ಬದುಕಿನ ಯಶಸ್ಸು ಒಂದು ಉತ್ತಮ ದೃಢ ಸಂಕಲ್ಪದಿಂದ ಸಾಧ್ಯ: ಶಿವಾನಂದ ಜಿದ್ದಿಮನಿ

0

ಎನ್ನೆಂಸಿ ನೇಚರ್ ಕ್ಲಬ್ ವಾರ್ಷಿಕ ಚಟುವಟಿಕೆಗಳ ಸಮಾರೋಪ ಕಾರ್ಯಕ್ರಮ

ಬೀಳ್ಕೊಂಡ ಜೀವ ವಿಜ್ಞಾನ ಪದವಿ ವಿದ್ಯಾರ್ಥಿಗಳಿಗೆ ನೆನಪಿನ ದ್ಯೋತಕವಾಗಿ ಸಸಿ ವಿತರಣೆ

ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ನೇಚರ್ ಕ್ಲಬ್‌ನ 2023-24ನೇ ಸಾಲಿನ ವಾರ್ಷಿಕ ಚಟುವಟಿಕೆಗಳ ಸಮಾರೋಪ ಸಮಾರಂಭ ಜೂನ್ 19ರಂದು ಕಾಲೇಜು ದೃಶ್ಯ ಶ್ರವಣ ಕೊಠಡಿಯಲ್ಲಿ ನಡೆಯಿತು.


ಮುಖ್ಯ ಅತಿಥಿಗಳಾಗಿ ಆಗಮಿಸಿದ ಸುಳ್ಯದ ಪ್ರೊಬೇಷನರಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಿವಾನಂದ ಜಿದ್ದಿಮನಿ ಮಾತನಾಡಿ, ಬದುಕಿನಲ್ಲಿ ಯಶಸ್ಸನ್ನು ಪಡೆಯಬೇಕಾದರೆ ಒಂದು ದೃಢ ನಿರ್ಧಾರ, ಒಳ್ಳೆಯ ಸಂಕಲ್ಪ ಇರಬೇಕು. ಹಿರಿಯರ ಆದರ್ಶಗಳನ್ನು ಅನುಸರಿಸಬೇಕು. ಪದವಿ ವಿದ್ಯಾಭ್ಯಾಸ ಹಂತ ಅಮೂಲ್ಯ ಸಮಯ. ನಡತೆಯಲ್ಲಿ ದಾರಿತಪ್ಪದೆ ಉತ್ತಮ ಜೀವನವನ್ನ ರೂಪಿಸಿಕೊಳ್ಳಬೇಕು. ಇಂದು ಸಾಮಾಜಿಕ ಜಾಲತಾಣಗಳ ಬಗ್ಗೆ ಜಾಗೃತರಾಗಿದ್ದು ಧನಾತ್ಮಕವಾಗಿ ಬಳಸಿಕೊಳ್ಳಬೇಕು. ಈ ಸಂದರ್ಭದಲ್ಲಿ ಜೀವನದಲ್ಲಿ ತಾನು ಏನಾಗಬೇಕು ಎಂಬ ನಿರ್ಧಾರ ಮಾಡಿಕೊಂಡು, ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಪೋಷಕರು ಗುರುಗಳು ಹೆಮ್ಮೆಪಡುವ ಸಾಧನೆಗಳನ್ನು ಮಾಡಬೇಕು ಎಂದರು. ಜೀವ ವಿಜ್ಞಾನ ವಿದ್ಯಾರ್ಥಿಗಳಿಗೆ ಅರಣ್ಯ ಇಲಾಖೆಯಲ್ಲಿ ವಿವಿಧ ಹುದ್ದೆಗಳ ಆಯ್ಕೆಗೆ ಇರುವ ಅವಕಾಶಗಳು ಮತ್ತು ಅಗತ್ಯ ಪ್ರಯತ್ನಗಳ ಬಗ್ಗೆ ವಿವರಿಸಿದರು. ಇಲಾಖೆಯ ವಿವಿಧ ಯೋಜನೆಗಳಲ್ಲಿ ತೊಡಗಿಸಿಕೊಳ್ಳುವ ಬಗ್ಗೆ ಸಲಹೆಗಳನ್ನು ನೀಡಿದರು. ಅವರ ಜೀವನದ ಯಶಸ್ಸಿನ ಹಾದಿಯ ಬಗ್ಗೆ, ಹವ್ಯಾಸಗಳು, ಅರಣ್ಯದ ಜೊತೆಗೆ ಅವರ ಅನುಭವವಗಳನ್ನು ನೆನಪಿಸಿಕೊಂಡರು.


