ನಿಯಮ ಪಾಲಿಸದ 700 ಕ್ಕೂ ಅಧಿಕ ಮಂದಿ ವಾಹನ ಚಾಲಕರ ಮನೆಗಳಿಗೆ ಮುಟ್ಟಿದ ನೋಟೀಸು
ಸಂಚಾರ ನಿಯಮ ಉಲ್ಲಂಘನೆ ಮಾಡುವವರ ಮೇಲೆ ಸುಳ್ಯ ಪೊಲೀಸ್ ಹದ್ದಿನ ಕಣ್ಣು ಹಿಟ್ಟಿದೆ.
ನೂತನವಾಗಿ ಸುಳ್ಯ ಠಾಣೆಗೆ ಉಪ ನಿರೀಕ್ಷಕರಾಗಿ ಬಂದಿರುವ ಸಂತೋಷ್‌ರವರು ಸಂಚಾರ ನಿಯಮ ಪಾಲಿಸದೇ ಇರುವ ವಾಹನ ಸವಾರರನ್ನು ನಿಯಂತ್ರಿಸುವ ಕಾರ್ಯಕ್ಕೆ ಮುಂದಾಗಿದ್ದು, ನಿಯಮ ಉಲ್ಲಂಘನೆ ಮಾಡಿರುವ ಸುಮಾರು ೭೦೦ ಕ್ಕೂ ಹೆಚ್ಚು ವಾಹನ ಚಾಲಕರ ಮನೆಗಳಿಗೆ ಈಗಾಗಲೇ ನೋಟಿಸು ನೀಡಿರುವ ಬಗ್ಗೆ ತಿಳಿದು ಬಂದಿದೆ.
ಠಾಣಾ ಸಿಬ್ಬಂಗಳಿಗೆ ಖಡಕ್ ಹೆಚ್ಚರಿಕೆಯನ್ನು ನೀಡಿರುವ ಅವರು ಠಾಣೆಯ ಎಲ್ಲಾ ಸಿಬ್ಬಂದಿಗಳು ಮತ್ತು ಅಧಿಕಾರಿಗಳ ವಾಟ್ಸ್‌ಆಪ್ ಗ್ರೂಪ್ ಮಾಡಿ ನಗರ ಮತ್ತು ಗ್ರಾಮೀಣ ಭಾಗದ ರಸ್ತೆಗಳಲ್ಲಿ ಹೆಲ್ಮೆಟ್ ಧರಿಸದೆ ದ್ವಿ ಚಕ್ರ ವಾಹನ ಚಾಲನೆ, ತ್ರಿಬಲ್ ರೈಡಿಂಗ್, ಅತಿಯಾದ ವೇಗ,ಸರಿಯಾದ ಧಾಖಲೆ ಪತ್ರ ವಿಲ್ಲದೆ ಚಾಲನೆ,ಕಾರಿನಲ್ಲಿ ಸೀಟ್ ಬೆಲ್ಟ್ ಧರಿಸದೆ ಚಾಲನೆ ಮುಂತಾದ ವಿಷಯಗಳ ಬಗ್ಗೆ ನಿಘಾ ಇಟ್ಟು ಸ್ಥಳದಲ್ಲಿಯೇ ಮೊಬೈಲ್ ಫೋನ್ ನಲ್ಲಿ ಫೋಟೋ ಕ್ಲಿಕ್ಕಿಸಿಕೊಳ್ಳಬೇಕು. ಬಳಿಕ ಅದನ್ನು ಗ್ರೂಪ್ ಗೆ ಹಾಕುವುದು,ಇದನ್ನು ಠಾಣೆಯಲ್ಲಿ ನೋಡಿ ಕೊಳ್ಳಲು ಓರ್ವ ಸಿಬ್ಬಂದಿಯನ್ನು ನೇಮಕ ಮಾಡಿದ್ದು ಅವರು ವಾಹನದ ಸಂಪೂರ್ಣ ಮಾಹಿತಿ ಕಲೆ ಹಾಕಿ ಸಂಭಂದ ಪಟ್ಟ ಚಾಲಕರ ಮನೆಗಳಿಗೆ ಬೀಟ್ ಪೊಲೀಸರ ಮೂಲಕ ಅಥವಾ ಅಂಚೆ ಮೂಲಕ ನೋಟೀಸ್ ನೀಡುವ ಕ್ರಮವನ್ನು ಮಾಡುತ್ತಿದ್ದಾರೆ.
ನೋಟಿಸ್ ಬಂದವರು ನ್ಯಾಯಾಲಯಕ್ಕೆ ತೆರಳಿ ದಂಡವನ್ನು ಪಾವತಿಸ ಬೇಕಾಗುತ್ತದೆ. ಈ ರೀತಿಯಾಗಿ ಸುಳ್ಯ ಪೊಲೀಸರು ಸುಳ್ಯದಲ್ಲಿ ಸಂಚಾರ ನಿಯಮದ ಬಗ್ಗೆ ಕಟ್ಟು ನಿಟ್ಟಿನ ಕ್ರಮ ಕೈ ಗೊಳ್ಳುತ್ತಿದ್ದಾರೆ.
ಈ ಬಗ್ಗೆ ಸುದ್ದಿಯೊಂದಿಗೆ ಮಾತಾಡಿರುವ ಎಸ್ ಐ ಸಂತೋಷ್ ರವರು ಈ ನಿಯಮ ನಾವು ನಮಗಾಗಿ ಮಾಡಿರುವುದಲ್ಲ. ಇತ್ತೀಚಿಗೆ ರಸ್ತೆ ಅಪಘಾತಗಳು ಹೆಚ್ಚಾಗಿ ಕಂಡು ಬರುತ್ತಿದ್ದು ಅದರಲ್ಲೂ ದ್ವಿ ಚಕ್ರ ವಾಹನ ಗಳ ಅಪಘಾತ ಹೆಚ್ಚಾಗುತ್ತಿದೆ.ಸವಾರರ ಜೀವ ರಕ್ಷಣೆಗಾಗಿ ಈ ಕ್ರಮ ಅನಿವಾರ್ಯವಾಗಿದೆ.ಇಲ್ಲದಿದ್ದರೆ ಪೊಲೀಸರು ರಸ್ತೆಯಲ್ಲಿ ಅವರನ್ನು ತಡೆದು ನಿಲ್ಲಿಸಿದಾಗ ಏನಾದರೂ ಹೇಳಿ ಆ ಕ್ಷಣಕ್ಕೆ ಅವರು ಅಲ್ಲಿಂದ ಹೋಗುತ್ತಾರೆ. ಮತ್ತೆ ಅದೇ ನಿಯಮ ಉಲ್ಲಂಘನೆಯನ್ನು ಮಾಡುತ್ತಿರುತ್ತಾರೆ. ಆದ್ದರಿಂದ ಅವರಲ್ಲಿ ಜಾಗೃತಿ ಮೂಡಿಸಲು ಈ ಕ್ರಮವನ್ನು ಅನುಸರಿಸಬೇಕಾಗಿದೆ. ಆದ್ದರಿಂದ ನಿಯಮ ಉಲ್ಲಂಘನೆ ಮಾಡಿ ಯಾರೂ ಕೂಡ ವಾಹನ ಚಲಾಯಿಸಬಾರದು ಎಂದು ಅವರು ಹೇಳಿದ್ದಾರೆ.