ಕೆ.ವಿ.ಜಿ. ಸುಳ್ಯ ಹಬ್ಬದಲ್ಲಿ ಕೆ.ವಿ.ಜಿ. ಸಂಸ್ಮರಣೆ

0

ಡಾ.ರಘುರಾಮ ಮಾಣಿಬೆಟ್ಟು, ಶಂಭಯ್ಯ‌ ಕೊಡಪಾಲರಿಗೆ ಕೆ.ವಿ.ಜಿ. ಸಾಧನಾಶ್ರೀ ಪ್ರಶಸ್ತಿ ಪ್ರದಾನ

ಡಾ.ಕೆ.ವಿ.ಜಿ.ಯವರು ಸಮಾಜಕ್ಕೆ ನೀಡಿದ ಕೊಡುಗೆ ಅನನ್ಯ : ಎಂ.ಬಿ.ಪುರಾಣಿಕ್

“ಕುಗ್ರಾಮವಾದ ಸುಳ್ಯದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಹುಟ್ಟು ಹಾಕುವ ಮೂಲಕ ಸಮಾಜಕ್ಕೆ ಅವರು‌ ನೀಡಿದ ಕೊಡುಗೆ ಅನನ್ಯವಾದುದು. ಅವರೊಬ್ಬ ಶ್ರೇಷ್ಠ ಸಾಧಕ. ಅವರ ಜೀವನ ನಮಗೆ ಮೇಲ್ಪಂಕ್ತಿ” ಎಂದು ಮಂಗಳೂರು ಶಾರದಾ ವಿದ್ಯಾಲಯ ಸಮೂಹ ಸಂಸ್ಥೆಗಳ ಅಧ್ಯಕ್ಷ ಎಂ.ಬಿ. ಪುರಾಣಿಕ್ ಹೇಳಿದರು.

ಸುಳ್ಯ ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ ಕೆ.ವಿ.ಜಿ. ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ಆಧುನಿಕ ಸುಳ್ಯದ ನಿರ್ಮಾತೃ ಡಾ.ಕುರುಂಜಿ ವೆಂಕಟ್ರಮಣ ಗೌಡರ 95 ನೇ ಜಯಂತ್ಯೋತ್ಸವ – ಕೆ.ವಿ.ಜಿ. ಸಂಸ್ಮರಣೆ ಹಾಗು ಕೆ.ವಿ.ಜಿ. ಸಾಧನಾಶ್ರೀ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

ಮುಖ್ಯ ಅತಿಥಿಯಾಗಿದ್ದ ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ, “ಸುಳ್ಯ ಎಂದು ಗುರುತಿಸುವುದೇ ಡಾ.‌ಕುರುಂಜಿ ವೆಂಕಟ್ರಮಣ ಗೌಡರಿಂದ. ಅವರ ಕೊಡುಗೆ ಶ್ರೇಷ್ಠ ವಾದುದು” ಎಂದು ಹೇಳಿದರು.

ಕೆ.ವಿ.ಜಿ. ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷ ಡಾ.ಕೆ.ವಿ.ಚಿದಾನಂದ ಅಧ್ಯಕ್ಷತೆ ವಹಿಸಿ, ತಂದೆಯವರು ಸ್ಥಾಪಿಸಿದ ವಿದ್ಯಾಸಂಸ್ಥೆಗಳಲ್ಲಿ ಇಂದು 6 ರಿಂದ 7 ಸಾವಿರ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಇಲ್ಲಿ ಓದಿದವರು ಪ್ರಪಂಚದಾದ್ಯಂತ ಕೆಲಸ ಮಾಡುತಿದ್ದಾರೆ. ನಮ್ಮ ತಂದೆಯವರು ಹಾಕಿ ಕೊಟ್ಟ ದಾರಿಯಲ್ಲಿ ನಾವು ನಡೆಯುತ್ತೇವೆ. ಅವರ ಮಾಡುತಿದ್ದ ಎಲ್ಲ ಕಾರ್ಯಗಳನ್ನು ಮುಂದುವರಿಸುತಿದ್ದೇವೆ ಎಂದ ಅವರು ಈ ಬಾರೀ ವಿಶೇಷವಾಗಿ ತಾಲೂಕಿನ 26 ಶಾಲೆಗಳಲ್ಲಿ ಡಾ. ಕುರುಂಜಿ ಯವರ ಸಾಧನೆಯನ್ನು ತಿಳಿಸುವ ಕೆಲಸ ಆಗಿದೆ. ಇದು ಮುಂದುವರಿಯಲಿ ಎಂದು ಹೇಳಿದರು.