ಗೌರವ ಅತಿಥಿಗಳಾದ ಕಾಲೇಜಿನ ಆಡಳಿತ ಅಧಿಕಾರಿ ಚಂದ್ರಶೇಖರ್ ಪೇರಾಲು ಮಾತನಾಡಿ ಎಲ್ಲಾ ವಿದ್ಯಾರ್ಥಿಗಳು ಶೃದ್ದೆಯಿಂದ ನೇಚರ್ ಕ್ಲಬ್ ನ ಕಾರ್ಯಕ್ರಮಗಳಲ್ಲಿ ಶಿಸ್ತು ಬದ್ಧತೆಯಿಂದ ಭಾಗವಿಸುತ್ತಿರುವುದು ಸಂತಸದ ವಿಚಾರ. ಇಲ್ಲಿ ಗಳಿಸಿದ ಅನುಭವ ನಾಳೆಯ ನಿಮ್ಮ ಹೊಸ ಬದುಕಿನ ದಿನಗಳ ಯಶಸ್ಸಿಗೆ ಪ್ರೇರಣೆಯಾಗಲಿ ಎಂದು ಹಾರೈಸಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ರುದ್ರಕುಮಾರ್ ಎಂ.ಎಂ ವಹಿಸಿದ್ದು ಕ್ಲಬ್ ನ ವಾರ್ಷಿಕ ಕಾರ್ಯಚಟುವಟಿಕೆಗಳನ್ನು ಶ್ಲಾಘಿಸಿ ಬೀಳ್ಕೊಡುತ್ತಿರುವ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.
ನೇಚರ್ ಕ್ಲಬ್ ಸಂಯೋಜಕ ಮತ್ತು ಸಸ್ಯಶಾಸ್ತ್ರ ವಿಭಾಗ ಮುಖ್ಯಸ್ಥರಾದ ಕುಲದೀಪ್ ಪೆಲ್ತಡ್ಕ ಪ್ರಾಸ್ತಾವಿಕ ಮಾತನಾಡಿ, ಕ್ಲಬ್ ನ ಕಾರ್ಯದರ್ಶಿ ಪವಿತ್ರಾಕ್ಷಿ ವಾರ್ಷಿಕ ವರದಿಯನ್ನು ವಾಚಿಸಿದರು. ಕೋಶಾಧಿಕಾರಿ ಮಧಿವಧಿನಿ ವಾರ್ಷಿಕ ಲೆಕ್ಕಪತ್ರ ಮಂಡಿಸಿ ಉಳಿಕೆಯನ್ನು ಕಿರಿಯ ವಿದ್ಯಾರ್ಥಿಗಳಿಗೆ ಹಸ್ತಾಂತರಿಸಿದರು.
ನೇಚರ್ ಕ್ಲಬ್ ಸದಸ್ಯರಾದ ಶಿಲ್ಪಾ ಸ್ವಾಗತಿಸಿ, ಅಕ್ಷತಾ ವಂದಿಸಿದರು. ಯಶಿಕಾ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಅಂತಿಮ ವರ್ಷದ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ದ್ವಿತೀಯ ಮತ್ತು ಪ್ರಥಮ ವರ್ಷದ ವಿದ್ಯಾರ್ಥಿಗಳು ಔಷಧೀಯ ಸಸ್ಯ ಸೀತಾ ಅಶೋಕ ಗಿಡವನ್ನು ನೀಡಿ ಬೀಳ್ಕೊಟ್ಟರು. ಬೀಳ್ಕೊಡುತ್ತಿರುವ ವಿದ್ಯಾರ್ಥಿಗಳು ನೇಚರ್ ಕ್ಲಬ್ ಒದಗಿಸಿದ ಅವಕಾಶಗಳನ್ನು ಮತ್ತು ಅವರ ಸವಿನೆನಪಿನ ಅನುಭವಗಳನ್ನು ಹಂಚಿಕೊಂಡರು. ಕಾರ್ಯಕ್ರಮದ ಯಶಸ್ಸಿಗೆ ಉಪನ್ಯಾಸಕರಾದ ಸಂಜೀವ ಕುತ್ಪಾಜೆ, ಅಕ್ಷತಾ, ಕೃತಿಕಾ, ಭವ್ಯ ರಜತ್, ಅಜಿತ್ ಕುಮಾರ್, ಪಲ್ಲವಿ ಮತ್ತು ಹರ್ಷಿತ್ ಹಾಗೂ ಸಿಬ್ಬಂದಿಗಳಾದ ಶಿವಾನಂದ, ಜಯಂತಿ, ಭವ್ಯ ಮತ್ತು ಗೀತಾ ಹಾಗೂ ಎಲ್ಲಾ ವಿದ್ಯಾರ್ಥಿಗಳು ಸಹಕರಿಸಿದರು.