ಸಾಂಕೇತಿಕವಾಗಿ ಒಂದು ನಿಮಿಷ ರಸ್ತೆ ತಡೆ
ದೆಹಲಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಯನ್ನು ಬೆಂಬಲಿಸಿ ಸುಳ್ಯದಲ್ಲಿ ಕಾಂಗ್ರೆಸ್, ಆಮ್ ಆದ್ಮ ಪಕ್ಷ, ರೈತ ಸಂಘಟನೆ ಮತ್ತು ಕಾರ್ಮಿಕ ಸಂಘಟನೆಗಳ ಸಮಾನ ಮನಸ್ಕರು ಸೇರಿ ಸುಳ್ಯ ಬಸ್ ನಿಲ್ದಾಣದಲ್ಲಿ ಇಂದು ಸಂಜೆ ಪ್ರತಿಭಟನಾ ಸಭೆ ಹಾಗೂ ಸಾಂಕೇತಿಕ ರಸ್ತೆ ತಡೆ ನಡೆಯಿತು.
ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಆಮ್ ಆದ್ಮಿ ಪಕ್ಷದ ಮುಖಂಡ ಅಶೋಕ್ ಎಡಮಲೆಯವರು, ” ಕೇಂದ್ರ ಸರಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳನ್ನು ಕೂಡಲೇ ಹಿಂಪಡೆಯಬೇಕು. ಅಲ್ಲದೇ ಕೃಷಿ ತಜ್ಞ ಎಂ.ಎಸ್. ಸ್ವಾಮಿನಾಥನ್ ವರದಿಯನ್ನು ಅನುಷ್ಠಾನ ಮಾಡಬೇಕು” ಎಂದು ಹೇಳಿದರು. ” ದೇಶದ ಅಭಿವೃದ್ಧಿಯಲ್ಲಿ ರೈತರ ಕೊಡುಗೆ ಬಹಳಷ್ಟಿದೆ. ಆದರೆ ಮೋದಿ ಸರಕಾರ ರೈತರನ್ನು ಕಡೆಗಣಿಸಿದೆ ” ಎಂದವರು ಹೇಳಿದರು.
ರೈತ ಸಂಘದ ಅಧ್ಯಕ್ಷ ಲೋಲಾಜಾಕ್ಷ ಭೂತಕಲ್ಲುರವರು ಮಾತನಾಡಿ, ” ಮೋದಿ ಸರಕಾರ ರೈತರ ಬೆಳೆಗಳಿಗೆ ಸರಿಯಾಗಿ ಪ್ರತಿಫಲ ನೀಡದೆ , ಅವರ ಕೈ ಯಿಂದಲೇ ಹಣ ವಸೂಲಿ ಮಾಡುವ ಪ್ರಯತ್ನ ಮಾಡುತ್ತಿದೆ. ಹಾಗೂ ಅವರ ಕುಟುಂಬವನ್ನು ಬೀದಿಗಿಳಿಸುವ ಪ್ರಯತ್ನಕ್ಕೆ ಬೆಂಬಲ ನೀಡುತ್ತಿದೆ. ರಾಜ್ಯದ ಸಂಸದರು ಯಾರು ರೈತರ ಪರವಾಗಿ ನಿಲ್ಲುತ್ತಿಲ್ಲ” ಎಂದರು.
