ಮಡಿಕೇರಿಯಲ್ಲಿ ಟಿ.ಎಂ.ಶಹೀದ್ ಅಭಿನಂದನಾ ಸಮಿತಿ ವತಿಯಿಂದ ಪತ್ರಿಕಾಗೋಷ್ಠಿ

0

ಅರಂತೋಡಿನ ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಟಿ.ಎಂ.ಶಹೀದ್ ತೆಕ್ಕಿಲ್ ಅವರಿಗೆ ಸಾರ್ವಜನಿಕ ಸನ್ಮಾನ ಸಮಾರಂಭವು ಜು‌. 6ರಂದು ಸುಳ್ಯದ ಕೇರ್ಪಳ ಬಂಟರ ಭವನದಲ್ಲಿ ನಡೆಯಲಿದ್ದು, ಈ ಕುರಿತು ಟಿ.ಎಂ.ಶಹೀದ್ ತೆಕ್ಕಿಲ್ ಅಭಿನಂದನಾ ಸಮಿತಿಯ ಅಧ್ಯಕ್ಷ ಸದಾನಂದ ಮಾವಜಿ ಅವರು ಜು.2ರಂದು ಮಡಿಕೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕಾರ್ಯಕ್ರಮವನ್ನು ರಾಜ್ಯ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅವರು ಉದ್ಘಾಟಿಸಲಿದ್ದು, ದ.ಕ. ಜಿಲ್ಲಾ ಉಸ್ತುವಾರಿ ಹಾಗೂ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್ ಅಭಿನಂದನಾ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ.
ವಿಧಾನ ಪರಿಷತ್ತಿನ ಮುಖ್ಯ ಸಚೇತಕ ಸಲೀಂ ಅಹಮ್ಮದ್ ಅವರು 55 ಸೇವಾ ಚಟುವಟಿಕೆಗಳಿಗೆ ಚಾಲನೆ ನೀಡಲಿದ್ದು, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು 55 ಸೇವಾ ಚಟುವಟಿಕೆಯ ಸವಲತ್ತು ವಿತರಿಸಲಿದ್ದಾರೆ. ಅಭಿನಂದನಾ ಸಮಿತಿ ಅಧ್ಯಕ್ಷ ಸದಾನಂದ ಮಾವಜಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಅವರು ಹೇಳಿದರು

ಟಿ.ಎಂ.ಶಹೀದ್ ತೆಕ್ಕಿಲ್ ಅವರನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರು ಸನ್ಮಾನಿಸಲಿದ್ದಾರೆ. ಲಯನ್ಸ್ ಸಂಸ್ಥೆಯ ಎಂಜೆಎಫ್ ಎಂ.ಬಿ.ಸದಾಶಿವ ಅಭಿನಂದನಾ ನುಡಿಗಳನ್ನಾಡಲಿದ್ದಾರೆ. ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ, ಮಡಿಕೇರಿ ಶಾಸಕ ಡಾ.ಮಂತರ್‌ಗೌಡ, ಮಾಜಿ ಸಚಿವ ರಮಾನಾಥ ರೈ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಸದಾನಂದ ಮಾವಜಿ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಟಿ.ಎಂ.ಶಹೀದ್ ತೆಕ್ಕಿಲ್ ಅವರು 2001ರಲ್ಲಿ ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನವನ್ನು ಸ್ಥಾಪಿಸಿ, ಹಲವು ಜನಪರ ಕೆಲಸಗಳನ್ನು ಮಾಡಿದ್ದಾರೆ. 2018ರಲ್ಲಿ ಜೋಡುಪಾಲ ನೆರೆ ಸಂತ್ರಸ್ಥರಿಗೆ ತಮ್ಮ ಮನೆಯಲ್ಲೇ ವಾಸ್ತವ್ಯಕ್ಕೆ ವ್ಯವಸ್ಥೆ ಕಲ್ಪಿಸಿಕೊಟ್ಟಿದ್ದರು. ಅವರಿಗೆ ಅಗತ್ಯ ಸಾಮಗ್ರಿಗಳನ್ನು ನೀಡಿದ್ದರು. ಈ ಸಂತ್ರಸ್ಥರನ್ನು ಮೊದಲು ರಕ್ಷಿಸಿದ 18 ಮಂದಿ ಯುವಕರಿಗೆ ಸಂಸ್ಥೆ ವತಿಯಿಂದ ತೆಕ್ಕಿಲ್ ಎಕ್ಸಲೆನ್ಸ್ ಪ್ರಶಸ್ತಿ ನೀಡಿ ಗೌರವಿಸಿದ್ದರು ಎಂದು ಅವರು ಹೇಳಿದರು.

ಭಾರತೀಯ ಸಂಸ್ಕೃತಿ, ಭ್ರಾತೃತ್ವ, ಶಿಸ್ತು, ಸ್ವಚ್ಛತೆ ಹಾಗೂ ನಾಯಕತ್ವ ಗುಣಗಳನ್ನು ಬೆಳೆಸುವ ಮೌಲ್ಯಾಧಾರಿತ ಶಿಕ್ಷಣ ನೀಡುವ ತೆಕ್ಕಿಲ್ ಸಮೂಹ ಶಿಕ್ಷಣ ಸಂಸ್ಥೆಯನ್ನು ಸಂಪಾಜೆ ಗ್ರಾಮದ ಗೂನಡ್ಕದಲ್ಲಿ ಇವರು ಸ್ಥಾಪಿಸಿದ್ದಾರೆ. ಇಷ್ಟು ಮಾತ್ರವಲ್ಲ ಇನ್ನೂ ಅನೇಕ ಜನಪರ ಕೆಲಸಗಳನ್ನು ಇವರು ಮಾಡುತ್ತಿರುವುದರಿಂದ ಸಾರ್ವಜನಿಕರು ಇವರನ್ನು ಸನ್ಮಾನಿಸಲು ನಿರ್ಧರಿಸಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಟಿ.ಎಂ.ಶಹೀದ್ ತೆಕ್ಕಿಲ್ ಅಭಿನಂದನಾ ಸಮಿತಿಯ ಆಹಾರ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು, ಸಮಿತಿ ಉಪಾಧ್ಯಕ್ಷರಾದ ಇಕ್ಬಾಲ್ ಎಲಿಮಲೆ, ಪರಶುರಾಮ ಚಿಲ್ತಡ್ಕ, ಸಾಮಾಜಿಕ ಜಾಲತಾಣದ ಅಧ್ಯಕ್ಷ ಅಬ್ಬಾಸ್, ಗ್ಯಾರಂಟಿ ಅನುಷ್ಠಾನ ಸಮಿತಿಯ ದಕ್ಷಿಣ ಕನ್ನಡ ಜಿಲ್ಲೆಯ ಅಧ್ಯಕ್ಷ ರಂಜಿತ್ ರೈ ಉಪಸ್ಥಿತರಿದ್ದರು.