ಅರಂತೋಡು: ಕೊಡಂಕೇರಿಯಲ್ಲಿ ಸ್ವಾಮಿ ಕೊರಗಜ್ಜ ದೈವ ಹಾಗೂ ಪರಿವಾರ ದೈವಗಳ ನೇಮೋತ್ಸವ

0

ಅರಂತೋಡು ಗ್ರಾಮದ ಕೊಡಂಕೇರಿಯಲ್ಲಿ ವರ್ಷಂಪ್ರತಿ ಜರುಗುವ ಕಾಲಾವಧಿ ಸ್ವಾಮಿ ಕೊರಗಜ್ಜ ದೈವ ಹಾಗೂ ಪರಿವಾರ ದೈವಗಳ ನೇಮೋತ್ಸವವು ಜ.26ರಿಂದ 28ರವರೆಗೆ ವಿಜೃಂಭಣೆಯಿಂದ ಜರುಗಿದ್ದು, ಸ್ವಾಮಿ ಕೊರಗಜ್ಜ ದೈವದ ಸನ್ನಿಧಿಗೆ ದೈವದ ಬೆಳ್ಳಿಯ ಮೂರ್ತಿಯನ್ನು ಸಮರ್ಪಿಸಲಾಯಿತು.

ಜ.26ರಂದು ಸಂಜೆ ಅರಂತೋಡಿನ ಶ್ರೀ ದುರ್ಗಾಮಾತ ಭಜನಾ ಮಂದಿರದಿಂದ ಸ್ವಾಮಿ ಕೊರಗಜ್ಜ ದೈವದ ಬೆಳ್ಳಿಯ ಮೂರ್ತಿಯನ್ನು ಕುಣಿತ ಭಜನೆಯ ಮೆರವಣಿಗೆಯ ಮೂಲಕ ಸಾಗಿ ಕೊಡಂಕೇರಿಯ ಸ್ವಾಮಿ ಕೊರಗಜ್ಜ ದೈವದ ಸನ್ನಿಧಿಯಲ್ಲಿ ಸಮರ್ಪಣೆ ಮಾಡಲಾಯಿತು.

ಜ.27ರಂದು ಅಪರಾಹ್ನ ಗುಳಿಗ ದೈವದ ಕೋಲ, ಪ್ರಸಾದ ವಿತರಣೆ ನಡೆಯಿತು. ಬಳಿಕ ಕೊರತಿ ಮತ್ತು ಪಾಷಾಣಮೂರ್ತಿ ದೈವಗಳ ನೇಮೋತ್ಸವ ರಾತ್ರಿ ಅನ್ನಸಂತರ್ಪಣೆ ಜರುಗಿತು.
ಬಳಿಕ ಕುಪ್ಪೆ ಪಂಜುರ್ಲಿ ದೈವ ‌ಮತ್ತು ಸ್ವಾಮಿ ಕೊರಗಜ್ಜ ದೈವದ ಕಾಲಾವಧಿ ನೇಮೋತ್ಸವ, ಅಗೇಲು ಸೇವೆ , ಪ್ರಸಾದ ವಿತರಣೆ ನಡೆಯಿತು. ಜ.29ರಂದು ಸ್ವಾಮಿ ಕೊರಗಜ್ಜ ದೈವದ ಹರಕೆಯ ಕೋಲ ನಡೆಯಲಿದೆ.

ಈ ಸಂದರ್ಭದಲ್ಲಿ ಸ್ವಾಮಿ ಕೊರಗಜ್ಜ ದೇವಸ್ಥಾನದ ಗೌರವಾಧ್ಯಕ್ಷ ನವೀನ ಅರಂತೋಡು- ಕೊಡಂಕೇರಿ, ಮೊಕ್ತೇಸರರುಗಳಾದ ಶ್ರೀಮತಿ ವಾರಿಜ, ಗುರುವಪ್ಪ, ಪ್ರೋತ್ಸಾಹಕರಾದ ಗಂಗಯ್ಯ ಪೂಜಾರಿ, ತಿಮ್ಮಪ್ಪ ಪೂಜಾರಿ, ಸ್ವಾಮಿ ಕೊರಗಜ್ಜ ದೇವಸ್ಥಾನದ ಪದಾಧಿಕಾರಿಗಳು ಸೇರಿದಂತೆ ಸಾವಿರಾರು ಮಂದಿ ಭಕ್ತಾದಿಗಳು ಉಪಸ್ಥಿತರಿದ್ದರು.