ಕಾಂಗ್ರೆಸ್ ಮುಖಂಡ ಹಾಗೂ ನಗರ ಪಂಚಾಯತ್ ಸದಸ್ಯ ಎಂ. ವೆಂಕಪ್ಪ ಗೌಡರು ಮಾತನಾಡಿ, ” ಪ್ರಧಾನಿ ನರೇಂದ್ರ ಮೋದಿಯವರು ರೈತರ ಆದಾಯವನ್ನು ದ್ವಿಗುಣಗೊಳಿಸುವುದಾಗಿ ಹೇಳಿದ್ದರು. ಆದರೆ ರೈತರ ಬೆಳೆಗೆ ಸರಿಯಾದ ಬೆಲೆ ಸಿಗದೆ ಕಂಗಾಲಾಗಿದ್ದೇವೆ. ರೈತರನ್ನು ತೊಂದರೆಗೆ ಸಿಲುಕಿಸುವ ಕಾನೂನು ಮಾಡಬಾರದೆಂದು ಹಾಗೂ ಕನಿಷ್ಟ ಬೆಂಬಲ ಬೆಲೆ ನಿಗದಿಪಡಿಸಬೇಕೆಂದು ಒತ್ತಾಯಿಸಿ ರೈತರು ದೆಹಲಿಯಲ್ಲಿ ಪ್ರತಿಭಟನೆ ನಡೆಸಲು ಬಂದರೆ ಅವರ ಮೇಲೆ ಅಶ್ರುವಾಯು ಪ್ರಯೋಗಿಸಿ ಹಿಮ್ಮೆಟ್ಟಿಸುವ ಕೆಲಸವನ್ನು ಮೋದಿ ಸರ್ಕಾರ ಮಾಡುತ್ತಿದೆ. ರಬ್ಬರ್‌ಗೆ ೨೦೧೩ಕ್ಕೆ ಮೊದಲು ಇದ್ದ ಬೆಲೆ ಎಷ್ಟು- ಈಗ ಇರುವ ಬೆಲೆ ಎಷ್ಟು ಎಂದು ತುಲನೆ ಮಾಡಿ ನೋಡಿ. ಅಡಿಕೆಗೆ ಕೆ.ಜಿ.ಗೆ ೪೦೦ ರೂ. ಇದ್ದದ್ದು ಈಗ ೩೪೦ ರೂ. ಆಗಿದೆ. ಹಾಗಿದ್ದರೆ ಅಚ್ಛೇ ದಿನ್ ಬಂದದ್ದು ಯಾರಿಗೆ? ಬಿಜೆಪಿಗೆ ಮತ ನೀಡುವ ರೈತರು ಇದನ್ನು ಪರಿಶೀಲಿಸಿ ನೋಡಿ” ಎಂದು ಹೇಳಿದರು.
ಅಡಿಕೆ ಆಮದು ವಿರುದ್ಧ ಸಂಘಟಿತ ರೈತ ಹೋರಾಟ : ಎಂ.ವಿ.ಜಿ.
” ಕೇಂದ್ರ ಸರಕಾರ ರಬ್ಬರ್ ಬೆಳೆಗಾರರ ಹಿತ ಕಾಪಾಡುತ್ತಿಲ್ಲ. ಕೇಂದ್ರ ಗೃಹ ಸಚಿವ ಅಮಿತ್ ಷಾ ರವರ ಪುತ್ರ ಹೊರದೇಶಗಳಿಂದ ಅಡಿಕೆ ಆಮದು ಮಾಡಿಕೊಂಡು ಕಡಿಮೆಗೆ ಒದಗಿಸುತ್ತಿರುವ ಬಗ್ಗೆ ರೈತ ಮುಖಂಡರು ಮತ್ತು ಕ್ಯಾಂಪ್ಕೊದವರೇ ಹೇಳುತ್ತಿದ್ದಾರೆ. ಇದೆಲ್ಲದರ ವಿರುದ್ಧ ಸುಳ್ಯದಲ್ಲಿ ರೈತರು ಸಂಘಟಿತ ಹೋರಾಟ ಮಾಡಬೇಕಾಗಿದೆ. ಅದಕ್ಕಾಗಿ ಮುಂಚೂಣಿಯಲ್ಲಿ ನಿಲ್ಲಲು ಯೋಚಿಸಿದ್ದೇನೆ. ಎಲ್ಲರೂ ಸಹಕಾರ ನೀಡಬೇಕು ” ಎಂದು ಎಂ.ವೆಂಕಪ್ಪ ಗೌಡರು ತಮ್ಮ ಭಾಷಣದ ಕೊನೆಯಲ್ಲಿ ಹೇಳಿ ರೈತ ಮುಖಂಡರ ಸಹಕಾರ ಕೋರಿದರು.
