ಮಿತ್ತಡ್ಕ: ಪಡಿತರ ವಿತರಣ ಕೇಂದ್ರ ಪ್ರಾರಂಭ

0

ಮಿತ್ತಡ್ಕ ನ್ಯಾಯಬೆಲೆ ಅಂಗಡಿಯಲ್ಲಿ
ಬಯೋಮೆಟ್ರಿಕ್ ಸೇವೆಯನ್ನು ಜ.18 ರಿಂದ ಪ್ರಾರಂಭಿಸಲಾಯಿತು.

ಈ ಹಿಂದೆ ಸ್ಥಳೀಯ ಫಲಾನುಭವಿಗಳ ಸಮಸ್ಯೆಯನ್ನು ಉಸ್ತುವಾರಿ ಸಚಿವರ ಗಮನಕ್ಕೆ ತಂದಾಗ ಸಚಿವ ದಿನೇಶ್ ಗುಂಡೂರಾವ್‌ರವರು ಆಹಾರ , ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕರಿಗೆ ಬಯೋಮೆಟ್ರಿಕ್ ಅಳವಡಿಸುವಂತೆ ಆದೇಶಿಸಿದ್ದರು.

ಈ ಹಿನ್ನಲೆಯಲ್ಲಿ ಮರ್ಕಂಜ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿ ಆದೇಶವನ್ನು ಪಾಲಿಸಿ
ಇದೀಗ ಬಯೋಮೆಟ್ರಿಕ್ ಅಳವಡಿಸಿ ಸ್ಥಳೀಯ ಜನರಿಗೆ ಆಗುತ್ತಿದ್ದ ಸಮಸ್ಯೆಯನ್ನು ಬಗೆಹರಿಸಿದೆ.

ಗ್ರಾಮದಲ್ಲಿ ಸುಮಾರು ೯೦೦ಕ್ಕಿಂತಲೂ ಹೆಚ್ಚು ಕುಟುಂಬಗಳಿದ್ದು ಗೋಳಿಯಡ್ಕದಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿರುವ ನ್ಯಾಯಬೆಲೆ ಅಂಗಡಿಯಿಂದ ಪಡಿತರ ಪಡೆಯುತ್ತಿದ್ದರು.
ಆದರೆ ಮಿತ್ತಡ್ಕ ಎಂಬಲ್ಲಿ ಇದೇ ಸಹಕಾರ ಸಂಘದ ನ್ಯಾಯಬೆಲೆ ಅಂಗಡಿ ಇದ್ದರೂ ಬಯೋಮೆಟ್ರಿಕ್ ವ್ಯವಸ್ಥೆ ಇಲ್ಲದಿರುವುದರಿಂದ ಸ್ಥಳೀಯ ಹೈದಂಗೂರು, ಬಳ್ಳಕ್ಕಾನ , ಕಟ್ಟಕೋಡಿ , ಪೊಯ್ಯೆ ಗುಂಡಿ, ಚೀಮಾಡು ಈ ಭಾಗದ ಪಡಿತರ ಫಲಾನುಭವಿಗಳು ದೂರದಲ್ಲಿರುವ ಗೋಳಿಯಡ್ಕಕ್ಕೆ ತೆರಳಿ ತಂಬ್ ಹಾಕಿ ಪಡಿತರ ತರುವುದು ಅನಿವಾರ್ಯವಾಗಿತ್ತು.
ಈ ವಿಚಾರವು ಮರ್ಕಂಜ ಗ್ರಾಮ ಸಭೆಯಲ್ಲಿ ಹಲವು ಬಾರಿ ಚರ್ಚೆಗೆ ಗ್ರಾಸವಾಗಿತ್ತು. ಗ್ರಾಮ ಪಂಚಾಯಿತಿ ವತಿಯಿಂದ ಹಲವು ಬಾರಿ ಪತ್ರದ ಮೂಲಕ ಮನವಿ ಮಾಡಿಕೊಂಡಿದ್ದರು ಪ್ರಯೋಜನ ಕಂಡುಕೊಂಡಿರಲಿಲ್ಲ. ಹೀಗಾಗಿ
ಜನರಿಗಾಗುವ ಕಷ್ಟದ ಬಗ್ಗೆ ಸ್ಥಳೀಯರಾದ ಅಂಬೇಡ್ಕರ್ ರಕ್ಷಣಾ ವೇದಿಕೆಯ ಪದಾಧಿಕಾರಿಗಳು , ಸ್ಥಳೀಯ ನಾಗರಿಕರು ಉಸ್ತುವಾರಿ ಸಚಿವರಿಗೆ ವಿಷಯ ತಿಳಿಸಿ, ಜನರ ಕಷ್ಟ ನಿವಾರಿಸಬೇಕೆಂದು ಮನವಿ ಮಾಡಿದ್ದರು.
ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್‌ರವರು ಆಹಾರ , ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕರಿಗೆ ಆದೇಶಿಸಿದ್ದರು. ಈ ಹಿನ್ನಲೆಯಲ್ಲಿ ಬಯೋಮೆಟ್ರಿಕ್ ಅಳವಡಿಸಿದ್ದು, ಇದರಿಂದ ಸ್ಥಳೀಯ ಫಲಾನುಭವಿಗಳಿಗೆ ಪ್ರಯೋಜನವಾಗಿದೆ.