ಗಾಂಧಿನಗರ ರಥೋತ್ಸವ ಕಟ್ಟೆಯ ಬಳಿ ಹೆದ್ದಾರಿಯಲ್ಲಿಯೇ ಮಣ್ಣಿನ ದಿಬ್ಬ, ಪಕ್ಕದ ರಸ್ತೆಗಳು ಹೊಂಡ ಮಯ

0

ಸುಳ್ಯ ನಗರದ ಹೃದಯ ಭಾಗವಾದ ರಥೋತ್ಸವ ಕಟ್ಟೆಯ ಬಳಿ ರಾಷ್ಟ್ರೀಯ ಹೆದ್ದಾರಿಯ ಮಧ್ಯಭಾಗದಲ್ಲಿ ಮಣ್ಣು ಮತ್ತು ಜಲ್ಲಿಗಳಿಂದ ತುಂಬಿದ ದಿಬ್ಬವೊಂದು ವಾಹನ ಸವಾರರಿಗೆ ಸಮಸ್ಯೆ ಉಂಟು ಮಾಡುತ್ತಿದೆ. ಅಲ್ಲದೆ ರಥ ಬೀದಿ ರಸ್ತೆಗೆ ಸಂಪರ್ಕಿಸುವ ಸ್ಥಳದಲ್ಲಿ ಹೊಂಡ ಗುಂಡಿಗಳು ನಿರ್ಮಾಣವಾಗಿದ್ದು ಪರಿಸರವೇ ಅವ್ಯವಸ್ಥೆಯಿಂದ ಕೂಡಿದಂತಿದೆ.


ಕಳೆದ ಕೆಲವು ತಿಂಗಳ ಹಿಂದೆ ರಸ್ತೆಯ ಮಧ್ಯ ಭಾಗದಲ್ಲಿ ಕುಡಿಯುವ ನೀರಿನ ಪೈಪ್ ದುರಸ್ತಿಗಾಗಿ ತೆಗೆದ ಗುಂಡಿಗೆ ಅವೈಜ್ಞಾನಿಕವಾಗಿ ಮಣ್ಣು ತುಂಬಿಸಿ ಎತ್ತರದ ದಿಬ್ಬ ನಿರ್ಮಾಣ ಮಾಡಿ ಹೋದವರು ಇಂದಿಗೂ ಇತ್ತ ತಲೆ ಹಾಕಲಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಬಗ್ಗೆ ಮಾಧ್ಯಮಗಳಲ್ಲಿ ಹತ್ತಾರು ವರದಿ ಪ್ರಕಟಿಸಿದರು ಅಧಿಕಾರಿಗಳಿಂದ ಯಾವುದೇ ಸ್ಪಂದನೆ ದೊರಕುತ್ತಿಲ್ಲ ಎಂದು ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಹೇಳುತ್ತಿದ್ದಾರೆ.

ಈ ಬಗ್ಗೆ ಮಾತನಾಡಿರುವ ಸ್ಥಳೀಯ ನಿವಾಸಿ ಹಾಗೂ ನಗರ ಪಂಚಾಯತ್ ನಾಮನಿರ್ದೇಶಕ ಸದಸ್ಯ ರಾಜು ಪಂಡಿತ್ ‘ ಇಲ್ಲಿ ಪಕ್ಕದಲ್ಲಿಯೇ ನಮ್ಮ ಮನೆ ಇದ್ದು ರಾತ್ರಿ ಸಮಯದಲ್ಲಿ ವಾಹನಗಳು ಏಕಾಏಕಿ ಕಾಣುವ ಮಣ್ಣಿನ ದಿಬ್ಬವನ್ನು ನೋಡಿ ಬ್ರೇಕ್ ಹಾಕುವ ಶಬ್ದ ಅಲ್ಲದೆ ಬೇರೆ ಇನ್ನಿತರ ವಾಹನಗಳು ವೇಗವಾಗಿ ಬಂದು ಈ ದಿಬ್ಬದ ಮೇಲೆ ಹತ್ತಿದಾಗ ಭಾರಿ ಶಬ್ದಗಳು ಕೇಳಿಬರುತ್ತದೆ. ಇದನ್ನು ಸರಿಪಡಿಸುವಂತೆ ನಗರ ಪಂಚಾಯತ್ ಮುಖ್ಯ ಅಧಿಕಾರಿಯವರ ಬಳಿ ಮುಖತ ಭೇಟಿಯಾಗಿ ಮನವಿ ಮಾಡಿಕೊಂಡಿದ್ದು ಸ್ಪಂದಿಸುವ ಭರವಸೆಯನ್ನು ನೀಡಿದ್ದಾರೆ ಎಂದು ಸುದ್ದಿಗೆ ತಿಳಿಸಿದ್ದಾರೆ.

ಒಟ್ಟಿನಲ್ಲಿ ಈ ರೀತಿಯ ಸಮಸ್ಯೆಗಳನ್ನು ಆದಷ್ಟು ಶೀಘ್ರದಲ್ಲಿ ಪರಿಹರಿಸಿ ಮುಂದೆ ಉಂಟಾಗಬಲ್ಲ ವಾಹನ ಅಪಘಾತಗಳನ್ನು ತಪ್ಪಿಸಬೇಕೆಂದು ಸ್ಥಳೀಯ ಸಾರ್ವಜನಿಕರು ಆಗ್ರಹಿಸಿದ್ದಾರೆ.