ಸಂಪಾಜೆ ಮೂಲಭೂತ ಸೌಕರ್ಯಗಳ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಕೆ.ಪಿ.ಜಾನಿಯವರು ಮಾತನಾಡಿ ” 2014 ರ ಮೊದಲು ಪ್ರಧಾನಿ ನರೇಂದ್ರ ಮೋದಿ ಜನರಿಗೆ ಭರವಸೆಗಳನ್ನು ನೀಡಿ ಆಡಳಿತಕ್ಕೆ ಬಂದವರು. ಆ ಭರವಸೆಗಳಲ್ಲಿ ಪ್ರಮುಖವಾಗಿ 1.=ಗೋ ಹತ್ಯೆ ನಿಷೇಧ, 2. ಗೋ ಮಾಂಸವನ್ನು ರಪ್ತು ಮಾಡುವುದು ನಿಲ್ಲಿಸುವುದು ಎಂದಾಗಿತ್ತು. ಆದರೆ ಪ್ರಧಾನಿ ನರೆಂದ್ರ ಮೋದಿ ಸರ್ಕಾರ ಬಂದ ಬಳಿಕವೂ ದೇಶ ವಿದೇಶಗಳಿಗೆ ಗೋ ಮಾಂಸ ರಪ್ತು ಆಗುತ್ತಿದೆ. 1947 ರಿಂದ 70 ವರ್ಷದಲ್ಲಿ 53 ಲಕ್ಷ ಕೋಟಿ ರೂ. ವ್ಯವಹಾರ ಗೋಮಾಂಸದ ರಫ್ತಿನಿಂದ ಆಗಿದ್ದರೆ, ನರೇಂದ್ರ ಮೋದಿ ಪ್ರಧಾನಿಯಾದ ನಂತರದ 10 ವರ್ಷಗಳಲ್ಲಿ 183 ಲಕ್ಷ ಕೋಟಿ ವ್ಯವಹಾರವಾಗಿದೆ.130 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಅದೇ ರೀತಿ ರೈತರ ಆದಾಯವನ್ನು ಇಮ್ಮಡಿ ಮಾಡುತ್ತೇವೆ ಎಂದು ಭರವಸೆ ನೀಡಿ ಆತ್ಮಹತ್ಯೆ ಕಡೆ ನೂಕುತ್ತಿದ್ದಾರೆ. ರೈತರು ಬೆಳೆದ ಇಳುವರಿಗೆ ತಕ್ಕ ಪ್ರತಿಫಲ ನೀಡದೆ ದೆಹಲಿಯಲ್ಲಿ ರೈತರ ವಿರೋಧಿಯಾಗಿ ಮತ್ತು ಜನರ ವಿರೋಧಿಯಾಗಿ ನರೇಂದ್ರ ಮೋದಿ ಸರ್ಕಾರ ಕೆಲಸ ಮಾಡುತ್ತಿದೆ ಎಂದರು.
ಒಂದು ನಿಮಿಷ ರಸ್ತೆತಡೆ
ವೆಂಕಪ್ಪ ಗೌಡರ ಭಾಷಣದ ಬಳಿಕ ಎಲ್ಲ ಪ್ರತಿಭಟನಾಕಾರರು ವೆಂಕಪ್ಪ ಗೌಡರ ನೇತೃತ್ವದಲ್ಲಿ ಮುಖ್ಯರಸ್ತೆಗೆ ಹೋಗಿ ಅಡ್ಡಲಾಗಿ ಕುಳಿತು, ರೈತರ ಹೋರಾಟಕ್ಕೆ ಜಯವಾಗಲಿ – ಕೇಂದ್ರ ಸರಕಾರಕ್ಕೆ ಧಿಕ್ಕಾರ ಘೋಷಣೆ ಗಳನ್ನು ಕೂಗಿದರು. ಒಂದು ನಿಮಿಷ ರಸ್ತೆ ತಡೆ ನಡೆಸಿ ಎದ್ದರು. ಭವಾನಿಶಂಕರ ಕಲ್ಮಡ್ಕ ವಂದಿಸಿದರು.
ಡೇವಿಡ್ ಧೀರ ಕ್ರಾಸ್ತಾ, ಎಂ.ಎಚ್.ಸುರೇಶ್ ಅಮೈ, ಪಿ.ಎಸ್.ಗಂಗಾಧರ, ಕೆ.ಎಂ.ಮುಸ್ತಾಫ, ನಂದರಾಜ್ ಸಂಕೇಶ, ರಶೀದ್ ಜಟ್ಟಿಪಳ್ಳ, ದಿವಾಕರ ಪೈ, ಭರತ್ ಕುಮಾರ್, ಗೋಕುಲದಾಸ್, ಎಂ.ಜೆ.ಶಶಿಧರ್, ಬೋಜಪ್ಪ ನಾಯ್ಕ್ ಅಡ್ಕಾರ್, ನೂಜಾಲು ಪದ್ಮನಾಭ ಗೌಡ, ಮಹಮ್ಮದ್ ಕುಂಞಿ ಗೂನಡ್ಕ, ರೋಹನ್ ಪೀಟರ್, ಸತ್ಯಕುಮಾರ್ ಆಡಿಂಜ, ಸಿದ್ದಿಕ್ ಕೊಕ್ಕೊ, ಕೃಷ್ಣ ಭಟ್ ಮುoಡಕಜೆ, ವಸಂತ ಪೆಲ್ತಡ್ಕ, ಧರ್ಮಪಾಲ ಕೊಯಿoಗಾಜೆ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.