ಎರಡೂ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ ವಿವೇಕಾನಂದ ಲಾ ಕಾಲೇಜ್
ಸುಳ್ಯದ ಕೆ.ವಿ.ಜಿ. ಕಾನೂನು ಮಹಾವಿದ್ಯಾಲಯದ ಆತಿಥ್ಯದಲ್ಲಿ ಕರ್ನಾಟಕ ರಾಜ್ಯ ಕಾನೂನು ಯುನಿವರ್ಸಿಟಿಯ ವತಿಯಿಂದ ಇಂದು ಸುಳ್ಯದಲ್ಲಿ ನಡೆದ ಅಂತರ್ ಕಾಲೇಜು ಮಹಿಳಾ ಮತ್ತು ಪುರುಷರ ಗುಡ್ಡಗಾಡು ಓಟ ಸ್ಪರ್ಧೆಯಲ್ಲಿ ಪುರುಷ ವಿಭಾಗದಲ್ಲಿ ಪುತ್ತೂರು ವಿವೇಕಾನಂದ ಕಾಲೇಜಿನ ವಿಜಯ ಶ್ರೀಹರಿ ಪಿ.ಎಂ. ಹಾಗೂ ಮಹಿಳಾ ವಿಭಾಗದಲ್ಲಿ ಸುಳ್ಯ ಕೆವಿಜಿ ಕಾನೂನು ಕಾಲೇಜಿನ ಲಾವಣ್ಯ ಎನ್. ವೈಯಕ್ತಿಕ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ಪುತ್ತೂರು ವಿವೇಕಾನಂದ ಕಾನೂನು ಮಹಾ ವಿದ್ಯಾಲಯ ಪುರುಷ ಹಾಗೂ ಮಹಿಳಾ ವಿಭಾಗದಲ್ಲಿ ಸಮಗ್ರ ಚಾಂಪಿಯನ್‌ಶಿಪ್ ಪಡೆದುಕೊಂಡಿದೆ.
10 ಕಿ.ಮಿ. ದೂರವನ್ನು 38.44.31 ಸಮಯದಲ್ಲಿ ಕ್ರಮಿಸಿದ ವಿಜಯ ಶ್ರೀಹರಿ ಪ್ರಥಮ ಸ್ಥಾನ ಪಡೆದರೆ, ಲಾವಣ್ಯ 10 ಕಿ.ಮಿ.ದೂರ 51.01.96 ಸಮಯದಲ್ಲಿ ಕ್ರಮಿಸಿ ಮಹಿಳಾ ವಿಭಾಗದಲ್ಲಿ ಚಾಂಪಿಯನ್ ಆದರು.
ಪುರುಷ ವಿಭಾಗದಲ್ಲಿ ತುಮಕೂರು ವಿದ್ಯೋದಯ ಲಾ ಕಾಲೇಜಿನ ಜೀವನ್ ಪಟೇಲ್ ಆರ್.ಕೆ. ದ್ವಿತೀಯ(42.10.39), ಚಿಕ್ಕೋಡಿ ಕೆಎಲ್‌ಇ ಸೊಸೈಟಿ ಕಾಲೇಜಿನ ಹಾಲಪ್ಪ ಎಸ್.ಕಂಠಿಕಾರ್(42.41.53) ತೃತೀಯ ಸ್ಥಾನ ಹಾಗೂ ಪುತ್ತೂರು ವಿವೇಕಾನಂದ ಕಾಲೇಜಿನ ಅಶ್ವಿತ್ ಕುಮಾರ್(43.38.50) ಚತುರ್ಥ ಬಹುಮಾನ ಪಡೆದರು.
