವನ ಕಾಮಗಾರಿ ಈ ಬಾರಿ ಪೂರ್ಣ ಆಗಲೇಬೇಕು. ಯಾವುದೇ ಅಭಿವೃದ್ಧಿ ಕೆಲಸ ಆಗದಿದ್ದರೂ ಅಂಬೇಡ್ಕರ್ ‌ಭವನ ಕಾಮಗಾರಿ ಮಾಡಿ ಮುಗಿಸೋಣ ಎಂದು ಶಾಸಕಿ ಭಾಗೀರಥಿ ಮುರುಳ್ಯ ‌ಹೇಳಿದರು.

ಸುಳ್ಯ ತಾಲೂಕು ಪಂಚಾಯತ್ ತ್ರೈಮಾಸಿಕ ಸಭೆಯಲ್ಲಿ ಅವರು ಈ ಕುರಿತು ಮಾತನಾಡಿದರು.

ಅಂಬೇಡ್ಕರ್ ಭವನ ಕಾಮಗಾರಿ ಕುರಿತು ವಿವರ ಪಡೆದ ಶಾಸಕರು, ಈಗಿನ ಎಸ್.ಆರ್. ರೇಟ್ ಪ್ರಕಾರ ಅಂಬೇಡ್ಕರ್ ಭವನ ಪೂರ್ತಿಗೊಳಿಸಲು ಎಷ್ಟು ಅನುದಾನ ಬೇಕಾಗಬಹುದೆಂಬ ಸ್ಪಷ್ಟ ಚಿತ್ರಣ ಕೊಡಿ ಎಂದು ಸಮಾಜಕಲ್ಯಾಣ ಧಿಕಾರಿಗಳಿಗೆ ಸೂಚನೆ ನೀಡಿದರು. 5 ಕೋಟಿ 10 ಲಕ್ಷದಲ್ಲಿ 2 ಕೋಟಿಯ ಕೆಲಸ ಆಗಿದೆ. ಉಳಿಕೆ ಅನುದಾನ ಬೇಕಾಗಿದೆ ಎಂದು ಸಮಾಜಕಲ್ಯಾಣ ಧಿಕಾರಿ ಉತ್ತರಿಸಿದರಲ್ಲದೆ, ಈ ಹಿಂದೆ ನಿರ್ಮಿತಿ ಕೇಂದ್ರಕ್ಕೆ ಕೆಲಸ ವಹಿಸಲಾಗಿತ್ತು. ಈಗ ಲೋಕೋಪಯೋಗಿ ಇಲಾಖೆಗೆ ನೀಡಲಾಗಿದೆ ಎಂದು ಅವರು‌ ಮಾಹಿತಿ ನೀಡಿದರು. ಈಗ ನಮಗೆ ಅದರ ಸಂಪೂರ್ಣ ವರದಿ ನೀಡಬೇಕು. ಸುಳ್ಯ ಮೀಸಲು ಕ್ಷೇತ್ರ. ಮೀಸಲು ಕ್ಷೇತ್ರದಲ್ಲೇ ಅಂಬೇಡ್ಕರ್ ಭವನ ಆಗದಿದ್ದರೆ ಇನ್ನೆಲ್ಲಿ ಆಗುವುದು. ನಾವು ಹಾಸಿಗೆ ಇದ್ದಷ್ಟೆ ಕಾಲು ಚಾಚಬೇಕೆ ಹೊರತು, ಹೆಚ್ಚಿಗೆ ಚಾಚಿದ್ರೆ ಹೀಗೆ ಆಗುತ್ತದೆ. ಆದ್ದರಿಂದ ನಮಗೆ ಆ ಭವನ ಈ ಬಾರಿ ಪೂರ್ತಿ ಆಗಬೇಕು. ಯಾವುದೇ ಅಭಿವೃದ್ಧಿ ಆಗದಿದ್ದರೂ ಅಂಬೇಡ್ಕರ್ ಭವನ ಮಾಡಿ‌ ಮುಗಿಸೋಣ. ಎಲ್ಲಾ ಇಲಾಖೆಯವರು ಕೂಡಾ ನಮಗೆ ಸಹಕಾರ‌ ನೀಡಬೇಕು. ಮುಂದೆ ಈ ಕುರಿತು ಕುಂದು ಕೊರತೆ ಸಭೆ, ತಾಲೂಕು ಪಂಚಾಯತ್ ಸಭೆಗಳಲ್ಲಿ ವಿಷಯ ಪ್ರಸ್ತಾಪ ಆಗಲು ಅವಕಾಶ ನೀಡೋದು ಬೇಡ. ಕಾಮಗಾರಿ ಮುಗಿಸಿ, ಲೋಕಾರ್ಪಣೆ ಗೊಳಿಸೋಣ ಎಂದು ಸಭೆಯಲ್ಲಿ ‌ಹೇಳಿದರು.

