ಹರಿಹರ,ಕೊಲ್ಲಮೊಗ್ರು ಅವಳಿ ಗ್ರಾ.ಪಂ ವ್ಯಾಪ್ತಿಯಲ್ಲಿ ಪತ್ರಕರ್ತರ ಗ್ರಾಮವಾಸ್ತವ್ಯ

0

ಎತ್ತ ನೋಡಿದರೂ ಬರೀ ಕಾಡು, ಕಾಡಿನೊಳಗೆ ಬದುಕು ಕಟ್ಟಿಕೊಂಡವರದ್ದು ಹಲವು ಪಾಡು. ಒಂದೊಮ್ಮೆ ಕುಗ್ರಾಮವೆಂಬ ಹಣೆ ಪಟ್ಟಿಕೊಂಡ ಕೊಲ್ಲಮೊಗ್ರು, ಹರಿಹರ ಗ್ರಾ.ಪಂ ವ್ಯಾಪ್ತಿಯ ಹಳ್ಳಿಗಳಲ್ಲಿ (ಕಂದಾಯ ಗ್ರಾಮ) ಅಭಿವೃದ್ದಿಯ ಗೆರೆ ಮೂಡಿ ಕುಗ್ರಾಮ ಪಟ್ಟದಿಂದ ಹಳ್ಳಿಗಳು ಕಳಚಿಕೊಂಡಿದೆ. ಈ ಎರಡು ಪಂಚಾಯತ್ ವ್ಯಾಪ್ತಿ ಅಭಿವೃದ್ದಿ ಕಂಡರೂ ಇನ್ನೂ ನಿವಾರಣೆಯಾಗದೆ, ಪರಿಹಾರ ಕಾಣದೆ ಹಲವು ಸಮಸ್ಯೆಗಳು ಬಾಕುಳಿದಿವೆ.

ಕಾನೂನು, ತೊಡಕು, ತಾಂತ್ರಿಕ ಸಮಸ್ಯೆ ಇತ್ಯಾದಿಗಳಿಂದ ಹತ್ತು ಹಲವು ಪರಿಹಾರಗಳು ಇಂದಿಗೂ ಗ್ರಾಮಸ್ಥರಿಗೆ ಮರಿಚಿಕೆಯಾಗಿದೆ. ಕೃಷಿಗೆ ವಿಧವಿಧದ ರೋಗ, ಕಾಡುಪ್ರಾಣಿಗಳ ಉಪಟಳ, ಪರಿಹಾರ,ಅರಣ್ಯ ತೊಡಕಿನಿಂದ ಹಕ್ಕುಪತ್ರ ವಂಚಿತ, ಸರಕಾರಿ ಶಾಲೆಗಳಲ್ಲಿ ಸೌಕರ್ಯ ಕೊರತೆ, ಆರೋಗ್ಯ, ಪಶುಸಂಗೋಪನೆ, ವಿದ್ಯುತ್ , ನೆಟ್ ವರ್ಕ್ ಸಮಸ್ಯೆ ಹೀಗೆ ಸರಕಾರ ಮಟ್ಟದಲ್ಲಿ ಪರಿಹಾರ ಕಾಣಬೇಕಾದ ಹಲವು ಸಮಸ್ಯೆಗಳಿವೆ. ಬಗೆದಷ್ಟು ಒಂದಲ್ಲ ಒಂದು ಸಮಸ್ಯೆಗಳು ಈ ಹಳ್ಳಿಯ ಜನರನ್ನು ಕಾಡುತ್ತಲೆ ಇದೆ.