ಮಹಿಳಾ ವಿಭಾಗದಲ್ಲಿ ಮಂಗಳೂರು ಎಸ್‌ಡಿಎಂ ಕಾಲೇಜಿನ ಬಿಂದುಶ್ರೀ ಎಸ್(56.14.48) ದ್ವಿತೀಯ, ಪುತ್ತೂರು ವಿವೇಕಾನಂದ ಕಾಲೇಜಿನ ಪ್ರಜ್ಞಾ(56.47.49) ತೃತೀಯ ಹಾಗೂ ವಿವೇಕಾನಂದ ಕಾಲೇಜಿನ ವೃಂದಾ(57.07.01) ಚತುರ್ಥ ಸ್ಥಾನ ಪಡೆದರು.
ಪುತ್ತೂರು ವಿವೇಕಾನಂದ ಕಾಲೇಜು ಪುರುಷ ಹಾಗೂ ಮಹಿಳಾ ವಿಭಾಗದಲ್ಲಿ ಸಮಗ್ರ ಪ್ರಶಸ್ತಿ ಪಡೆದುಕೊಂಡಿದೆ. ಪುರುಷ ವಿಭಾಗದಲ್ಲಿ ಆರ್.ಎಲ್. ಲಾ ಕಾಲೇಜು ದಾವಣಗೆರೆ ದ್ವಿತೀಯ, ಚಿಕ್ಕೋಡಿ ಕೆ.ಎಲ್.ಇ ಸೊಸೈಟಿ ಲಾ ಕಾಲೇಜು ತೃತೀಯ, ಚಿತ್ರದುರ್ಗದ ಸರಸ್ವತಿ ಲಾ ಕಾಲೇಜು ಚತುರ್ಥ, ಸರಕಾರಿ ಕಾನೂನು ಕಾಲೇಜು ಕೋಲಾರ 5 ನೇ ಸ್ಥಾನ ಹಾಗೂ ಕೆವಿಜಿ ಕಾನೂನು ಕಾಲೇಜು 6ನೇ ಸ್ಥಾನ ಪಡೆದುಕೊಂಡಿತು.
ಮಹಿಳಾ ವಿಭಾಗದಲ್ಲಿ ಕೆವಿಜಿ ಕಾನೂನು ಕಾಲೇಜು ದ್ವಿತೀಯ ಸ್ಥಾನ ಪಡೆದು ಕೊಂಡರೆ, ಬೆಂಗಳೂರು ಕ್ರಿಸ್ತ ಜಯಂತಿ ಕಾಲೇಜು ತೃತೀಯ, ಸರಕಾರಿ ಕಾನೂನು ಕಾಲೇಜು ಹಾಸನ, ಚತುರ್ಥ, ರಾಮಯ್ಯ ಲಾ ಕಾಲೇಜು ದಾವಣಗೆರೆ ಪಂಚಮ ಮತ್ತು ಸರಸ್ವತಿ ಲಾ ಕಾಲೇಜು ಷಷ್ಠಮ ಸ್ಥಾನ ಪಡೆದುಕೊಂಡಿತು.
ಗುಡ್ಡಗಾಡು ಓಟ ಸ್ಪರ್ಧೆಯಲ್ಲಿ 26 ಕಾಲೇಜುಗಳಿಂದ 138 ಪುರುಷರು ಹಾಗೂ 89 ಮಹಿಳೆಯರು ಸೇರಿ ಒಟ್ಟು 227 ಮಂದಿ ಸ್ಪರ್ಧಿಗಳು ಭಾಗವಹಿಸಿದ್ದರು. ಪುರುಷರು ಹಾಗೂ ಮಹಿಳೆಯರಿಗೆ ಪ್ರತ್ಯೇಕ ನಡೆದ ಸ್ಪರ್ಧೆ ಚೆನ್ನಕೇಶವ ದೇವಸ್ಥಾನದ ಬಳಿಯಿಂದ ಆರಂಭಗೊಂಡು 10 ಕಿಲೋಮೀಟರ್ ದೂರ ಕ್ರಮಿಸಿ ಎನ್‌ಎಂಸಿ ಮೈದಾನದಲ್ಲಿ ಸಮಾಪನಗೊಂಡಿತು.