ಅಡಿಕೆ ಎಲೆ ಹಳದಿ ರೋಗ‌ ಹಾಗು‌ ಎಲೆ ಚುಕ್ಕೆ ರೋಗ ತಾಲೂಕಿನಲ್ಲಿ ಎಷ್ಟು ವ್ಯಾಪಿಸಿದೆ ಎಂದು ಶಾಸಕರು‌ ತೋಟಗಾರಿಕಾ ಅಧಿಕಾರಿಯನ್ನು ಪ್ರಶ್ನಿಸಿದಾಗ, ತಾಲೂಕಿನ 10 ಗ್ರಾಮದಲ್ಲಿ ಅಡಿಕೆ ಎಲೆ ರೋಗ ಇದೆ. ಎಲೆ ಚುಕ್ಕೆ ರೋಗ ಎಲ್ಲ ಕಡೆಯೂ ಇದೆ ಎಂದು ಹೇಳಿದರು. “ಈ ಕುರಿತು ನನಗೆ ವರದಿ‌ ನೀಡಿ. ಅಡಿಕೆ ಎಲೆ ರೋಗ, ಎಲೆ ಚುಕ್ಕೆ ರೋಗಕ್ಕೆ ಸರಕಾರದ ಕಡೆಯಿಂದಲೇ ಸಾಮೂಹಿಕವಾಗಿ ಔಷಧ ಸಿಂಪಡಣೆ ಮಾಡಿದರೆ ಆಗಬಹುದಲ್ಲವೇ” ಎಂದು‌ ಶಾಸಕರು ಹೇಳಿದಾಗ, “ಅಡಿಕೆ ಎಲೆ ರೋಗಕ್ಕೆ ಔಷಧ ಇಲ್ಲ. ಪರ್ಯಾಯ ಬೆಳೆ ಬೆಳೆಯಲು ಪ್ರೋತ್ಸಾಹ ನೀಡಲಾಗುತ್ತಿದೆ. ಎಲೆ‌ಚುಕ್ಕೆ‌ರೋಗಕ್ಕೆ ಔಷಧ ವಿತರಣೆ ನಡೆಯುತ್ತಿದೆ”. ಎಂದು ‌ತೋಟಗಾರಿಕಾ‌ ಅಧಿಕಾರಿ‌ ಹೇಳಿದರು. ಎಲ್ಲರಿಗೂ ಔಷಧ ಸಿಂಪಡಣೆ ಸಾಧ್ಯವಾಗೋದಿಲ್ಲ. ಉಳ್ಳವರು ಔಷಧ ಸಿಂಪಡಣೆ ಮಾಡ್ತಾರೆ, ಬಡವರು ಏನು ಮಾಡೋದು. ಅದಕ್ಕಾಗಿ ಸಾಮೂಹಿಕ ಔಷಧ ಸಿಂಪಡಣೆ ಅಭಿಯಾನ ಮಾಡೋಣ ಆ ಮೂಲಕ ರೋಗ ತಡೆಗಟ್ಟಬೇಕು ಎಂದು ಹೇಳಿದರು.

ಅಡಿಕೆ ಎಲೆ‌ ಹಳದಿ‌ ರೋಗ ವಿಚಾರವಾಗಿ ಅಧಿವೇಶನದಲ್ಲಿ 3 ಬಾರಿ ಪ್ರಶ್ನೆ ಕೇಳಿದೆ. ಉತ್ತರ ಬರುತ್ತಿಲ್ಲ. ಈ‌ಕುರಿತು ತಾರ್ಕಿಕ ಉತ್ತರ ಸಿಗಬೇಕೆನ್ನುವ ನಿಟ್ಟಿನಲ್ಲಿ ನನಗೆ ಮತ್ತೊಮ್ಮೆ ವರದಿ ನೀಡಿ ಅಧಿವೇಶನದಲ್ಲಿ ಮಂಡಿಸುವೆ ಎಂದು‌ ಹೇಳಿದರು.