ಸುಳ್ಯ ಸರ್ಕಾರಿ ಆಸ್ಪತ್ರೆಯಲ್ಲಿ ಕೆ.ಆರ್.ಎಸ್. ಪಕ್ಷದ ಪ್ರತಿಭಟನೆ

0

ಹೆರಿಗೆ ತಜ್ಞ ವೈದ್ಯರಿಂದ ಕರ್ತವ್ಯ ಲೋಪದ ಆರೋಪ

ಕ್ರಮ ಕೈಗೊಳ್ಳುವಂತೆ ಆಡಳಿತ ವೈದ್ಯಾಧಿಕಾರಿ ಬಳಿ ಪಟ್ಟು ಹಿಡಿದ ಕಾರ್ಯಕರ್ತರು

ಒಂದು ವಾರದಲ್ಲಿ ಲಿಖಿತವಾಗಿ ಉತ್ತರ ನೀಡುವ ಭರವಸೆ ಬಳಿಕ ಪೊಲೀಸರ ಆಗಮನದೊಂದಿಗೆ ಪ್ರತಿಭಟನೆ ಹಿಂಪಡೆತ

ಸುಳ್ಯ ಸರ್ಕಾರಿ ಆಸ್ಪತ್ರೆಯಲ್ಲಿ ಸ್ತ್ರೀ ರೋಗ ತಜ್ಞರಾಗಿ ಸೇವೆ ಸಲ್ಲಿಸುತ್ತಿರುವ ವೈದ್ಯೆ ತಮ್ಮ ಕರ್ತವ್ಯದಲ್ಲಿ ಲೋಪವೆಸಗುತ್ತಿದ್ದು, ಅವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಕೆ.ಆರ್.ಎಸ್. ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ ಘಟನೆ ಇಂದು ಸುಳ್ಯ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.

ಕೆ ಆರ್ ಎಸ್ ಪಕ್ಷದ ಕಾರ್ಯಕರ್ತರು ಸುಳ್ಯ ತಾಲೂಕು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಕರುಣಾಕರರವರ ಕಚೇರಿಗೆ ತೆರಳಿ ” ಈ ಮೊದಲು ನಾವು ಇಲ್ಲಿಯ ಸ್ತ್ರೀರೋಗ ವೈದ್ಯರು ಕರ್ತವ್ಯದಲ್ಲಿ ಲೋಪವೆಸಗುತ್ತಿರುವ ಬಗ್ಗೆ ತಮಗೆ ದೂರು ನೀಡಿದ್ದು, ಅವರು ಕಳೆದ ಎಂಟು ವರ್ಷಗಳಿಂದ ಈ ಆಸ್ಪತ್ರೆಯಲ್ಲಿ ಬೇರೆ ಯಾವುದೇ ಸ್ತ್ರೀ ರೋಗ ತಜ್ಞರಿಗೆ ಕೆಲಸವನ್ನು ಮಾಡಲು ಅವಕಾಶ ಮಾಡಿಕೊಡದೆ, ಕೆಲವು ಸಂದರ್ಭದಲ್ಲಿ ಅವರ ಮಗ ಬಂದು ಇಲ್ಲಿ ವೈದ್ಯರ ಸೇವೆ ಮಾಡುತ್ತಿದ್ದು ಅವರ ಕರ್ತವ್ಯದ ದುರುಪಯೋಗವನ್ನು ಮಾಡುತ್ತಿದ್ದಾರೆ.
ಅಲ್ಲದೆ ಗರ್ಭಿಣಿಯರು ಹೆರಿಗೆಗಾಗಿ ಬಂದಾಗ ಅವರಿಗೆ ನಾರ್ಮಲ್ ಆಗಿ ಹೆರಿಗೆಯಾಗಲು ಸಮಯಾವಕಾಶ ಕೊಡದೆ ಬೇಕು ಬೇಕಂತಲೇ ಸಿಜೇರಿಯನ್ ಮಾಡುವ ಮೂಲಕ ಬಡವರಿಂದ ಹಣ ಲೂಟಿ ಮಾಡುವ ದಂಧೆಯನ್ನು ಮಾಡುತ್ತಿದ್ದಾರೆ.


ಅಲ್ಲದೆ ರೋಗಿಗಳೊಂದಿಗೆ ಕಟುವಾಗಿ ವರ್ತಿಸುವ ಅವರು ಒಮ್ಮೆ ರೋಗಿಯೊಬ್ಬರನ್ನು ಥಳಿಸಿದ ಘಟನೆಯೂ ನಡೆದಿದೆ ” ಎಂದು ಆರೋಪಿಸಿದರು.


ಈ ಎಲ್ಲಾ ವಿಷಯದ ಕುರಿತು ತಮ್ಮ ಗಮನಕ್ಕೆ ತಂದಿದ್ದು , ಇಲ್ಲಿಯ ಕೆಲವು ಸಿಬ್ಬಂದಿಗಳು ಇಲ್ಲಿ ಆಗುತ್ತಿರುವ ತೊಂದರೆಗಳ ಬಗ್ಗೆ ನಮಗೆ ಮಾಹಿತಿ ನೀಡಿದ್ದಾರೆ. ಅದನ್ನು ಕೂಡ ತಮ್ಮ ಗಮನಕ್ಕೆ ನೀಡಿದ್ದೇವೆ. ಆದರೂ ಕೂಡ ತಾವು ಯಾವುದೇ ರೀತಿಯ ಕ್ರಮ ಕೈಗೊಳ್ಳದೆ ಇರಲು ಕಾರಣವೇನೆಂದು ಪ್ರಶ್ನಿಸಿದರು.