ಕೆ.ವಿ.ಜಿ. ಸುಳ್ಯ ಹಬ್ಬ ಸಮಿತಿ ಕೋಶಾಧಿಕಾರಿ ಜನಾರ್ದನ ನಾಯ್ಕ್ ಕೇರ್ಪಳ ವೇದಿಕೆಯಲ್ಲಿ ಇದ್ದರು.

ಕೆ.ವಿ.ಜಿ. ಸಾಧನಾಶ್ರೀ ಪ್ರಶಸ್ತಿ : ಸಮಾರಂಭದಲ್ಲಿ ಖ್ಯಾತ ವೈದ್ಯರಾದ ಡಾ.ರಘುರಾಮ ಮಾಣಿಬೆಟ್ಟು ಹಾಗೂ ಹಿರಿಯ ವಿಜ್ಞಾನಿ ಶಂಭಯ್ಯ ಕೊಡಪಾಲರನ್ನು ಕೆ.ವಿ.ಜಿ. ಸಾಧನಾಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.
2023 ನೇ ಸಾಲಿನ ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ.ಕೆ.ಟಿ.ವಿಶ್ವನಾಥ ರನ್ನು ಸನ್ಮಾನಿಸಲಾಯಿತು.

ಮನೆ ನಿರ್ಮಾಣಕ್ಕೆ ಸಹಾಯ : ಕೆ.ವಿ.ಜಿ. ಸುಳ್ಯ ಹಬ್ಬ ಸಮಾಜ ಸೇವಾ ಸಂಘದಿಂದ 1 ಲಕ್ಷ ಸಹಾಯಧನ ನೀಡಿ ಮನೆ ಕೆಲಸ ಪೂರ್ಣಗೊಳಿಸಿದ ಜಯನಗರ ಚೆಂಡೆಮೂಲೆಯ ಸರೋಜ ದಂಪತಿಗಳಿಗೆ ಚೆಕ್ ಹಸ್ತಾಂತರ ಮಾಡಲಾಯಿತು. ಕೆ.ವಿ.ಜಿ. ಸಮಿತಿ ಸಂಚಾಲಕ ಡಾ.ಎನ್.ಎ. ಜ್ಞಾನೇಶ್ ಕಾರ್ಯಕ್ರಮ ನಿರ್ವಹಿಸಿದರು. ನ.ಪಂ. ಸದಸ್ಯ ಬಾಲಕೃಷ್ಣ ಭಟ್ ವೇದಿಕೆಯಲ್ಲಿದ್ದರು.

ನೂತನ ಸದಸ್ಯರಿಗೆ ಪ್ರಮಾಣ ಪತ್ರ ಹಸ್ತಾಂತರ ನಡೆಯಿತು. ಸದಸ್ಯತ್ವ ಅಭಿಯಾನದ ಸಂಚಾಲಕ ಆನಂದ ಖಂಡಿಗ ಕಾರ್ಯಕ್ರಮ ನಿರ್ವಹಿಸಿದರು.

ಶ್ರೀಮತಿ ಪೂರ್ಣಿಮಾ ಮಡಪ್ಪಾಡಿ ಪ್ರಾರ್ಥಿಸಿದರು.
ಕೆ.ವಿ.ಜಿ. ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಅಧ್ಯಕ್ಷ ಚಂದ್ರಶೇಖರ ಪೇರಾಲು ಸ್ವಾಗತಿಸಿದರು. ಶ್ರೀಮತಿ ಮಧುರಾ ಎಂ.ಆರ್. ಹಾಗೂ ವೀರಪ್ಪ ಗೌಡ ಕಣ್ಕಲ್ ಪ್ರಶಸ್ತಿ ಪುರಸ್ಕೃತರನ್ನು ಪರಿಚಯಿಸಿದರು. ಸಮಿತಿ ಪ್ರಧಾನ ಕಾರ್ಯದರ್ಶಿ ದಿನೇಶ್ ಅಂಬೆಕಲ್ಲು ವಂದಿಸಿದರು. ಶ್ರೀಮತಿ ಚಂದ್ರಮತಿ ಕಾರ್ಯಕ್ರಮ ನಿರೂಪಿಸಿದರು.