ಸಿದ್ಧತೆಗಳು ಆಗಿದ್ದರೂ ಮುಂದೂಡಿಕೆಗೆ ಪೋಷಕರು, ವಿದ್ಯಾರ್ಥಿಗಳ ಅಸಮಾಧಾನ
ಜಿಲ್ಲಾ ಉಸ್ತುವಾರಿ ಸಚಿವರಿದ್ದು, ಶಾಸಕರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಸಲು ನಿರ್ಧಾರ
ಅಜ್ಜಾವರ ಗ್ರಾಮದ ಮೇನಾಲ ಕಿರಿಯ ಪ್ರಾಥಮಿಕ ಶಾಲೆಗೆ ಸರಕಾರದಿಂದ ಮಂಜೂರುಗೊಂಡಿದ್ದ 13.90 ಲಕ್ಷ ರೂ ಗಳಲ್ಲಿ ನಿರ್ಮಾಣಗೊಂಡಿದ್ದ ಶಾಲಾ ಕೊಠಡಿ ಉದ್ಘಾಟನೆಗೆ ಜ.27ರಂದು ದಿನ ನಿಗದಿ ಮಾಡಲಾಗಿದ್ದು ಇದಕ್ಕಾಗಿ ಎಲ್ಲ ಸಿದ್ಧತೆಗಳನ್ನು ಮಾಡಲಾಗಿದ್ದು, ಶಾಸಕರ ಸೂಚನೆ ಹಿನ್ನಲೆಯಲ್ಲಿ ಉದ್ಘಾಟನೆ ಕಾರ್ಯಕ್ರಮ ಮುಂದೂಡಲಾಗಿದೆ. ಇದರಿಂದಾಗಿ ಪೋಷಕರು, ವಿದ್ಯಾರ್ಥಿಗಳು ತೀವ್ರ ಅಸಮಾಧಾನಗೊಂಡಿದ್ದಾರೆ.
2022-23 ನೇ ಸಾಲಿನ ರಾಜ್ಯ ವಲಯ ಮುಂದುವರಿದ ಯೋಜನೆಯಡಿ ಸರಕಾರಿ ಪ್ರಾಥಮಿಕ/ಪ್ರೌಢಶಾಲೆಗಳ ಕೊಠಡಿ ನಿರ್ಮಾಣ ಕಾಮಗಾರಿಗೆ ಮೇನಾಲ ಶಾಲೆಗೆ 13.90 ಸಾವಿರ ಮಂಜೂರಾಗಿ ಕಟ್ಟಡ ನಿರ್ಮಾಣ ಆಗಿದೆ. ಅದರ ಉದ್ಘಾಟನೆಗೆ ಜ.27ರಂದು ದಿನ ನಿಗದಿ ಮಾಡಲಾಗಿದ್ದು ಶಾಸಕಿ ಭಾಗೀರಥಿ ಮುರುಳ್ಯರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಬೇಕಿತ್ತು. ಶಾಸಕರು ಕೂಡಾ ಬರಲು ಒಪ್ಪಿಕೊಂಡಿದ್ದರೆನ್ನಲಾಗಿದೆ. ಕಾರ್ಯಕ್ರಮ ನಡೆಸಲು ಶಾಲೆಯಲ್ಲಿ ಎಲ್ಲ ಸಿದ್ಧತೆ ಮಾಡಲಾಗಿದೆ. ತಳಿರು ತೋರಣಗಳಿಂದ ಶಾಲೆಯನ್ನು ಸಿಂಗಾರ ಮಾಡಲಾಗಿತ್ತು. ಅಡುಗೆ ವ್ಯವಸ್ಥೆ, ಶಾಮಿಯಾನ, ಬ್ಯಾನರ್ ಹೀಗೆ ಎಲ್ಲ ವ್ಯವಸ್ಥೆಗಳು ಆಗಿದೆ.
ಆದರೆ ಜ.26ರಂದು ಸಂಜೆ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಈ.ರಮೇಶರು ಶಾಲಾ ಮುಖ್ಯೋಪಾಧ್ಯಾಯಿನಿ ಕನಕರಿಗೆ ದೂರವಾಣಿ ಮೂಲಕ ನಾಳೆ ದಿನ ಶಾಸಕರು ಕಾರ್ಯಕ್ರಮಕ್ಕೆ ಬರಲು ಆಗುವುದಿಲ್ಲವಂತೆ. ಶಾಲಾ ಕೊಠಡಿ ಉದ್ಘಾಟನೆಯನ್ನು ಮುಂದೂಡಿ, ಅವರು ಬಂದ ಬಳಿಕ ಉದ್ಘಾಟನೆ ಮಾಡುತ್ತಾರೆ. ನೀವು ಈಗ ಉಳಿದ ಕಾರ್ಯಕ್ರಮ ಮಾಡುವಂತೆ ಹೇಳಿದರೆಂದೂ ತಿಳಿದುಬಂದಿದೆ.