ಈ ವೇಳೆ ಉತ್ತರಿಸಿದ ಕರುಣಾಕರ ರವರು ” ತಾವು ನೀಡಿರುವ ಪತ್ರಕ್ಕೆ ಲಿಖಿತವಾಗಿ ಉತ್ತರವನ್ನು ನೀಡುತ್ತೇನೆ, ಈಗ ಸದ್ಯ ನೀವೆಲ್ಲರೂ ಹೊರಗಡೆ ನಿಂತು ಒಬ್ಬರು ಮಾತ್ರ ಬಂದು ಮಾತ್ರ ಬಂದು ಮಾತನಾಡಿ ” ಎಂದು ಹೇಳಿದರು.


” ಆದರೆ ನಮಗೆ ಈಗಲೇ ಉತ್ತರ ಕೊಡಿ” ಎಂದು ಪಟ್ಟು ಹಿಡಿದ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
ಆದರೆ ಶಾಂತವಾಗಿ ಪ್ರತಿಕ್ರಿಯಿಸಿದ ಡಾ.ಕರುಣಾಕರ ರವರು ” ತಾವುಗಳು ಈ ರೀತಿಯಾಗಿ ಕಚೇರಿಗೆ ಬಂದು ವರ್ತಿಸುವುದು ಸರಿಯಲ್ಲ. ಆದ್ದರಿಂದ ಕರ್ತವ್ಯಕ್ಕೆ ಅಡ್ಡಿಪಡಿಸುವ ವಿಷಯವನ್ನಿಟ್ಟು ಪೊಲೀಸರಿಗೆ ದೂರು ನೀಡಬೇಕಾಗುತ್ತದೆ” ಎಂದು ಅವರು ಹೇಳಿದರು.

ಬಳಿಕ ಸ್ಥಳಕ್ಕೆ ಬಂದ ಸುಳ್ಯ ಪೊಲೀಸ್ ಠಾಣೆಯ ಗುಪ್ತಚರ ಮಾಹಿತಿ ಸಿಬ್ಬಂದಿ ಪ್ರಕಾಶ್ ರವರು ಸಮಾಧಾನಪಡಿಸಿ ” ನಿಮ್ಮ ಏನೇ ಬೇಡಿಕೆ ಇದ್ದರೂ ಹಿರಿಯ ಅಧಿಕಾರಿಗಳ ಗಮನಕ್ಕೆ ತರಬೇಕೆ ವಿನಹ: ಆರೋಗ್ಯ ಇಲಾಖೆಯ ಕಚೇರಿಯಲ್ಲಿ ಪ್ರತಿಭಟಿಸುವುದು ಸರಿಯಲ್ಲವೆಂದು ಹೇಳಿ ಪ್ರತಿಭಟನಾಕಾರರನ್ನು ಸಮಧಾನಪಡಿಸಿದರು.


ಆಗ ಪ್ರತಿಭಟನಾಕಾರರು “ವೈದ್ಯರು ಲಿಖಿತವಾಗಿ ಉತ್ತರ ನೀಡುವುದು ಯಾವಾಗ ಎಂದು ಹೇಳಲಿ. ನಾವು ಹೊರಗಡೆ ಹೋಗುತ್ತೇವೆ” ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದಾಗ ” ಒಂದು ವಾರದಲ್ಲಿ ಲಿಖಿತವಾಗಿ ಉತ್ತರ ನೀಡುವುದಾಗಿ ವೈದ್ಯರು ಭರವಸೆ ನೀಡಿದರು.
ಬಳಿಕ ಕೆಆರ್‌ಎಸ್ ಪಕ್ಷದ ಕಾರ್ಯಕರ್ತರು ಹೊರ ನಡೆದರು.

ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಕೆ.ಆರ್.ಎಸ್. ಪಕ್ಷದ ಮಂಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ರಂಜಿನಿಯವರು “ಇಲ್ಲಿನ ಹೆರಿಗೆ ತಜ್ಞರಾಗಿರುವ ಡಾ.ವೀಣಾ ರವರು ನಾರ್ಮಲ್ ಹೆರಿಗೆಗೆ ಕಾಲಾವಕಾಶ ಕೊಡದೆ 3 ಸಾವಿರ ರೂ.ಗಳ ಆಸೆಗಾಗಿ ಸಿಜೇರಿಯನ್ ಮಾಡಿ ಹಣ ಸಂಪಾದನೆ ಮಾಡುವ ಕಾರ್ಯಕ್ಕೆ ಮುಂದಾಗುತ್ತಿದ್ದಾರೆ. ಇವರ ಮೇಲೆ ಕ್ರಮ ಕೈಗೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ಪಕ್ಷದ ವತಿಯಿಂದ ಬೃಹತ್ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆಯನ್ನು ನೀಡಿದರು.

ಪ್ರತಿಭಟನೆಯಲ್ಲಿ ಪಕ್ಷದ ಜಿಲ್ಲಾ ಅಧ್ಯಕ್ಷ ವೇಣುಗೋಪಾಲ, ಉಪಾಧ್ಯಕ್ಷ ಐವನ್ , ಪ್ರ. ಕಾರ್ಯದರ್ಶಿ ಸುನೀತಾ ರೋಜಾರಿಯೊ, ಕಾರ್ಯದರ್ಶಿ ಸಿಮಿ, ಸದಸ್ಯರಾದ ನವೀನ್, ಶಾರಿಕ್ ಡಿ.ಎಂ. ಉಪಸ್ಥಿತರಿದ್ದರು.