ಪೆರಾಜೆ ಗ್ರಾಮವನ್ನು ಪೋಡಿ ಮುಕ್ತ ಗ್ರಾಮವನ್ನಾಗಿ ಆಯ್ಕೆ ಮಾಡಲಾಗಿದ್ದು ಸರ್ವೆ ಕಾರ್ಯಕ್ಕೆ ಕಳೆದ ಡಿಸೆಂಬರ್ ನಲ್ಲಿ ಚಾಲನೆ ನೀಡಲಾಗಿದ್ದು, ಇದೀಗ ಆ ಕಾರ್ಯಕ್ಕೆ ವೇಗ ದೊರೆತಿದೆ.
ಪೆರಾಜೆ ಗ್ರಾಮವನ್ನು ಪೋಡಿಮುಕ್ತ ಗ್ರಾಮವನ್ನಾಗಿ ಮಾಡಬೇಕೆಂದು ಸಾರ್ವಜನಿಕರ ಮನವಿ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣರವರು ಪೋಡಿ ಮುಕ್ತ ಗ್ರಾಮವಾಗಿ ಆಯ್ಕೆ ಮಾಡಿ ಈ ಕಾರ್ಯ ಶೀಘ್ರ ಮುಗಿಸುವಂತೆ ಕಂದಾಯ ಇಲಾಖೆಗೆ ಸೂಚನೆ ನೀಡಿದ್ದರು.









ಕಳೆದ ಡಿಸೆಂಬರ್ 4 ರಂದು ಚಾಲನೆಯನ್ನು ನೀಡಲಾಗಿತ್ತು. ಆದರೆ ಪೋಡಿ ಕಾರ್ಯ ಆರಂಭಿಸಿದ ಕಂದಾಯ ಹಾಗೂ ಸರ್ವೆ ಇಲಾಖೆಯವರು ಕಾರ್ಯ ನಿದಾನವಾಗಿತ್ತು. ಈ ವಿಚಾರವನ್ನು ನಾಪೋಕ್ಲು ಬ್ಲಾಕ್ ಪ್ರಧಾನ ಕಾರ್ಯದರ್ಶಿ ಮನು ಪೆರುಮುಂಡ ರವರು ಶಾಸಕರ ಗಮನಕ್ಕೆ ತಂದಿದ್ದರು. ಇದೀಗ ಶಾಸಕರ ಪೋಡಿ ಕಾರ್ಯ ಶೀಘ್ರಮುಗಿಸುವಂತೆ ಸೂಚನೆ ನೀಡಿದ್ದರಿಂದ ಕಾರ್ಯಕ್ಕೆ ವೇಗ ದೊರೆತಿದೆ. ಇದಕ್ಕಾಗಿ ಸರ್ವೆ ಹಾಗೂ ಕಂದಾಯ ಇಲಾಖೆಗಳ ಅಧಿಕಾರಿಗಳ ನಾಲ್ಕು ತಂಡವನ್ನು ರಚಿಸಲಾಗಿದೆ.
ಪ್ರತೀ ತಂಡವೂ ದಿನವೊಂದಕ್ಕೆ 6 ಬ್ಲಾಕ್ ಗಳನ್ನು ಅಳತೆ ಮಾಡಿ ನಕ್ಷೆ ಮಹಜರು ಹಾಗೂ ಹೇಳಿಕೆ ತಯಾರಿಸಬೇಕು. ಪೋಡಿ ಕಾರ್ಯ ಮುಗಿಯುವ ತನಕ ಅಧಿಕಾರಿಗಳು ಸ್ಥಳದಲ್ಲಿರಬೇಕು, ಅಳತೆ ಮಾಡುವ ಅಧಿಕಾರಿಗಳು ಗ್ರಾ.ಪಂ. ಹಾಗೂ ಸ್ಥಳೀಯರ ಸಹಕಾರ ಪಡೆಯಬಹುದು, ಈ ಕಾರ್ಯ ಮುಗಿಯುವ ವರೆಗೆ ನೇಮಕಗೊಂಡ ಭೂ ಮಾಪಕರು ಬೇರೆ ಯಾವುದೇ ಕಾರ್ಯ ಮಾಡದಂತೆ ಸೂಚನೆ ನೀಡಿ ತಹಶೀಲ್ದಾರ್ ಆದೇಶ ಮಾಡಿದ್ದಾರೆ.
“ಪೆರಾಜೆಯನ್ನು ಪೋಡಿ ಮುಕ್ತ ಗ್ರಾಮವನ್ನಾಗಿ ಮಾಡಲು ಆಯ್ಕೆ ಮಾಡಿದ್ದು ಈ ಕೆಲಸಕ್ಕೆ 4 ತಂಡದ ಗಳಿವೆ. ಮೇಲಾಧಿಕಾರಿಗಳ ನಿರ್ದೇಶನದಂತೆ ಕಾರ್ಯ ನಡೆಯುತ್ತಿದೆ. ಆದಷ್ಟು ಶೀಘ್ರ ಕೆಲಸ ಮಾಡಲಾಗುವುದು” ಎಂದು ಕಂದಾಯ ನಿರೀಕ್ಷಕ ವೆಂಕಟೇಶಯ ತಿಳಿಸಿದ್ದಾರೆ.
“ಗ್ರಾಮಸ್ಥರ ಕೋರಿಕೆಯಂತೆ ಶಾಸಕರು ನಮ್ಮ ಗ್ರಾಮವನ್ನು ಆಯ್ಕೆ ಮಾಡಿದ್ದಾರೆ. ಕಳೆದ ಡಿಸೆಂಬರ್ ನಲ್ಲಿ ಚಾಲನೆ ನೀಡಲಾಯಿತು. ಇದೀಗ ಕಾರ್ಯಕ್ಕೆ ವೇಗ ದೊರೆತಿದೆ” ಎಂದು ಮನು ಪೆರುಮುಂಡ ತಿಳಿಸಿದ್ದಾರೆ.