ಶಿಕ್ಷಣಾಧಿಕಾರಿಗಳು ಹೇಳಿದ ವಿಚಾರವನ್ನು ಮುಖ್ಯಶಿಕ್ಷಕರು ಎಸ್.ಡಿ.ಎಂ.ಸಿ.ಯವರಿಗೆ ತಿಳಿಸಿದರು. ಬೆಳಗ್ಗೆ ಕಾರ್ಯಕ್ರಮ ಎಲ್ಲ ಸಿದ್ಧತೆಗಳು ಆಗಿರುವಾಗ ಈ ಸಂಜೆ ಈ ರೀತಿ ಹೇಳಿದರೆ ಹೇಗೆ ಎಂದು ಎಸ್.ಡಿ.ಎಂ.ಸಿ.ಯವರು ಅಸಮಾಧಾನಗೊಂಡರು.
ಜ.27ರಂದು ಮುಂಜಾನೆ ಎಸ್.ಡಿ.ಎಂ.ಸಿ. ಅಧ್ಯಕ್ಷ ಶೌಕತ್ ಅಲಿಯವರ ನೇತೃತ್ವದಲ್ಲಿ ಎಸ್.ಡಿ.ಎಂ.ಸಿ.ಯವರ ತುರ್ತು ಸಭೆ ಶಾಲೆಯಲ್ಲಿ ನಡೆಯಿತು. ಶಾಸಕರು ನಾನು ಬರುವುದಿಲ್ಲ. ನೀವು ಮುಂದುವರಿಸಿ ಎಂದು ಹೇಳಿದ್ದರೆ, ಪಂಚಾಯತ್ ಹಾಗೂ ಉಳಿದ ಅತಿಥಿಗಳ ಮೂಲಕ ಕಾರ್ಯಕ್ರಮ ಮಾಡಬಹುದಿತ್ತು. ಆದರೆ ಉದ್ಘಾಟನೆ ಮುಂದೂಡಿ. ನಾನು ಬರುತ್ತೇನೆ ಎಂದು ಅವರು ಹೇಳಿದ್ದರಿಂದ ಅವರ ಸೂಚನೆ ಮೀರುವುದು ಸರಿಯಲ್ಲ. ಪ್ರತಿಭಾ ಪುರಸ್ಕಾರ ಮಾತ್ರ ಮಾಡುವುದೂ ಸರಿಯಲ್ಲ. ಆದ್ದರಿಂದ ಮುಂದೆ ಜಿಲ್ಲಾ ಉಸ್ತುವಾರಿ ಸಚಿವರು ಇದ್ದು ಶಾಸಕರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಮಾಡಲು ಸಮಿತಿ ನಿರ್ಧರಿಸಿತೆಂದೂ ತಿಳಿದು ಬಂದಿದೆ.
ಕಾರ್ಯಕ್ರಮ ಮುಂದೂಡಲಾಗಿರುವ ವಿಚಾರ ಊರಲ್ಲಿ ಹಬ್ಬಿ ಪೋಷಕರು ಹಾಗೂ ವಿದ್ಯಾರ್ಥಿಗಳು ತೀವ್ರ ಅಸಮಾಧಾನಗೊಂಡರು. ಡ್ಯಾನ್ಸ್ ನಲ್ಲಿ ಭಾಗವಹಿಸಲು ಹೊಸ ಹೊಸ ಉಡುಗೆ ಹಾಕಿಕೊಂಡು ಬಂದ ಮಕ್ಕಳಿಗೆ ಕಾರ್ಯಕ್ರಮ ಮುಂದೂಡಲಾಗಿರುವ ವಿಷಯ ತಿಳಿದು ಕೆಲ ಮಕ್ಕಳು ಅಳತೊಡಗಿದರೆ, ಇನ್ನೂ ಕೆಲವರು ಸಿದ್ದಗೊಂಡ ವೇದಿಕೆಯಲ್ಲಿ ಆಟವಾಡುತ್ತಿದ್ದರು.
