ಜಾಲ್ಸೂರು: ಮಳೆನೀರು ಕೊಯ್ಲು ಪ್ರಾತ್ಯಕ್ಷಿಕೆ ಹಾಗೂ ಮಾಹಿತಿ ಕಾರ್ಯಾಗಾರ

0

ಭೂಮಿಯ ಅಂತರ್ಜಲ ಪ್ರಮಾಣ ಹೆಚ್ಚಿಸಲು ಮಳೆಕೊಯ್ಲು ಸಹಕಾರಿಯಾಗಿದ್ದು, ಪ್ರತಿಯೊಬ್ಬರಿಗೂ ಪ್ರಯೋಜನಕಾರಿ: ಡಾ. ಯು.ಪಿ. ಶಿವಾನಂದ

ಬ್ಯಾಂಕ್ ಆಫ್ ಬರೋಡಾದಿಂದ ಪ್ರವರ್ತಿಸಲ್ಪಟ್ಟ ವಿಜಯ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ ಮಂಗಳೂರು, ವಿಜಯ ಗ್ರಾಮಾಭಿವೃದ್ಧಿ ಸಮಿತಿ ಜಾಲ್ಸೂರು ಇದರ ಆಶ್ರಯದಲ್ಲಿ ಅರಿವು ಕೃಷಿ ಕ್ಲಿನಿಕ್ ಸುಳ್ಯ, ಗ್ರಾ.ಪಂ. ಜಾಲ್ಸೂರು, ಕನಕಮಜಲು ಪ್ರಾ.ಕೃ.ಪ.ಸ.ಸಂಘ ಜಾಲ್ಸೂರು, ಶ್ರೀ ಸುಬ್ರಹ್ಮಣ್ಯ ಸಂಜೀವಿನಿ ಒಕ್ಕೂಟ ಜಾಲ್ಸೂರು ಇವರ ಸಹಯೋಗದೊಂದಿಗೆ ಮಳೆನೀರು ಕೊಯ್ಲು ಪ್ರಾತ್ಯಕ್ಷಿಕೆ ಹಾಗೂ ಮಾಹಿತಿ ಕಾರ್ಯಾಗಾರವು ಜಾಲ್ಸೂರು ಗ್ರಾ.ಪಂ. ಸಭಾಭವನದಲ್ಲಿ ಜೂ.6ರಂದು ಬೆಳಿಗ್ಗೆ ನಡೆಯಿತು.

ಸುದ್ದಿ ಸಮೂಹ ಮಾಧ್ಯಮ ಸಂಸ್ಥೆಯ ಆಡಳಿತ ನಿರ್ದೇಶಕ ಡಾ. ಯು.ಪಿ.ಶಿವಾನಂದ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿ ಪ್ರಸ್ತುತ ಕುಡಿಯುವ ನೀರಿನ ಸಮಸ್ಯೆ ಅಲ್ಲಲ್ಲಿ ಇದೆ. ನೀರಿನ ಸಮಸ್ಯೆಗಾಗಿ ಮುಂದಿನ ದಿನಗಳಲ್ಲಿ ಮಹಾಯುದ್ದ ಸಂಭವಿಸಿದರೂ, ಆಶ್ಚರ್ಯವಿಲ್ಲ. ಆದ್ದರಿಂದ ಮಳೆಗಾಲದಲ್ಲಿ ಮನೆಯ ಮಹಡಿಯಿಂದ ಬಿದ್ದ ಶುದ್ಧ ನೀರನ್ನು ಟ್ಯಾಂಕ್ ಮೂಲಕ ಸಂಗ್ರಹಿಸಿ, ಬೋರ್ ವೆಲ್, ಬಾವಿಗೆ ಬಿಡುವುದರಿಂದ ಭೂಮಿಯಲ್ಲಿ ಅಂತರ್ಜಲ ಮಟ್ಟವನ್ನು ಹೆಚ್ಚಿಸಬಹುದಾಗಿದೆ.
ಈ ರೀತಿಯಲ್ಲಿ ಮಹಡಿಯಿಂದ ಬಿದ್ದ ಶುದ್ಧನೀರನ್ನು ಟ್ಯಾಂಕ್ ಮೂಲಕ ಸಂಗ್ರಹಿಸಿ ಮಳೆಗಾಲದಲ್ಲಿ ಉಪಯೋಗಿಸಲು ಸಾಧ್ಯವಿದೆ. ಮಳೆಕೊಯ್ಲು ಸಂಗ್ರಹದ ಈ ಕಾರ್ಯಕ್ಕೆ ಸರ್ಕಾರದಿಂದಲೂ ಸಬ್ಸಿಡಿ ರೂಪದಲ್ಲಿ ಪ್ರೋತ್ಸಾಹಧನ ದೊರೆಯುತ್ತದೆ ಎಂದರು. ಪ್ರತೀ ಗ್ರಾಮ ಪಂಚಾಯತಿ, ಸಹಕಾರಿ ಸಂಘ ಸಂಸ್ಥೆಗಳು ಮಳೆಕೊಯ್ಲು ಕಾರ್ಯವನ್ನು ಮಾಡಿದರೆ ಭೂಮಿಯಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸಲು ಸಾಧ್ಯವಾಗುತ್ತದೆ ಎಂದು ಡಾ. ಯು.ಪಿ. ಶಿವಾನಂದರು ಹೇಳಿದರು.

ಜಾಲ್ಸೂರು ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ತಿರುಮಲೇಶ್ವರಿ ಮರಸಂಕ ಅಧ್ಯಕ್ಷತೆ ವಹಿಸಿದ್ದರು.
ಪುತ್ತೂರು ಅರಿವು ಕೃಷಿ ಕ್ಲಿನಿಕ್‌ನ ಹೊನ್ನಪ್ಪ ಗೌಡ ಬನ್ನೂರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ‌ಮಳೆನೀರು ಕೊಯ್ಲು ಪ್ರಾತ್ಯಕ್ಷಿಕೆಯ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಮಳೆನೀರು ಕೊಯ್ಲು ಪ್ರಾತ್ಯಕ್ಷಿಕೆ ಕಾರ್ಯ ನಡೆಯಿತು.
ಮುಖ್ಯ ಅತಿಥಿಗಳಾಗಿ ಕನಕಮಜಲು ಸಹಕಾರಿ ಸಂಘದ ಅಧ್ಯಕ್ಷ ನಾರಾಯಣ ಗೌಡ ಬೊಮ್ಮೆಟ್ಟಿ, ಬ್ಯಾಂಕ್ ಆಫ್ ಬರೋಡಾ ಸುಳ್ಯ ಶಾಖೆಯ ಹಿರಿಯ ಶಾಖಾ ವ್ಯವಸ್ಥಾಪಕ ಅಶೋಕ್ ವಿಮಾನ್, ಎನ್‌.ಆರ್‌.ಎಲ್‌.ಎಂ. ಸುಳ್ಯ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕಿ ಶ್ರೀಮತಿ ಶ್ವೇತಾ, ಜಾಲ್ಸೂರಿನ ವಿಜಯ ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ಯಶ್ವಿತ್ ಕಾಳಂಮನೆ, ಕಾರ್ಯದರ್ಶಿ ತಿರುಮಲೇಶ್ವರಿ ಅರ್ಭಡ್ಕ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು ಸೇರಿದಂತೆ ಸುಮಾರು ಐವತ್ತಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು.