ಬಾಳಿಲ ವಿದ್ಯಾಬೋಧಿನೀ ಪ್ರೌಢಶಾಲೆಯಲ್ಲಿ ಸಂಸತ್ತು ಅಧಿವೇಶನ

0

ಬಾಳಿಲ ವಿದ್ಯಾಬೋಧಿನೀ ಪ್ರೌಢಶಾಲೆಯಲ್ಲಿ ಗಣರಾಜ್ಯೋತ್ಸವದ ದಿನದಂದು ಶಾಲಾ ಸಂಸತ್ತು ಅಧಿವೇಶನ ಜರುಗಿತು. ವಿದ್ಯಾರ್ಥಿ ಸರಕಾರದ ಸಭಾಪತಿಯಾದ ಪವನ್ ಕೆ ಸಭಾಧ್ಯಕ್ಷತೆಯನ್ನು ವಹಿಸಿ ಸ್ವಾಗತಿಸಿದರು.

ಸಂಸದೀಯ ಕಾರ್ಯದರ್ಶಿಯಾದ ಚಿಂತನಾ ಕೆ ಗತ ಅಧಿವೇಶನದ ವರದಿಯನ್ನು ಮಂಡಿಸಿ ಅನುಮೋದನೆಯನ್ನು ಪಡೆದರು. ಮುಖ್ಯಮಂತ್ರಿಯಾದ ಚಿಂತನ್ ಎ ಸದನವನ್ನು ಉದ್ದೇಶಿಸಿ ಮಾತನಾಡಿದರು .ಬಳಿಕ ಕ್ರೀಡಾಕೂಟದ ಸಾಧನೆಗಳಿಗೆ ಅಭಿನಂದನಾ ಗೊತ್ತುವಳಿಯನ್ನು ಮನೀಷ್ ಜೆ. ಎನ್ ಮಂಡಿಸಿ ಅನುಮೋದನೆ ಪಡೆದರು. ಶಾಲಾ ವಾರ್ಷಿಕೋತ್ಸವದ ಯಶಸ್ವಿ ಸಂಘಟನೆ, ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತರಿಗೆ ಅಭಿನಂದನೆ, ಮುಂಬಯಿ ಶೈಕ್ಷಣಿಕ ಪ್ರವಾಸ ಸಂಘಟನೆ, ಜಿಲ್ಲಾ ಮಟ್ಟದ ಸ್ಕೌಟ್ – ಗೈಡ್ ಕ್ಯಾಂಪೋರಿಯಲ್ಲಿ ಭಾಗವಹಿಸುವಿಕೆ ಇವುಗಳ ಬಗ್ಗೆ ಶಿವ ಕೃಷ್ಣ ಎನ್ ಅಭಿನಂದನಾ ಗೊತ್ತುವಳಿ ಮಂಡಿಸಿ ಅನುಮೋದನೆ ಪಡೆದರು. ಪ್ರತಿಭಾ ಕಾರಂಜಿ, ಗಣಿತ ಹಬ್ಬ ವಿಜ್ಞಾನ ಸ್ಪರ್ಧೆಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಅನನ್ಯಾ ಬಿ ಅಭಿನಂದನಾ ಗೊತ್ತುವಳಿ ಮಂಡಿಸಿ ಅನುಮೋದನೆಯನ್ನು ಪಡೆದರು.

ನಂತರ ಇತ್ತೀಚಿಗೆ ನಿಧನರಾದ ಸಾಹಿತಿ ಅಮೃತ ಸೋಮೇಶ್ವರ ಇವರಿಗೆ ಕಾರ್ತಿಕ್ ಎನ್, ಕ್ಯಾಪ್ಟನ್ ಪ್ರಾಂಜಲ್ ಇವರಿಗೆ ದೇವಿಕಾ ಕೆ. ಸಂತಾಪ ಸೂಚಕ ಗೊತ್ತುವಳಿಯನ್ನು ಮಂಡಿಸಿದರು. ಪ್ರಚಲಿತ ವಿದ್ಯಮಾನಗಳಾದ ರಾಮ ಮಂದಿರ ಸಮರ್ಪಣೆ – ವಿಶೇಷತೆಗಳು ಎಂಬ ವಿಷಯದ ಬಗ್ಗೆ ಪ್ರತೀಕಾ ಕೆ, ರಾಜ್ಯದಲ್ಲಿ ಪಂಚ ಗ್ಯಾರಂಟಿಗಳ ಅಳವಡಿಕೆ – ಎಂಬ ವಿಷಯದ ಬಗ್ಗೆ
ದಿವೀಶ್ ಎ ಮಾತನಾಡಿ ಸದನದ ಗಮನ ಸೆಳೆದರು. ಬಳಿಕ ನಡೆದ ಪ್ರಶ್ನೋತ್ತರ ಅವಧಿಯಲ್ಲಿ ವಿಪಕ್ಷ ನಾಯಕರು , ಸದಸ್ಯರು ಆಡಳಿತ ಪಕ್ಷದ ಲೋಪ ದೋಷಗಳ ಬಗ್ಗೆ ಹಲವು ಪ್ರಶ್ನೆಗಳನ್ನು ಕೇಳಿದರು. ಆಡಳಿತ ಪಕ್ಷದವರು ತಮ್ಮ ಕೆಲಸ ಕಾರ್ಯಗಳನ್ನು ಪ್ರಸ್ತಾಪಿಸಿ ಸಮರ್ಪಕ ಉತ್ತರಗಳನ್ನು ನೀಡಲು ಪ್ರಯತ್ನಿಸಿದರು. ಶೂನ್ಯ ವೇಳೆಯಲ್ಲಿ ಕೆಲವು ವಿಚಾರಗಳನ್ನು ಗಮನಕ್ಕೆ ತಂದರು.

ಕೊನೆಯದಾಗಿ ಸಭಾಪತಿಗಳು ಸಂಸತ್ತಿನ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿ ಆಡಳಿತ ಪಕ್ಷ ಮತ್ತು ವಿಪಕ್ಷದವರ ಕರ್ತವ್ಯವನ್ನು ನೆನಪಿಸಿಕೊಂಡು, ಸದನದ ಕಾರ್ಯಕಲಾಪಗಳಲ್ಲಿ ಸಕ್ರಿಯರಾದ ಎಲ್ಲರಿಗೂ ಧನ್ಯವಾದ ಸಮರ್ಪಿಸಿದರು. ಸದನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು. ಶಾಲಾ ಮುಖ್ಯ ಗುರುಗಳಿಂದ ನಿರ್ದೇಶಸಲ್ಪಟ್ಟ ಕಾರ್ಯಕ್ರಮವು ಎಲ್ಲಾ ಶಿಕ್ಷಕರ ಸಹಕಾರದೊಂದಿಗೆ ಯಶಸ್ವಿಯಾಗಿ ಸಂಪನ್ನಗೊಂಡಿತು.