ಈ ಕುರಿತು ಶಾಸಕಿ ಭಾಗೀರಥಿ ಮುರುಳ್ಯ ರನ್ನು ಸಂಪರ್ಕಿಸಲು ಪ್ರಯತ್ನಿಸಸಲಾಯಿತಾದರೂ ಅವರು ಫೋನ್ ರಿಸೀವ್ ಮಾಡಲಿಲ್ಲ.
ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಇ.ರಮೇಶ್ ರನ್ನು ಸಂಪರ್ಕಿಸಿ ವಿಚಾರಿಸಿದಾಗ, ಶಾಸಕರು ತುರ್ತು ಕಾರ್ಯಕ್ರಮ ಇರುವುದರಿಂದ ನಾಳೆ ಶಾಲಾ ಕಟ್ಟಡ ಉದ್ಘಾಟನೆಗೆ ಬರಲು ಆಗುತಿಲ್ಲ. ಅದೊಂದನ್ನು ಮುಂದೂಡಿ, ಉಳಿದ ಕಾರ್ಯಕ್ರಮ ಮುಂದುವರಿಸಿ ಎಂದು ಸೂಚನೆ ನೀಡಿದ್ದಾರೆ. ಇದನ್ನು ಶಾಲೆಯವರಿಗೆ ತಿಳಿಸಿದ್ದೇನೆ” ಎಂದು ಹೇಳಿದ್ದಾರೆ.
ಶಾಲಾ ಮುಖ್ಯ ಶಿಕ್ಷಕಿ ಕನಕರನ್ನು ಸಂಪರ್ಕಿಸಿ ವಿಚಾರಿಸಿದಾಗ, ಕಾರ್ಯಕ್ರಮ ನಡೆಸಲು ಒಂದೂವರೆ ತಿಂಗಳಿಂದ ಸಿದ್ದತೆಗಳು ಮಾಡಿಕೊಂಡಿದ್ದೇವೆ. ನಿನ್ನೆ ಸಂಜೆ ಬಿ.ಇ.ಒ. ರವರು ಫೋನ್ ಮಾಡಿ ಶಾಸಕರು ನಾಳೆ ಬರಲು ಆಗುವುದಿಲ್ಲವಂತೆ. ಕೊಠಿಡಿ ಉದ್ಘಾಟನೆ ಮುಂದೂಡಿ ಎಂದು ಹೇಳಿದರು. ಎಸ್.ಡಿ.ಎಂ.ಸಿ. ಸಭೆ ಕರೆದು ಚರ್ಚಿಸಿ ಮುಂದೂಡಿದ್ದೇವೆ. ಇದರಿಂದ ಮಕ್ಕಳು, ಪೋಷಕರು ಬೇಸರಗೊಂಡಿದ್ದಾರೆ. ಸುಮಾರು 60 ಸಾವಿರದಷ್ಟು ನಷ್ಟ ಆಗಿರಬಹುದು ಎಂದು ಹೇಳಿದರು.
ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ಶೌಕತ್ ಅಲಿ ಪ್ರತಿಕ್ರಿಯಿಸಿ, ಶಿಕ್ಷಣ ಇಲಾಖೆಯಿಂದ ನಿನ್ನೆ ಸಂಜೆ ಫೋನ್ ಬಂದಿತ್ತು. ಶಾಸಕರು ಅನಿವಾರ್ಯ ಕಾರ್ಯಕ್ರಮ ದಿಂದ ನಾಳೆ ಭಾಗವಹಿಸೋದಿಲ್ಲ. ಉದ್ಘಾಟನೆ ಮುಂದೂಡಿ ಎಂದು ಹೇಳಿದರು. ಆದ್ದರಿಂದ ಮುಂದೂಡಲಾಗಿದೆ. ಸಿದ್ದತೆಗಳು ಎಲ್ಲವೂ ಆಗಿತ್ತು ಎಂದು ಹೇಳಿದರು.
ಶಾಸಕರು ಬರಲು ಆಗುವುದಿಲ್ಲವಾದರೆ ಎರಡು ದಿನದ ಮೊದಲೇ ಹೇಳಬೇಕು. ನಾವು ಕೆಲಸ ಬಿಟ್ಟು ಬಂದಿದ್ದೇವೆ. ಮಕ್ಕಳು ಖುಷಿಯಿಂದ ಬಂದವರು ಈಗ ಅಳುತಿದ್ದಾರೆ. ಈ ರೀತಿ ಯಾರೂ ಮಾಡಬಾರದು ಎಂದು ಮಕ್ಕಳ ಪೋಷಕರು ಅಸಮಾಧಾನ ವ್ಯಕ್ತಪಡಿಸುತ್ತಿರುವುದು ಕಂಡು ಬಂತು.