ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ 2024-25 ಸಾಲಿನ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿ ಸಂಸತ್ತಿಗೆ ಸಾರ್ವತ್ರಿಕ ಚುನಾವಣೆಯ ಮಾದರಿಯಲ್ಲಿ ಮತದಾನವು ಜೂನ್ 7ರಂದು ನಡೆಯಿತು. ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ, ಹಿಂತೆಗೆತದ ಬಳಿಕ ಚುನಾವಣಾ ಪ್ರಚಾರಕ್ಕೆ ಅವಕಾಶ ನೀಡಲಾಗಿತ್ತು.ಮಕ್ಕಳು ಕೈ ಬೆರಳುಗಳಿಗೆ ಶಾಯಿ ಹಚ್ಚಿಸಿಕೊಂಡು, ಮತಪತ್ರದಲ್ಲಿನ ತಮ್ಮ ಇಚ್ಛೆಯ ಅಭ್ಯರ್ಥಿಗೆ ಮತದಾನ ಮಾಡುವುದರ ಮೂಲಕ ಚುನಾವಣೆಯ ಸಂಭ್ರಮವನ್ನು ಅನುಭವಿಸಿದರು. ಮತದಾರರಿಗೆ ಗುರುತಿನ ಚೀಟಿ ಕಡ್ಡಾಯ ಮಾಡಲಾಗಿತ್ತು.
ಬಳಿಕ ಮತ ಎಣಿಕೆಯ ಕಾರ್ಯವನ್ನು ನಡೆಸಿ ವಿಜೇತರನ್ನು ಘೋಷಿಸಲಾಯಿತು. ಹಿರಿಯ ಪ್ರಾಥಮಿಕ ಶಾಲಾ ವಿಭಾಗದ ನಾಯಕನಾಗಿ ವೈಷ್ಣವ್ ಪಿ.ಎನ್. 7ನೇ ತರಗತಿ, ಉಪನಾಯಕಿಯಾಗಿ ಅಥರ್ವಿ ಪಿ.ಜಿ. 6ನೇ ತರಗತಿ ಆಯ್ಕೆಯಾದರು. ಪ್ರೌಢಶಾಲಾ ವಿಭಾಗದಲ್ಲಿ ನಾಯಕನಾಗಿ ಅರುಣ ಎ. ಪ್ರಭು 10ನೇ ತರಗತಿ ಉಪನಾಯಕನಾಗಿ ಗಗನ್ ಎ.ವಿ. 9ನೇ ತರಗತಿ ಆಯ್ಕೆಯಾದರು.
ಚುನಾವಣಾ ಪ್ರಕ್ರಿಯೆಯನ್ನು ಸಂಸ್ಥೆಯ ಅಧ್ಯಕ್ಷರಾದ ಡಾ| ಚಂದ್ರಶೇಖರ್ ದಾಮ್ಲೆ ಮತ್ತು ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಯಲಕ್ಷ್ಮಿ ದಾಮ್ಲೆ ಅವರ ಮಾರ್ಗದರ್ಶನದಲ್ಲಿ ನಡೆಸಿದ್ದು, ಶಾಲಾ ಶಿಕ್ಷಕ ವರ್ಗದವರು ಚುನಾವಣಾ ಅಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಿದರು. ಶಾಲೆಯ ಎಲ್ಲಾ ಶಿಕ್ಷಕ ವೃಂದದವರು ಉಪಸ್ಥಿತರಿದ್ದು ಈ ಸಂದರ್ಭದಲ್ಲಿ ಸಹಕರಿಸಿದರು.