ಡಾ. ಉಮ್ಮರ್ ಬೀಜದಕಟ್ಟೆ ವೃತ್ತಿ ಜೀವನದ ಬೆಳ್ಳಿಹಬ್ಬ

0


ಸವಿ ನೆನಪಿಗಾಗಿ 25 ಸಮಾಜಮುಖಿ ಕಾರ್ಯ


ಬೆಂಗಳೂರಿನ ಫಾರ್ಮೆಡ್ ಗ್ರೂಪ್ ಆಫ್ ಕಂಪೆನಿಯ ಉಪಾಧ್ಯಕ್ಷ, ಸಮಾಜ ಸೇವಕ, ಸಂಘಟಕ, ಸಜ್ಜನ ಪ್ರತಿಷ್ಠಾನದ ಸ್ಥಾಪಕ ಡಾ. ಉಮ್ಮರ್ ಬೀಜದಕಟ್ಟೆ ಅವರ ವೃತ್ತಿ ಜೀವನದ ಬೆಳ್ಳಿ ಹಬ್ಬದ ಸವಿನೆನಪಿಗಾಗಿ ೨೫ ಸಮಾಜಮುಖಿ ಕಾರ್ಯಗಳನ್ನು ಸುಳ್ಯ, ಬೆಂಗಳೂರು ಹಾಗೂ ಹೊರರಾಜ್ಯಗಳಲ್ಲಿ ಹಮ್ಮಿಕೊಳ್ಳಲಾಗಿದೆ.
ಡಾ.ಉಮ್ಮರ್ ಬೀಜದಕಟ್ಟೆ ಹಾಗೂ ಸಜ್ಜನ ಪ್ರತಿಷ್ಠಾನದ ಶರೀಫ್ ಜಟ್ಟಿಪಳ್ಳರವರು ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು.


ಬೆಳ್ಳಿಹಬ್ಬದ ಅಂಗವಾಗಿ ವೃತ್ತಿಜೀವನದಲ್ಲಿ ನೆರವಾದ ಹಿರಿಯ ಚೇತನಗಳಿಗೆ ಗೌರವಾರ್ಪಣೆ ಬೆಂಗಳೂರು ಹಾಗೂ ಸುಳ್ಯದಲ್ಲಿ ನಡೆಯಲಿದ್ದು, ಬೀಜದಕಟ್ಟೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಬೀಜದಕಟ್ಟೆ ಮನೆಯಂಗಳದಲ್ಲೊಂದು ದಿನ ಎಂಬ ಕಾರ್ಯಕ್ರಮ ನಡೆಯಲಿದೆ.


ಜುಲೈ ತಿಂಗಳಲ್ಲಿ ವನಮಹೋತ್ಸವ, ಬಿಎಫ್‌ಎ ಸಹಕಾರದೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮ, ಉಚಿತ ತರಬೇತಿ ನಡೆಯಲಿದೆ. ಆಗಸ್ಟ್ ತಿಂಗಳಲ್ಲಿ ಸಜ್ಜನ ಕವಿಗೋಷ್ಠಿ, ಪರವೂರಿನ ಉದ್ಯೋಗಿಗಳಿಗೆ ತರಬೇತಿ, ಮಾದಕ ಮುಕ್ತ ಸಮಾಜ, ಮಾದಕ ವಸ್ತುಗಳ ಸೇವನೆ ಮತ್ತು ದುಷ್ಟರಿಣಾಮಗಳ ಬಗ್ಗೆ ಕಿರುಚಿತ್ರ ಬಿಡುಗಡೆ, ಸೆಪ್ಟಂಬರ್ ತಿಂಗಳಲ್ಲಿ ಪದವಿ ವಿದ್ಯಾರ್ಥಿಗಳಿಗೆ ತರಬೇತಿ ಕಾರ್ಯಗಾರ, ಪ್ರವಾದಿ ಸಂದೇಶ ಹಾಗೂ ದಫ್ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.


ಅಕ್ಟೋಬರ್ ತಿಂಗಳಲ್ಲಿ ಶಿಕ್ಷಕ ತರಬೇತಿ, ಸಜ್ಜನ ಚಿನ್ನರ ಮೇಳ, ಪದವಿ ವಿದ್ಯಾರ್ಥಿಗಳಿಗೆ ಉದ್ಯೋಗ ಮಾಹಿತಿ ಬಗ್ಗೆ ಅರಿವು ಮತ್ತು ಜೀವನ ಕೌಶಲ್ಯ ಕಾರ್ಯಕ್ರಮ, ನವೆಂಬರ್‌ನಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳೊಂದಿಗೆ ಸಂವಾದ, ಕನ್ನಡ ಉಳಿಸಿ, ಬೆಳೆಸಿ ಕಾರ್ಯಕ್ರಮ, ಪೋಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ತರಬೇತಿ ನಡೆಯಲಿದೆ.


ಡಿಸೆಂಬರ್‌ನಲ್ಲಿ ಸಾಂದೀಪ್ ವಿಶೇಷ ಶಾಲೆಯ ಮಕ್ಕಳಿಗಾಗಿ ಕಾರ್ಯಕ್ರಮ, ಪದವಿ ಸಹಪಾಠಿಗಳ ಮಿಲನ ಮತ್ತು ಸಜ್ಜನೋತ್ಸವ, ಸಜ್ಜನ ಸಿರಿ ಪ್ರಶಸ್ತಿ ಪುರಸ್ಕಾರ ನಡೆಯಲಿದೆ. ಜನವರಿಯಲ್ಲಿ ಹೊರರಾಜ್ಯದಲ್ಲಿ ಕನ್ನಡ ಕಂಪು, ಫೆಬ್ರವರಿಯಲ್ಲಿ ಅಂತರ್ಜಾಲ ಆಧಾರಿತ ತರಬೇತಿ, ಭಾವೈಕ್ಯತಾ ಕ್ರೀಡಾಕೂಟ ನಡೆಯಲಿದೆ. ಮಾರ್ಚ್ ಎಪ್ರಿಲ್ ತಿಂಗಳಲ್ಲಿ ಬೆಳ್ಳಿಹಬ್ಬ ಕಾರ್ಯಕ್ರಮದ ಸಮಾರೋಪ ಹಾಗೂ ಅನಿವಾಸಿ ಕನ್ನಡಿಗರ ಸ್ನೇಹಮಿಲನ ದುಬೈಯಲ್ಲಿ ನಡೆಯಲಿದೆ.
ಪತ್ರಿಕಾಗೋಷ್ಠಿಯಲ್ಲಿ ಸಜ್ಜನ ಪ್ರತಿಷ್ಠಾನದ ಮಂಜುನಾಥ ಹಿರಿಯೂರು, ಫೈಝಲ್ ಬೀಜದಕಟ್ಟೆ ಉಪಸ್ಥಿತರಿದ್ದರು.