ತಾಲೂಕು ಕೇಂದ್ರ ಸುಳ್ಯದಿಂದ 40 ಕಿ.ಮೀ. ದೂರದಲ್ಲಿರುವ ಕಲ್ಮಕಾರು, ಕೊಲ್ಲಮೊಗ್ರು ಹರಿಹರ, ಬಾಳುಗೋಡು,ಉಪ್ಪುಕಳ ಈ ಭಾಗದ ತುತ್ತತುದಿಯ ನಿವಾಸಿಗಳ ಸಮಸ್ಯೆಗಳನ್ನು ಸರಕಾರ ಮಟ್ಟಕ್ಕೆ ನೇರ ತರಬೇಕು ಎನ್ನುವ ಪ್ರಯತ್ನದ ಫಲವಾಗಿ ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ ,ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಸುಬ್ರಹ್ಮಣ್ಯ ಪ್ರಸ್ ಕ್ಲಬ್ ಇದರ ಸಂಯುಕ್ತಅಶ್ರಯದಲ್ಲಿ ಜಿಲ್ಲಾಡಳಿತ,ತಾಲೂಕು ಆಡಳಿತ, ಸ್ಥಳಿಯಾಡಳಿತ,ಎರಡು ಪಂಚಾಯತು ವ್ಯಾಪ್ತಿಯ ಊರ ನಾಗರಿಕರ ಸಹಕಾರದಲ್ಲಿ ಅವಳಿ ಪಂಚಾಯತ್ ವ್ಯಾಪ್ತಿಯ ಆಯ್ದ ಒಂದು ಕಡೆ ಪತ್ರಕರ್ತರ, ಪ್ರಮುಖ ಇಲಾಖೆಯ ಮಂತ್ರಿಗಳ, ಶಾಸಕರ , ಅಧಿಕಾರಿಗಳ ರಾತ್ರಿ ಗ್ರಾಮವಾಸ್ತವ್ಯ ನಡೆಸುವ ಬಗ್ಗೆ ಚಿಂತನೆನಡೆಸಲಾಗಿದೆ.

ಈ ಭಾಗದ ಸಮಸ್ಯೆಗಳಿಗೆ ಧ್ವನಿಯಾಗಿ, ಸರಕಾರಕ್ಕೆ ತಲುಪಿಸುವ ಪ್ರಯತ್ನ ಇದಾಗಿದ್ದು, ಅದರಂತೆ ಎರಡು ಪಂಚಾಯತ್ ವ್ಯಾಪ್ತಿಯ ಪ್ರಮುಖರ ಪೂರ್ವಭಾವಿ ಸಭೆಯನ್ನು ಜ. 21ರಂದು( ರವಿವಾರ) ಪೂರ್ವಾಹ್ನ 11ಕ್ಕೆ ಕೊಲ್ಲಮೊಗ್ರು ಮಯೂರ ಕಲಾ ಮಂದಿರದಲ್ಲಿ ಕರೆಯಲಾಗಿದೆ.

ಮಲೆನಾಡಿನ ತಪ್ಪಲಿನ ಜ್ವಲಂತ ಸಮಸ್ಯೆಗಳಿಗೆ ಬೂಸ್ಟ್ ನೀಡುವ ಪ್ರಯತ್ನದ ಪಲವಾಗಿ ನಡೆಯುವ ಮಹತ್ವದ ಗ್ರಾಮವಾಸ್ತವ್ಯದ ಪ್ರಥಮ ಹಂತದ ಪೂರ್ವಭಾವಿ ಸಭೆಗೆ ಎರಡು ಗ್ರಾಮಗಳ ಪ್ರಮುಖರನ್ನು ಆಹ್ವಾನಿಸುತ್ತಿದ್ದೇವೆ.

ಸಭೆಯಲ್ಲಿ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘ, ತಾಲೂಕು ಪತ್ರಕರ್ತರ ಸಂಘದ ಪ್ರತಿನಿಧಿಗಳು ಉಪಸ್ಥಿತರಿರುವರು. ಎರಡು ಗ್ರಾಮಗಳ ಪ್ರಮುಖರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿರುವಂತೆ ಈ ಮೂಲಕ ಮನವಿ ಮಾಡಿಕೊಳ್ಳುತ್ತಿದ್ದೇವೆ.

ಸಂಪರ್ಕಕ್ಕಾಗಿ
8431927596
9449792508
9481385886
9448924432
9448548574
9902896424