ಮೀನುಗಾರ ಮೊಗೇರರಿಗೆ ಪ.ಜಾತಿ ಪ್ರಮಾಣ ಪತ್ರಕ್ಕೆ ಅಸಮಾಧಾನ

0

ಪ್ರವರ್ಗ -೧ರಲ್ಲಿರುವ ಹಿಂದುಳಿದ ಜಾತಿಯ ಮೀನುಗಾರ ಮೊಗೇರರಿಗೆ ಪ.ಜಾತಿಯ ಪ್ರಮಾಣ ಪತ್ರ ನೀಡಿರುವುದು ಸರಿಯಲ್ಲ. ಈ ಕುರಿತು ಸರಕಾರಕ್ಕೆ ವರದಿ ಸಲ್ಲಿಸಲಾಗಿದ್ದು ಅದನ್ನು ಸರಕಾರ ತಿರಸ್ಕರಿಸಬೇಕು.

ಇಲ್ಲವಾದಲ್ಲಿ ರಾಜ್ಯಾದ್ಯಂತ ದಲಿತ ಮೊಗೇರ ಸಂಘ ಪ್ರತಿಭಟನೆ ನಡೆಸಲಾಗುವುದು ಎಂದು ಮೊಗೇರ ಸಂಘದ ರಾಜ್ಯ ಸಂಚಾಲಕ ನಂದರಾಜ ಸಂಕೇಶ ಹೇಳಿದ್ದಾರೆ.


ಎ.೬ರಂದು ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ‘`ಉತ್ತರ ಕರ್ನಾಟಕದಲ್ಲಿ ಮೊಗವೀರ ಮೊಗೇರರಿದ್ದಾರೆ. ಅವರು ಹಿಂದುಳಿದ ವರ್ಗಕ್ಕೆ ಸೇರಿದವರು. ಆದರೆ ಅವರು ದಲಿತ ಮೊಗೇರೆಂದು ಹೇಳಿಕೊಂಡು ಜಾತಿ ಪ್ರಮಾಣ ಪಡೆದಿರುವುದಲ್ಲದೆ ಸರಕಾರದಿಂದ ಸಿಗುವ ಸವಲತ್ತುಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಇದರಿಂದ ನೈಜ ದಲಿತರಿಗೆ ಅನ್ಯಾಯವಾಗಿತ್ತು. ಇದು ನಮ್ಮ ಗಮನಕ್ಕೆ ಬಂದ ಬಳಿಕ ಪ್ರತಿಭಟನೆ, ಮನವಿಗಳು ಸಲ್ಲಿಕೆಯಾಗಿ ೨೦೧೦ರಿಂದ ಅವರಿಗೆ ದಲಿತ ಮೊಗೇರ ಜಾತಿ ಪ್ರಮಾಣ ಪತ್ರ ನೀಡುವುದು ಸ್ಥಗಿತವಾಗಿತ್ತು. ಆದರೆ ಇದೀಗ ಮತ್ತೆ ದಲಿತ ಮೊಗೇರ ಜಾತಿ ಪ್ರಮಾಣ ಪತ್ರ ನೀಡುವ ಕುರಿತು ಸರಕಾರಕ್ಕೆ ವರದಿ ನೀಡಲಾಗಿದ್ದು ಅದನ್ನು ಸರಕಾರ ತಿರಸ್ಕರಿಸಬೇಕು ಎಂದು ಅವರು ಆಗ್ರಹಿಸಿದರು.


ತಾಲೂಕು ಸಂಘದ ಅಧ್ಯಕ್ಷ ಕರುಣಾಕರ ಪಲ್ಲತಡ್ಕ ಮಾತನಾಡಿ, ಇಲ್ಲಿಯ ಮೊಗೇರ ಜಾತಿಯ ಸಂಸ್ಕೃತಿ ಮತ್ತು ಅಲ್ಲಿಯ ಮೊಗವೀರರ ಸಂಸ್ಕೃತಿಯಲ್ಲಿ ವ್ಯತ್ಯಾಸವಿದೆ. ನಾವು ದಲಿತರು ಅವರು ಹಿಂದುಳಿದ ವರ್ಗಕ್ಕೆ ಸೇರಿದವರು. ನಮಗೆ ಸಿಗುವ ಜಾತಿ ಪ್ರಮಾಣಪತ್ರ ಅವರು ಪಡೆಯುವುದು ಸರಿಯಲ್ಲ. ಇದರ ವಿರುದ್ಧ ನಮ್ಮ ಹೋರಾಟ ನಿರಂತರ'' ಎಂದು ಹೇಳಿದರು. ತಾಲೂಕು ಸಂಚಾಲಕ ಅಚ್ಚುತ ಮಲ್ಕಜೆ ಮಾತನಾಡಿಮೊಗವೀರ ಮೊಗೇರರು ನಕಲಿ ಜಾತಿ ಸರ್ಟಿಫಿಕೇಟ್ ಪಡೆಯುತ್ತಿದ್ದಾರೆ. ಇದರಿಂದ ಪ.ಜಾತಿಯವರಿಗೇ ಅನ್ಯಾಯವಾಗುತ್ತಿದೆ ಎಂದು ಹೇಳಿದರು.

ತಲೂಕು ಸಂಘದ ಕಾರ್ಯದರ್ಶಿ ಬಾಳಪ್ಪ ಕಳಂಜ, ಕನಕಮಜಲು ಸಂಘದ ಗೌರವಾಧ್ಯಕ್ಷ ಬಾಬು ಕನಕಮಜಲು ಇದ್ದರು.